ಹಾವೇರಿ: ಜಿಲ್ಲೆಯ ಸವಣೂರ ಪಟ್ಟಣದಲ್ಲಿ ಅಪ್ರಾಪ್ತ ಬಾಲಕ ಬೈಕ್ ಚಲಾಯಿಸಿದ್ದಕ್ಕೆ ನ್ಯಾಯಾಲಯ 25,000 ರೂ. ದಂಡ ವಿಧಿಸಿ ಆದೇಶ ನೀಡಿದೆ.
ಪಟ್ಟಣದಲ್ಲಿ ರಂಜಾನ್ ಹಬ್ಬದ ಸಂದರ್ಭದಲ್ಲಿ 17 ವರ್ಷದ ಬಾಲಕನೊಬ್ಬ ಬೈಕ್‌ನಲ್ಲಿ ಓಡಾಡುತ್ತಿದ್ದ. ಗಸ್ತು ತಿರುಗುವ ವೇಳೆ ಸವಣೂರ ಠಾಣೆ ಪೊಲೀಸರು ಈತನನ್ನು ತಡೆದು ಪರಿಶೀಲಿಸಿದಾಗ ಅಪ್ರಾಪ್ತನೆಂದು ತಿಳಿದಿತ್ತು. ಈ ಕುರಿತು ಕೇಸ್ ದಾಖಲಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಸವಣೂರಿನ ಜೆಎಂಎಫ್‌ಸಿ ನ್ಯಾಯಾಲಯ, ಅಪ್ರಾಪ್ತ ಮಗನಿಗೆ ಬೈಕ್ ನೀಡಿದ ಆರೋಪದಡಿ ಆತನ ತಂದೆಗೆ 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ ಎಂದು ಸವಣೂರ ಪಿಎಸ್‌ಐ ರಂಗನಾಥ ಅಂತರಗಟ್ಟಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.