ನಾಯಿ ಕಚ್ಚಿದರೆ ಅಧಿಕಾರಿಯೇ ಹೊಣೆ; ಕೂಡಲೇ ಬೀದಿ ನಾಯಿ, ಜಾನುವಾರು ನಿಯಂತ್ರಿಸಿ; ಅಧಿಕಾರಿಗಳಿಗೆ ಡಿಸಿ ಡಾ.ವಿಜಯಮಹಾಂತೇಶ ಖಡಕ್ ಸೂಚನೆ

DC Meeting
DC Meeting
Published on

ಪ್ರಮುಖ ಮುಖ್ಯಾಂಶಗಳು

  • ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಸರ್ವೋಚ್ಛ ನ್ಯಾಯಾಲಯ ಕಟ್ಟುನಿಟ್ಟಿನ ಆದೇಶ
  • ಜಿಲ್ಲೆಯಲ್ಲಿ ಯಾವುದೇ ನಾಯಿ ಕಡಿತ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಯನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು
  • ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಎಚ್ಚರಿಕೆ
ಹಾವೇರಿ: ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಸರ್ವೋಚ್ಛ ನ್ಯಾಯಾಲಯ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಯಾವುದೇ ನಾಯಿ ಕಡಿತ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಯನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿನ ಬೀದಿ ನಾಯಿಗಳು ಹಾಗೂ ಜಾನುವಾರುಗಳ ನಿಯಂತ್ರಣಕ್ಕಾಗಿ ಇಲಾಖೆಗಳಿಗೆ ಕಾರ್ಯಾದೇಶ ನೀಡಲಾಗಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇಂದಿನಿಂದಲೇ ಕಾರ್ಯಪ್ರವೃತ್ತರಾಗಬೇಕು. ಸ್ಥಳೀಯ ಸಂಸ್ಥೆಯವರು ಈ ಕುರಿತು ಅಲ್ಪಾವಧಿಯಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಜಿಲ್ಲೆಯಲ್ಲಿ ಬೀದಿ ನಾಯಿಗಳ ನಿಯಂತ್ರಣ ಕುರಿತು ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವಂತೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಸಹಾಯವಾಣಿ ಸಂಖ್ಯೆಯ ಸೂಚನಾ ಫಲಕಗಳನ್ನು ಅಳವಡಿಸಿ ಬೀದಿ ನಾಯಿಗಳ ಕಡಿತ, ಅವುಗಳಿಂದಾಗುವ ಉಪಟಳ ಹಾಗೂ ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶ ಉಲ್ಲಂಘನೆಯ ಪ್ರಕರಣ, ಇತ್ಯಾದಿಗಳನ್ನು ಸಾರ್ವಜನಿಕರಿಂದ ಪಡೆದು ನಿಯಮಾನುಸಾರ ಕ್ರಮವಹಿಸಬೇಕು.
ರಾಷ್ಟ್ರ, ರಾಜ್ಯ ಹೆದ್ದಾರಿಗಳಲ್ಲಿ 24/7 ನಿರಂತರ ನಿಗಾವಹಿಸಲು ಹೆದ್ದಾರಿ ಗಸ್ತು ತಂಡಗಳನ್ನು ರಚಿಸಿ, ರಸ್ತೆ ಸಂಚಾರಕ್ಕೆ ಅಡಚಣೆ ಉಂಟುಮಾಡುವ ಬಿಡಾಡಿ ಜಾನುವಾರುಗಳನ್ನು ಸ್ಥಳಾಂತರಿಸಲು ಸ್ಥಳೀಯ ಪೋಲಿಸ್ ಇಲಾಖೆ, ಪಶುಪಾಲನಾ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ನಗರಾಭಿವೃದ್ಧಿ ಇಲಾಖೆ, ಸಾರಿಗೆ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯಿಂದ ಕೂಡಲೇ ಕ್ರಮ ಕೈಗೊಳ್ಳಬೇಕು.
