ಹಾವೇರಿ: ಕ್ಷೀಣವಾಗುತ್ತಿದ್ದ ಕನ್ನಡಕ್ಕೆ ಹೊಸ ಶಕ್ತಿ ತುಂಬಿದ್ದು ಡಾ.ವಿ.ಕೃ.ಗೋಕಾಕರ ಗೋಕಾಕ್ ವರದಿ ಆಧಾರಿತ ಗೋಕಾಕ್ ಚಳವಳಿ ಎಂದು ಹಾವೇರಿ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಸುರೇಶ ಜಂಗಮಶೆಟ್ಟಿ ಹೇಳಿದರು.
ತಾಲೂಕಿನ ಕೆರಿಮತ್ತಿಹಳ್ಳಿಯ ಹಾವೇರಿ ವಿಶ್ವವಿದ್ಯಾಯದಲ್ಲಿ ಡಾ.ವಿ.ಕೃ.ಗೋಕಾಕ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಮತ್ತು ಹಾವೇರಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಡಾ.ವಿ.ಕೃ.ಗೋಕಾಕರ ಕಾವ್ಯದ ನೆಲೆಗಳು ಎಂಬ ವಿಷಯದ ಕುರಿತ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಥಳೀಯ ಮತ್ತು ರಾಜ್ಯಮಟ್ಟದ ಹಲವು ಸಮಸ್ಯೆಗಳ ಮೇಲೆ ಇಂದು ಕನ್ನಡ ಸಂಘಟನೆಗಳು ಹೋರಾಟ ಮಾಡುತ್ತಿವೆ. ಇದಕ್ಕೆ ಮೂಲ ಕಾರಣ ಡಾ.ವಿ.ಕೃ.ಗೋಕಾಕರು ಕೊಟ್ಟ ಕನ್ನಡದ ಶಕ್ತಿ. ಅವರ ಸಾಧನೆಯ ಹಿಂದೆ ದೊಡ್ಡ ಪಯಣವಿದೆ. ಅವರ ವ್ಯಕ್ತಿತ್ವವನ್ನು ಹೊಸ ಪೀಳಿಗೆಗೆ ಪರಿಪೂರ್ಣವಾಗಿ ತಿಳಿಸುವ ಪ್ರಯತ್ನವಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್‌ನ ಅಧ್ಯಕ್ಷ ಡಾ.ಸತೀಶ ಕುಲಕರ್ಣಿ ಮಾತನಾಡಿ, ನವ್ಯಕಾವ್ಯದ ಪ್ರವರ್ತಕರಾದ ಡಾ.ವಿ.ಕೃ.ಗೋಕಾಕರು ಕನ್ನಡ ನವ್ಯಕಾವ್ಯ ಮುಖೇನ ಜೀವಕಳೆ ತಂದವರು. ಮುಂಬರುವ ದಿನಗಳಲ್ಲಿ ಅವರ ಸಮಗ್ರ ಸಾಹಿತ್ಯದ ಅಧ್ಯಯನ ಮೂಲಕ ಹೊಸ ಪೀಳಿಗೆಗೆ ಪರಿಚಯಿಸುವ ಪ್ರಯತ್ನವನ್ನು ಟ್ರಸ್ಟ್ ಮಾಡಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗೋಕಾಕರ ಕಾವ್ಯದ ನೆಲೆಗಳು ಎಂಬ ವಿಚಾರ ಗೋಷ್ಠಿಯಲ್ಲಿ ಎರಡು ಉಪನ್ಯಾಸಗಳು ಜರುಗಿದವು. ಕನ್ನಡ ಅಧ್ಯಯನ ವಿಭಾಗದ ಡಾ.ಪ್ರವೀಣ ಎಚ್., ನವ್ಯಕಾವ್ಯ ಪರಂಪರೆ: ಭಾಷಿಕ ಮೀಮಾಂಸೆ ಎಂಬ ವಿಷಯದ ಮೇಲೆ ಮಾತನಾಡಿದರು. ತಮ್ಮ ಆಧುನಿಕ ಚಿಂತನೆಗಳ ಮೂಲಕ ನವ್ಯಕಾವ್ಯಕ್ಕೆ ಪ್ರವೇಶಿಕೆ ಬರೆದ ಗೋಕಾಕರು ಭಾಷೆ ಮತ್ತು ಭಿನ್ನ ವಸ್ತುಗಳನ್ನು ಕಾವ್ಯಕ್ಕೆ ತಂದು ಹಳೆಯದರಿಂದ ಬಿಡುಗಡೆಗೊಳಿಸಿದ ಕೀರ್ತಿ ಅವರದು. ಅವರ ಭಾಷಿಕ ಮೀಮಾಂಸೆ ಈಗಲೂ ಪ್ರಸ್ತುತ ಎಂದು ಹೇಳಿದರು.
ಗೋಕಾಕರ ಕಾವ್ಯ ಮತ್ತು ಪುರಾಣ ಅನುಸಂಧಾನ ಎಂಬ ವಿಷಯದ ಮೇಲೆ ಲೇಖಕ ಲಿಂಗರಾಜ ಸೊಟ್ಟಪ್ಪನವರ ಮಾತನಾಡಿ, ಪುರಾನವನ್ನು ನಿರಾಕರಿಸದೇ, ವಿಶ್ವಾಮಿತ್ರನನ್ನು ಸರ್ವಕಾಲಿಕವಾಗಿ ಪ್ರಸ್ತುತ ಎನಿಸುವಂತೆ ಕಟ್ಟಿಕೊಟ್ಟವರು ಗೋಕಾಕರು. ನಭೋ ಮಂಡಲದ ಮೇಲೆ ಅಪಾರ ಆಸಕ್ತಿ ಹೊಂದಿದ್ದ ವಿ.ಕೃ.ಗೋಕಾಕರು ಲೋಕದ ವಿಮರ್ಷೆ ಮಾಡಿದ ದೊಡ್ಡ ಕವಿ ಎಂದು ಹೇಳಿ ಅವರ ಊರ್ಣನಾಭ, ಭಾರತ ಸಿಂಧುರಶ್ಮಿ ಮುಂತಾದ ಕಾವ್ಯಗಳ ಉದಾಹರಣೆ ಕುರಿತು ಮಾತನಾಡಿದರು.
ನಂತರ ನಡೆದ ಸಂವಾದದಲ್ಲಿ ಡಾ.ಚಿದಾನಂದ ಕಮ್ಮಾರ, ಚೈತ್ರಾ ಹುಳುಕೆಲ್ಲಪ್ಪನವರ, ಡಾ.ಪುಟ್ಟಸ್ವಾಮಿ, ಡಾ.ರೇಖಾ ಬಿ., ಬಾಳೋಜಿ,ಪ್ರೊ.ಕಿರಣ ಕೆ, ಮುಂತಾದವರು ಪಾಲ್ಗೊಂಡಿದ್ದರು.
ಮೌಲ್ಯಮಾಪನ ಕುಲಸಚಿವೆ ಪ್ರೊ.ರೇಣುಕಾ ಮೇಟಿ, ಟ್ರಸ್ಟ್ ಸದಸ್ಯರಾದ ಪ್ರೊ.ಮಾರುತಿ ಶಿಡ್ಲಾಪೂರ, ಗುರುರಾಜ ನಾಡಿಗೇರ, ಡಾ.ಪುಷ್ಟಾವತಿ ಶಲವಡಿಮಠ, ಮಾಲತೇಶ ಅಂಗೂರ, ಇತರರು ಉಪಸ್ಥಿತರಿದ್ದರು.