ಯುವನಿಧಿ ಫಲಾನುಭವಿಗಳ ಪಟ್ಟಿಯೇ ಇಲ್ಲ; ಹಣ ಪಡೆದ 1,858 ಅಭ್ಯರ್ಥಿಗಳು ಯಾರೆಂದು ತಿಳಿದಿಲ್ಲ; ಹಾವೇರಿ ತಾಪಂ ಕೆಡಿಪಿ ಸಭೆಯಲ್ಲಿ ಚರ್ಚೆ

Haveri, Speaker, MLA, Rudrappa Lamani, KDP Meeting,
Haveri, Speaker, MLA, Rudrappa Lamani, KDP Meeting,
Published on
ಹಾವೇರಿ: ತಾಲೂಕಿನಲ್ಲಿ 2,099 ಫಲಾನುಭವಿಗಳು ಯುವನಿಧಿ ಯೋಜನೆಯಡಿ ನೋಂದಣಿ ಮಾಡಿಸಿಕೊಂಡಿದ್ದು, ಈ ಪೈಕಿ 1,858 ಫಲಾನುಭವಿಗಳಿಗೆ 5.57 ಲಕ್ಷ ರೂ. ಹಣ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ವರ್ಗಾಯಿಸಲಾಗಿದೆ. ಆದರೆ, ಈ ಫಲಾನುಭವಿಗಳು ಯಾರು ? ಎಂಬುದೇ ತಾಲೂಕಿನ ಅಧಿಕಾರಿಗಳ ಬಳಿ ಮಾಹಿತಿ ಇಲ್ಲ ಎಂದು ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಎಂ.ಎಂ.ಮೈದೂರ ಗರಂ ಆದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಉದ್ಯೋಗ ವಿನಿಮಯ ಕಚೇರಿ ಅಧಿಕಾರಿ ಯುವನಿಧಿ ಕುರಿತು ಸಭೆಗೆ ವಿವರಿಸುವ ಸಂದರ್ಭದಲ್ಲಿ ಮೈದೂರ ಆಕ್ಷೇಪ ವ್ಯಕ್ತಪಡಿಸಿದರು. ಯಾವ ಯಾವ ಫಲಾನುಭವಿಗಳಿಗೆ ಸರ್ಕಾರದಿಂದ ಹಣ ಹಾಕಲಾಗಿದೆ ? ಎಂಬ ಮಾಹಿತಿ ಕೊಡಿ ಎಂದರು. ಆಗ ಅಧಿಕಾರಿಗಳು ನಮ್ಮಲ್ಲಿ ಯುವನಿಧಿ ಫಲಾನುಭವಿಗಳ ಪಟ್ಟಿ ಇಲ್ಲ. ನಾವೂ ಕೂಡ ರಾಜ್ಯ ಗ್ಯಾರಂಟಿ ಸಮಿತಿಗೆ ಫಲಾನುಭವಿ ಪಟ್ಟಿ ಒದಗಿಸುವಂತೆ ಕೋರಿದ್ದು, ಇದುವರೆಗೂ ಕೊಟ್ಟಿಲ್ಲ ಎಂದು ತಿಳಿಸಿದರು.
ಆಗ ಮಧ್ಯ ಪ್ರವೇಶಿಸಿದ ವಿಧಾನಸಭಾಧ್ಯಕ್ಷ ಹಾಗೂ ಶಾಸಕ ರುದ್ರಪ್ಪ ಲಮಾಣಿ, ಸರ್ಕಾರ ಪಾರದರ್ಶಕವಾಗಿ ಗ್ಯಾರಂಟಿಗಳನ್ನು ನೀಡಲು ಆದೇಶಿಸಿದೆ. ಈಗಾಗಲೇ ಗೃಹಲಕ್ಷ್ಮೀ ಯೋಜನೆಯಡಿ ಕೋಟ್ಯಂತರ ರೂ. ಸತ್ತವರ ಖಾತೆಗೆ ಹೋಗಿದೆ. ಯುವನಿಧಿಯೂ ಆ ರೀತಿ ಆಗದಂತೆ ನೋಡಿಕೊಳ್ಳಿ. ಯಾವ ಯಾವ ಫಲಾನುಭವಿಗಳಿಗೆ ಹಣ ಹೋಗಿದೆ ಎಂಬುದರ ಪಟ್ಟಿ ಪಾರದರ್ಶಕವಾಗಿದ್ದರೆ, ಮುಂದೆ ಉದ್ಯೋಗ ಕಲ್ಪಿಸಿಕೊಡಲು ಅನಕೂಲವಾಗುತ್ತದೆ. ಶೀಘ್ರದಲ್ಲಿ ಮಾಹಿತಿ ಒದಗಿಸುವಂತೆ ಸೂಚಿಸಿದರು.