ಸಭೆಯಲ್ಲಿ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಶಿವಯೋಗಿ ಯಲಿ, ಯೋಜನಾ ನಿರ್ದೇಶಕ ಚಂದ್ರಪ್ಪ, ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ.ಜಯಕುಮಾರ ಕಂಕಣವಾಡಿ, ಡಾ.ಕಿರಣಕುಮಾರ ಕೊಪ್ಪದ, ಕ್ರೀಡಾ ಇಲಾಖೆ, ಶಾಲಾ-ಕಾಲೇಜು ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆ, ಜಿಲ್ಲಾ ವೈದ್ಯಕೀಯ ವಿಜ್ಞಾನ ಸಂಸ್ಥೆ, ಅಲ್ಪಸಂಖ್ಯಾತ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು, ಎಲ್ಲ ತಾಲೂಕಿನ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಆಸ್ಪತ್ರೆಗಳಲ್ಲಿ ರೇಬಿಸ್ ಲಸಿಕೆ:
ಎಲ್ಲ ಸಾರ್ವಜನಿಕ ಆಸ್ಪತ್ರೆಗಳಲ್ಲಿ ರೇಬಿಸ್ ಲಸಿಕೆ ಮತ್ತು ಇಮಿನೋಗ್ಲೋಬಿಲಿನ್ ಔಷಧಗಳ ದಾಸ್ತಾನು ಲಭ್ಯ ಇರುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಜಾಗೃತಿ ಮೂಡಿಸಬೇಕು ಎಂದರು ಡಿಸಿ.
ನಿಗದಿತ ಸ್ಥಳದಲ್ಲೇ ಆಹಾರ
ಪ್ರತಿ ವಾರ್ಡ್ ಹಾಗೂ ಪಂಚಾಯ್ತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸಾಂದ್ರತೆಗೆ ಅನುಗುಣವಾಗಿ ಆಹಾರ ವಿತರಣೆಗೆ ಸ್ಥಳಗಳನ್ನು ಗುರುತಿಸಿ. ಅಲ್ಲಿ ಮಾತ್ರ ಆಹಾರ ನೀಡಲು ಅನುಮತಿ ನೀಡಬೇಕು. ನಿಗದಿಪಡಿಸಿದ ಆಹಾರ ವಿತರಣಾ ತಾಣಗಳನ್ನು ಹೊರತುಪಡಿಸಿ ಇತರೆ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಆಹಾರ ಪೂರೈಕೆ ಮಾಡುವುದರಿಂದ ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶ ಉಲ್ಲಂಘನೆಯಾಗುವ ಹಿನ್ನೆಲೆಯಲ್ಲಿ ಅಂತಹ ಪ್ರಕರಣಗಳನ್ನು ವರದಿ ಮಾಡಲು ಒಬ್ಬ ನೋಡಲ್ ಅಧಿಕಾರಿ ನೇಮಿಸಬೇಕು ಎಂದು ಡಿಸಿ ಹೇಳಿದರು.
ಶ್ವಾನಗಳ ಸಂಖ್ಯೆ ಕಲೆ ಹಾಕಿ
ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಆಸ್ಪತ್ರೆಗಳು, ಕ್ರೀಡಾ ಸಂಕೀರ್ಣಗಳು, ಉದ್ಯಾನವನಗಳು, ಬಸ್ ನಿಲ್ದಾಣಗಳು-ಡಿಪೋಗಳು ಮತ್ತು ರೈಲು ನಿಲ್ದಾಣಗಳಂತಹ ಸಂಸ್ಥೆಗಳನ್ನು ಗುರುತಿಸಬೇಕು. ಸಾರ್ವಜನಿಕ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಂಡು ಬರುವ ಬೀದಿ ನಾಯಿಗಳ ನಿಖರವಾದ ಸಂಖ್ಯೆಯನ್ನು ಸಂಬಂಧಪಟ್ಟ ನಗರ, ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ನೀಡಬೇಕು. ಸ್ಥಳೀಯ ಸಂಸ್ಥೆಯವರು ನ.29ರ ಒಳಗಾಗಿ ಬೀದಿ ನಾಯಿಗಳನ್ನು ಹಿಡಿದು ನಿಗದಿಪಡಿಸಿದ ಆಶ್ರಯ ತಾಣಗಳಿಗೆ ಸ್ಥಳಾಂತರಿಸಬೇಕು ಎಂದು ಡಿಸಿ ಸೂಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net