ಕನ್ನಡ ಶಾಲೆಗಳ ಉಳಿವಿಗಾಗಿ ಕಟಿಬದ್ಧರಾಗಿ; ಕೋರ್ಟ್ ಮೆಟ್ಟಿಲು ಏರಿದರೂ ನಿಮ್ಮೊಂದಿಗೆ ನಾನಿರುವೆ; ಸಾಹಿತ್ಯ ಸಮ್ಮೇಳನದಲ್ಲಿ ಸಭಾಪತಿ ಹೊರಟ್ಟಿ ಭರವಸೆ

Haveri, Speaker, Basavaraj Horatti, Kannada Sammelana,
Haveri, Speaker, Basavaraj Horatti, Kannada Sammelana,
Published on
ಹಾವೇರಿ: ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಲೇಬೇಕು. ಪ್ರತಿಯೊಂದು ಗ್ರಾಮದಲ್ಲೂ ಕನಿಷ್ಠ 1ರಿಂದ 5ನೇ ತರಗತಿವರೆಗೆ ಕನ್ನಡ ಮಾಧ್ಯಮ ಶಾಲೆ ಇರುವಂತೆ ಸಾರ್ವಜನಿಕರು ನೋಡಿಕೊಳ್ಳಿ. ಶಾಲೆಗಳ ಉಳಿವಿಗಾಗಿ ಕೋರ್ಟ್ ಮೆಟ್ಟಿಲು ಏರಿದರೂ ಸರಿಯೇ, ನಾನು ನಮ್ಮೊಂದಿಗೆ ಇರುತ್ತೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಭರವಸೆ ನೀಡಿದರು.
ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗದ ವತಿಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಎರಡನೇ ರಾಜ್ಯಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ತಾಯಂದಿರು, ಪಾಲಕರು ತಮ್ಮ ಮಕ್ಕಳನ್ನು ಕೆಪಿಎಸ್ ಶಾಲೆಗೆ ಕಳುಹಿಸಲೇಬೇಡಿ. ಕನ್ನಡ ಭಾಷೆ ಅಳಿವು ಉಳಿವು ನಮ್ಮ ಕೈಯಲ್ಲಿದೆ. ನಾವೆಲ್ಲರೂ ಒಗ್ಗಟ್ಟಿನಿಂದ ಕನ್ನಡ ಶಾಲೆಗಳನ್ನು ಬಂದ್ ಮಾಡಿಸಲು ಬಿಡಬಾರದು. ಕನ್ನಡ ಶಾಲೆಗೆ ಬಂದ್ ಮಾಡುವ ಕೆಲಸಕ್ಕೆ ಯಾರೇ ಮುಂದಾದರೂ ಸಹಿಸಬಾರದು. ಕನ್ನಡಪರ ಸಂಘಟನೆಗಳು ಇದನ್ನು ಪ್ರಶ್ನಿಸಿ ಕೋರ್ಟ್‌ಗೆ ಕೇಸ್ ಹಾಕಿಸಬೇಕು. ನಿಮ್ಮ ಪರವಾಗಿ ನಾನು ಇರುತ್ತೇನೆ ಎಂದರು.
ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡವನ್ನು ಆಡಳಿತ ಭಾಷೆಯಾಗಿ ಹಾಗೂ ಭಾರತದ ಶಾಸ್ತ್ರೀಯ ಭಾಷೆಯಾಗಿ ಗುರುತಿಸಲಾಗಿದೆ. ಕನ್ನಡಕ್ಕಾಗಿ ಎಷ್ಟೋ ಜನ ಮಹನೀಯರು ತಮ್ಮ ಜೀವವನ್ನೇ ಕೊಟ್ಟಿದ್ದಾರೆ. ಆದರೂ ನಮಗೆ ಕನ್ನಡ ಭಾಷೆಯ ಬಗ್ಗೆ ಅಭಿಮಾನವಿಲ್ಲ. ತಮಿಳುನಾಡಿನಲ್ಲಿ ತಮಿಳು, ಮಹಾರಾಷ್ಟ್ರದಲ್ಲಿ ಮರಾಠಿ ಬೋರ್ಡ್‌ಗಳಿವೆ. ಆಯಾ ರಾಜ್ಯಗಳಲ್ಲಿ ಭಾಷಾಭಿಮಾನ ಬಹಳ ಇದೆ. ಆದರೆ, ಅಲ್ಲಿರುವ ಅಭಿಮಾನ ನಮ್ಮ ಕನ್ನಡಿಗರಿಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಶೇ.23ರಷ್ಟು ಜನ ಮಾತ್ರ ಕನ್ನಡ ಭಾಷೆ ಮಾತನಾಡುತ್ತಾರೆ. ಬೆಳಗಾವಿಯಲ್ಲಿ ಬಹುತೇಕ ಜನ ಮರಾಠಿ ಮಾತನಾಡುತ್ತಾರೆ. ಅಲ್ಲಿಯ ಶಾಸಕರು ಸಹ ಮರಾಠಿ ಮಾತನಾಡುವುದು ವಿಪರ್ಯಾಸ. ವಿಧಾನ ಪರಿಷತ್ ಕಚೇರಿಯಲ್ಲಿ ಎಲ್ಲರೂ ಕಡ್ಡಾಯವಾಗಿ ಕನ್ನಡವನ್ನೇ ಮಾತನಾಡಬೇಕು ಎಂಬ ಆದೇಶ ಹೊರಡಿಸಿದ್ದೇನೆ ಎಂದರು.
ವಿವಿಧ ಸಾಹಿತಿಗಳ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು. ಕವಿಗೋಷ್ಠಿಗಳು ಜರುಗಿದವು. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ಜಿಪಂ ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ, ಬಳಗದ ಜಿಲ್ಲಾಧ್ಯಕ್ಷೆ ಚಂಪಾ ಹುಣಸಿಕಟ್ಟಿ, ಡಾ.ಜಿ.ಎಚ್ ಇಮ್ರಾಪುರ, ಜಿ.ಎಂ ಮುಂದಿನಮನಿ, ರವಿ ದಂಡಿನ, ನಿಂಗಪ್ಪ ಚಾವಡಿ, ಉಡಚಪ್ಪ ಮಾಳಗಿ, ಬಸವರಾಜ ಹೆಡಿಗ್ಗೊಂಡ, ರವೀಂದ್ರ ಮುದ್ದಿ, ಮಂಜುಳಾ ಅಕ್ಕಿ, ಸೋಮಣ್ಣ ಡೊಂಬರಮತ್ತೂರ, ಅಕ್ಕಮಹಾದೇವಿ ನೀರಲಗಿ, ಬಾಲಚಂದ್ರ ಹೆಗಡೆ, ಎಸ್.ಎಲ್ ಕಾಡದೇವರಮಠ, ಸಂಜಯಗಾಂಧಿ ಸಂಜೀವಣ್ಣವರ, ನಾಗರಾಜ ಎಚ್., ಎಫ್.ಎಚ್ ಕೊರವರ, ವೈ.ಬಿ ಲಕ್ಷ್ಮಣ, ಲೀಲಾವತಿ ಪಾಟೀಲ, ಕುಮಾರ ತಳವಾರ, ಇತರರು ಉಪಸ್ಥಿತರಿದ್ದರು.
ಅದ್ಧೂರಿ ಮೆರವಣಿಗೆ
ನಗರದ ವಾಲ್ಮೀಕಿ ವೃತ್ತದಿಂದ ಅಂಬೇಡ್ಕರ್ ಭವನದವರೆಗೆ ಸಾರೋಟಿನಲ್ಲಿ ಸಮ್ಮೇಳನಾಧ್ಯಕ್ಷರ ಅದ್ಧೂರಿ ಮೆರವಣಿಗೆ ನಡೆಯಿತು. ಡಿಎಸ್‌ಎಸ್ ರಾಜ್ಯ ಸಂಚಾಲಕ ಎಸ್.ಫಕ್ಕೀರಪ್ಪ ಚಾಲನೆ ನೀಡಿದರು. ವಿ.ಎಸ್ ಪಾಟೀಲ, ಸತೀಶ ಕುಲಕರ್ಣಿ, ವಿರೂಪಾಕ್ಷಪ್ಪ ಕೊರಗಲ್ಲ ಇದ್ದರು. ಈ ವೇಳೆ ವಿವಿಧ ಕಲಾ ತಂಡಗಳು ಗಮನ ಸೆಳೆದವು.
"

