ಹಾವೇರಿ ವಿವಿ ರಸ್ತೆ ಸರಿಪಡಿಸಿ, ಬಸ್ ಬಿಡಿಸಿ; ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

Haveri, University, ABVP, Demands, Bus, Road,
Haveri, University, ABVP, Demands, Bus, Road,
Published on
ಹಾವೇರಿ: ಹಾವೇರಿ ಶಹರದಿಂದ ಹಾವೇರಿ ವಿಶ್ವವಿದ್ಯಾಲಯಕ್ಕೆ ಹೆಚ್ಚುವರಿ ಬಸ್ ಸೌಕರ್ಯ ಒದಗಿಸಬೇಕು ಮತ್ತು ತಾಲೂಕಿನ ಹೊಸಳ್ಳಿ ಗ್ರಾಮದಿಂದ ಹಾವೇರಿ ವಿವಿವರೆಗಿನ ರಸ್ತೆ ದುರಸ್ತಿಪಡಿಸಬೇಕು ಎಂದು ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು.
ವಿಶ್ವವಿದ್ಯಾಲಯದ ಎದುರು ರಸ್ತೆ ಸಂಚಾರ ತಡೆದ ನೂರಾರು ವಿದ್ಯಾರ್ಥಿಗಳು ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಕೂಡಲೇ ರಸ್ತೆ ದುರಸ್ತಿಗೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕಾಗಮಿಸಿದ ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್. ಅವರ ಮೂಲಕ ಸ್ಥಳೀಯ ಶಾಸಕ ಬಸವರಾಜ ಶಿವಣ್ಣನವರ ಹಾಗೂ ಸರ್ಕಾರಕ್ಕೆ ಮನವಿ ಪತ್ರ ರವಾನಿಸಿದರು.
ಹಾವೇರಿ ವಿಶ್ವವಿದ್ಯಾಲಯ ಸ್ಥಾಪನೆಯಾಗಿ 3 ವರ್ಷ ಕಳೆದಿದೆ. ಆದರೂ ಇಲ್ಲಿ ಕನಿಷ್ಠ ಮೂಲ ಸೌಕರ್ಯಗಳು ಇಲ್ಲ. ಸಾರಿಗೆ ವ್ಯವಸ್ಥೆ ಸರಿಯಾಗಿಲ್ಲ. ಸ್ವಂತ ದ್ವಿಚಕ್ರ ವಾಹನ ತಂದರೆ ರಸ್ತೆ ಸರಿ ಇಲ್ಲ. ಹೊಸಳ್ಳಿಯಿಂದ ವಿವಿ ಕ್ಯಾಂಪಸ್‌ವರೆಗಿನ ರಸ್ತೆ ಗುಂಡಿಗಳಿಂದ ಕೂಡಿದೆ. ಮಳೆ ಬಂದರೆ ರಸ್ತೆ ತುಂಬ ನೀರು ಹರಿಯುತ್ತದೆ. ವಾಹನ ಸಂಚಾರ ಇರಲಿ, ನಡೆದುಕೊಂಡು ಹೋಗುವುದು ಕೂಡ ಕಷ್ಟಕರವಾಗುತ್ತದೆ. ಶಾಸಕ ಬಸವರಾಜ ಶಿವಣ್ಣನವರ ಸೇರಿದಂತೆ ಸಂಬಂಧಪಟ್ಟವರು ಈ ಕೂಡಲೇ ಸಮಸ್ಯೆ ಬಗೆಹರಿಸಬೇಕು.
ವಿಶ್ವವಿದ್ಯಾಲಯಕ್ಕೆ ಹಾವೇರಿ ಶಹರ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಿಂದ ನೂರಾರು ವಿದ್ಯಾರ್ಥಿಗಳು ತೆರಳುತ್ತಾರೆ. ವಿವಿ ಆರಂಭವಾಗುವ ಮತ್ತು ವಾಪಸ್ ತೆರಳುವ ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ಬಸ್ ಸೌಕರ್ಯ ಒದಗಿಸಬೇಕು. ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಸೌಲಭ್ಯ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಅಭಿಷೇಕ ದೊಡ್ಡಮನಿ, ಹಾವೇರಿ ಕಾರ್ಯದರ್ಶಿ ಸಾಗರ ಪೋಲೀಸ್‌ಗೌಡ್ರ, ವಿಶ್ವವಿದ್ಯಾಲಯಗಳ ಸಹ ಸಂಚಾಲಕಿ ಈಶ್ವರಿ ಬಡಿಗೇರ, ಕಾರ್ತಿಕ ಕಲಾಲ, ಯಶವಂತ ಎ., ಅಖಿಲೇಶ ಬಣ್ಣದ, ರಾಹುಲ ಕುಂಬಾರ, ಸುದೀಪ ಲಮಾಣಿ, ಪ್ರೀತಿ ಬಣಕಾರ, ಸರಸ್ವತಿ ಮಾಯಣ್ಣ, ಕಾವ್ಯಾ ಕನವಳ್ಳಿ, ರಂಜಿತಾ ಎಂ., ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net