ನರೇಗಾ ಯೋಜನಾಧಿಕಾರಿ ಮಾತನಾಡಿ, ಜುಲೈ 1ರಿಂದ ರಾಜ್ಯದಲ್ಲಿ ವಿಬಿಜಿ ರಾಮ್‌ಜಿ ಯೋಜನೆ ಜಾರಿಯಾಗಲಿದ್ದು, ಇದರೊಂದಿಗೆ ನರೇಗಾ ಯೋಜನೆಯಲ್ಲಿದ್ದ ಕೆಲ ನಿಯಮಗಳಲ್ಲಿ ಬದಲಾವಣೆ ಆಗಲಿವೆ. ಹೊಸ ಯೋಜನೆಯಡಿ ಬಿತ್ತನೆ ಮತ್ತು ಕೊಯ್ಲು ಅವಧಿಯಲ್ಲಿ ತಲಾ 30 ದಿನಗಳಂತೆ ಒಟ್ಟು 60 ದಿನಗಳ ಕಾಲ ಕೆಲಸ ನೀಡುವುದನ್ನು ಸ್ಥಗಿತಗೊಳಿಸಲಾಗುತ್ತದೆ. ಈವರೆಗೆ ನರೇಗಾ ಯೋಜನೆಯಡಿ ಕಾರ್ಮಿಕರು ವರ್ಷದ ಯಾವುದೇ ದಿನ ಕೆಲಸಕ್ಕೆ ಬೇಡಿಕೆ ಸಲ್ಲಿಸಿ ಉದ್ಯೋಗ ಪಡೆಯಬಹುದಾಗಿತ್ತು. ಯೋಜನೆಯಡಿ ಸಕ್ರಿಯ ಕಾರ್ಮಿಕರಿಗೆ ಇ-ಕೆವೈಸಿ ಕಡ್ಡಾಯಗೊಳಿಸಲಾಗಿದ್ದು, ಅನುಷ್ಠಾನದಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ಇದು ಸಹಕಾರಿಯಾಗಲಿದೆ ಎಂದು ವಿವರಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಹಾಗೂ ಡಿಡಿಪಿಐ ಮೋಹನ ದಂಡಿನ, ತಹಸೀಲ್ದಾರ್ ಶರಣಮ್ಮ ಕೆ., ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗೆಣ್ಣಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪರಮೇಶ್ವರ ಹುಬ್ಬಳ್ಳಿ, ಎಂ.ಎಂ.ಮೈದೂರ, ಸ್ಪೀಕರ್ ಪಿಎ ಡಾ.ಶ್ರೀಧರ, ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಬಿಜಿ ರಾಮ್‌ಜಿಯಿಂದ ಆರ್ಥಿಕ ಹೊರೆ
ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ವಿಬಿಜಿ ರಾಮ್‌ಜಿ ಯೋಜನೆ ರಾಜ್ಯ ಸರ್ಕಾರದ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಉಂಟು ಮಾಡಲಿದ್ದು, ಯೋಜನೆಯಲ್ಲಿನ ಹಲವು ಷರತ್ತುಗಳು ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿವೆ ಎಂದು ಶಾಸಕ ರುದ್ರಪ್ಪ ಲಮಾಣಿ ಅಸಮಾಧಾನ ವ್ಯಕ್ತಪಡಿಸಿದರು. ಯೋಜನೆಯಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆರ್ಥಿಕ ಪಾಲುದಾರಿಕೆಯನ್ನು 60:40 ಅನುಪಾತದಲ್ಲಿ ನಿಗದಿಪಡಿಸಿರುವುದರಿಂದ ರಾಜ್ಯದ ಮೇಲಿನ ವೆಚ್ಚದ ಭಾರ ಹೆಚ್ಚಾಗಲಿದೆ. ಯೋಜನೆಯ ಹಲವು ನಿಯಮಗಳನ್ನು ಪರಿಷ್ಕರಿಸುವಂತೆ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ, ಪ್ರಸ್ತುತ ಪರಿಸ್ಥಿತಿಯಲ್ಲಿ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು ಕಷ್ಟಕರವಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕುಡಿವ ನೀರಿನ ಸಮಸ್ಯೆ ತೀವ್ರವಾಗಿಲ್ಲ
ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿ ಪ್ರವೀಣ ಬಿರಾದಾರ ಮಾತನಾಡಿ, ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿಲ್ಲ. ಕೆಲವೆಡೆ ಮಾತ್ರ ಬೋರ್‌ವೆಲ್‌ಗಳನ್ನು ಮರುಕೊರೆಸುವ ಅಗತ್ಯವಿದ್ದು, ಈ ಉದ್ದೇಶಕ್ಕಾಗಿ ಟಾಸ್ಕ್‌ಫೋರ್ಸ್‌ಗೆ 41 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ರುದ್ರಪ್ಪ ಲಮಾಣಿ, ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಹಾವೇರಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಅಷ್ಟೊಂದು ಗಂಭೀರವಾಗಿ ಕಂಡುಬಂದಿಲ್ಲ. ಆದರೆ ತುರ್ತು ಅಗತ್ಯವಿರುವ ಪ್ರದೇಶಗಳ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಬೋರ್‌ವೆಲ್ ಕೊರೆಸಲು ವಿದ್ಯುತ್ ಸಮಸ್ಯೆ ಎದುರಾಗುತ್ತಿರುವ ವಿಷಯವೂ ಸಭೆಯಲ್ಲಿ ಚರ್ಚೆಗೆ ಬಂತು.
ಮಾದರಿ ಅಂಗನವಾಡಿ ನಿರ್ಮಿಸಿ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಡಿಪಿಒ ನೇತ್ರಾವತಿ ಮಾತನಾಡಿ, ತಾಲೂಕಿನಲ್ಲಿ ಒಟ್ಟು 260 ಅಂಗನವಾಡಿ ಕೇಂದ್ರಗಳಿದ್ದು, ಅವುಗಳಲ್ಲಿ 55 ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿವೆ. ಗ್ರಾಮೀಣ ಭಾಗದ 31 ಕೇಂದ್ರಗಳ ಪೈಕಿ 29 ಕೇಂದ್ರಗಳಿಗೆ ಈಗಾಗಲೇ ನಿವೇಶನ ಮಂಜೂರಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಬಿದರಗಡ್ಡಿ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಜಾಗದ ಸಮಸ್ಯೆ ಎದುರಾಗಿದ್ದು, ಸರ್ಕಾರಿ ಜಾಗ ಅತಿಕ್ರಮಣ ಮಾಡಿಕೊಂಡು ದನದ ಕೊಟ್ಟಿಗೆ ನಿರ್ಮಿಸಿರುವ ಕಾರಣ ಕಾಮಗಾರಿ ವಿಳಂಬವಾಗುತ್ತಿದೆ ಎಂದರು. ಆಡಳಿತಾಧಿಕಾರಿ ಪಿಡಿಒಗೆ ಸೂಚಿಸಿ, ಒತ್ತುವರಿ ತೆರವುಗೊಳಿಸಿ ಎಂದು ಸ್ಪೀಕರ್ ಪಿಎ ಡಾ.ಶ್ರೀಧರ ಸೂಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net