ರಾಜ್ಯದ ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಕಲಿಯಬೇಕು. ಮನೆಯಲ್ಲಿ ಕನ್ನಡ ಭಾಷೆಯನ್ನು ಹೆಚ್ಚು ಹೆಚ್ಚು ಬಳಸುವ ಮೂಲಕ ಭಾಷೆ ಉಳಿಸಿ, ಬೆಳೆಸಬೇಕು. ಜಿಲ್ಲೆಯಲ್ಲಿ ಅನೇಕ ಸಾಹಿತಿಗಳು ಇದ್ದು, ಹಾವೇರಿ ಜಿಲ್ಲೆ ಶ್ರೀಮಂತವಾದ ಸಾಹಿತ್ಯ ಹೊಂದಿದೆ. ಇಂತಹ ನಾಡಿನಲ್ಲಿ ಹುಟ್ಟಿದ್ದು ನನ್ನ ಪುಣ್ಯ. ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿರುವುದು ನನ್ನ ಸುಧೈವ.

— ಜಿ.ಎಂ ಓಂಕಾರಣ್ಣನವರ, ಸಮ್ಮೇಳನದ ಸರ್ವಾಧ್ಯಕ್ಷ


"

ಸರ್ಕಾರಿ, ಅನುದಾನಿತ, ಅನುದಾನ ರಹಿತ ಕನ್ನಡ ಮಾಧ್ಯಮ ಶಾಲೆಗಳು ರಾಜ್ಯದಲ್ಲಿ ಉಳಿಯಲೇಬೇಕು. ಕನ್ನಡ ಶಾಲೆಗಳು ಮುಚ್ಚಲು ಬಿಡಬಾರದು. ಪ್ರತಿಯೊಬ್ಬರ ಮನೆ ಮನಗಳಲ್ಲಿ ಕನ್ನಡದ ದೀಪ ಹಚ್ಚಬೇಕು. ಕನ್ನಡವೇ ಉಸಿರು, ಕನ್ನಡವೇ ಹಸಿರಾಗಬೇಕು.

— ಎಸ್.ಡಿ ಮುಡೆಣ್ಣವರ, ಅಧ್ಯಕ್ಷ, ಕರುನಾಡ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಬಳಗ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net