ಸ್ಥಳೀಯ ಆಸ್ಪತ್ರೆಗಳಲ್ಲೇ ಸೂಕ್ತ ಚಿಕಿತ್ಸೆ ನೀಡಿ; ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸಿ; ಟಿಎಚ್‌ಒಗಳಿಗೆ ಡಿಸಿ ಡಾ.ವಿಜಯಮಹಾಂತೇಶ ಸೂಚನೆ

Haveri, Taluk, Hospital, DC, Meeting,
Haveri, Taluk, Hospital, DC, Meeting,
Published on
ಹಾವೇರಿ: ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ನೀಡಬೇಕು. ಸ್ಥಳೀಯ ಮಟ್ಟದಲ್ಲೇ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುವಂತಾಗಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ(ಟಿಎಚ್‌ಒ)ಗಳಿಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಆರೋಗ್ಯ ಅಭಿಯಾನದ ಪ್ರಗತಿ ಪರಿಶೀಲನಾ ಸಭೆ ಹಾಗೂ ಜಿಲ್ಲಾ ಕಣ್ಗಾವಲು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿವಿಧ ತಾಲೂಕುಗಳ ಆರೋಗ್ಯಾಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಗರ್ಭಿಣಿಯರು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ತಿಳಿವಳಿಕೆ ನೀಡಬೇಕು ಎಂದು ತಿಳಿಸಿದರು.
ತಾಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ಸಣ್ಣಪುಟ್ಟ ಸಮಸ್ಯೆಗಳನ್ನು ತಮ್ಮ ಹಂತದಲ್ಲೇ ಬಗೆಹರಿಸಿಕೊಳ್ಳಬೇಕು. ತಂತ್ರಜ್ಞಾನ ಬಹಳ ಬೆಳೆದಿದೆ, ಅಸಾಧ್ಯವಾಗದ ಕೆಲಸ ಯಾವುದೂ ಇಲ್ಲ. ಕೆಲಸ ಮಾಡುವ ಮನಸ್ಸು ಬೇಕು. ಕಾರಣ ಹೇಳುವುದು ಬಿಟ್ಟು ಕೆಲಸ ಮಾಡುವ ಮನೋಭಾವ ಬೆಳೆಸಿಕೊಳ್ಳಿ. ವೈದ್ಯಕೀಯ ಸೌಲಭ್ಯಗಳ ಸದ್ಬಳಕೆ ಆಗಬೇಕು ಎಂದು ಆರೋಗ್ಯಾಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದರು.
ನೂರಕ್ಕೆ ನೂರು ಗುರಿ ಸಾಧನೆ ಮಾಡಿ:
ಕುಟುಂಬ ಕಲ್ಯಾಣ ಯೋಜನೆಯಡಿ ಪುರುಷರ ಹಾಗೂ ಮಹಿಳಾ ಶಸ್ತ್ರ ಚಿಕಿತ್ಸೆಯನ್ನು ನೂರಕ್ಕೆ ನೂರು ಗುರಿ ಸಾಧನೆ ಮಾಡಬೇಕು. ಅಲ್ಲಲ್ಲಿ ಕ್ಯಾಂಪ್ ಮಾಡಿ ತಿಳಿವಳಿಕೆ ನೀಡಿ ಎಂದು ಸಲಹೆ ನೀಡಿದರು. ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ, ಪ್ರವಸಪೂರ್ವ ಭ್ರೂಣ ಪತ್ತೆ ಕಾರ್ಯಕ್ರಮ, ಕ್ಷಯರೋಗ ಕಾರ್ಯಕ್ರಮದ ಕುರಿತು ಪ್ರಗತಿ ಪ್ರರಿಶೀಲನೆ ನಡೆಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಯಾನಂದ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.75ರಷ್ಟು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಶೇ.25ರಷ್ಟು ಹೆರಿಗೆಗಳು ಆಗುತ್ತಿವೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಡಾ.ಚನ್ನಬಸಯ್ಯ ವಿರಕ್ತಮಠ, ಡಾ.ಸರಿತಾ, ಡಾ.ಜಗದೀಶ ಪಾಟೀಲ, ಡಾ.ನೀಲೇಶ ಎಂ.ಎನ್., ತಾಲೂಕು ಆರೋಗ್ಯಾಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ನಾಯಿ ಕಡಿತಕ್ಕೆ ಶೀಘ್ರ ಚಿಕಿತ್ಸೆ
ಗ್ರಾಮೀಣ ಭಾಗದ ಜನರಿಗೆ ಹಾವು, ನಾಯಿ ಕಡಿತದ ಸಂದರ್ಭದಲ್ಲಿ ವಿಳಂಭ ಮಾಡದೇ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವಂತೆ ಹೆಚ್ಚಿನ ತಿಳಿವಳಿಕೆ ನೀಡಬೇಕು. ಈ ನಿಟ್ಟಿನಲ್ಲಿ ಆಶಾ ಹಾಗೂ ಆರೋಗ್ಯ ಸಹಾಯಕರು ಹೆಚ್ಚಿನ ಕಾಳಜಿಯಿಂದ ಕೆಲಸ ಮಾಡಬೇಕು ಎಂದು ಡಿಸಿ ತಿಳಿಸಿದರು.
ಗರ್ಭಿಣಿಯರ ವಿಶೇಷ ಕಾಳಜಿ ವಹಿಸಿ
ಗರ್ಭಿಣಿ, ಬಾಣಂತಿಯರ ಮಾಹಿತಿಯನ್ನು ವಿಳಂಭಮಾಡದೇ ಪೋರ್ಟಲ್‌ನಲ್ಲಿ ನೋಂದಣಿ ಮಾಡಬೇಕು. ಗಂಭೀರ ಸಮಸ್ಯೆ ಇರುವ ಗರ್ಭಿಣಿಯರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಜಾಗೂ ನಿರಂತರ ನಿಗಾ ವಹಿಸಬೇಕು. ಸಮಸ್ಯೆ ಇದ್ದರೆ ಆಸ್ಪತ್ರೆಯಲ್ಲಿ ಒಳರೊಗಿ ವಿಭಾಗಕ್ಕೆ ದಾಖಲಿಸಿಕೊಂಡು ಅಗತ್ಯ ಚಿಕಿತ್ಸೆ ನೀಡಬೇಕು ಎಂದು ಡಿಸಿ ಸೂಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net