ಕರ್ತವ್ಯಲೋಪ ಆರೋಪ, ಐವರು ಪೊಲಿಸರು ಅಮಾನತು; ದೇವಿಹೊಸೂರ ಇಸ್ಪೀಟ್ ದಂಧೆ, ಶಿಗ್ಗಾಂವಿ ಖಾಕಿ ಧರಿಸಿ ಮದ್ಯ ಸೇವನೆ ಪ್ರಕರಣ

Haveri, SP, Ordered, Suspend, 5 Police Constables,
Haveri, SP, Ordered, Suspend, 5 Police Constables,
Published on
ಹಾವೇರಿ: ಕರ್ತವ್ಯಲೋಪ ಆರೋಪದಡಿ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯ ಓರ್ವ ಪೊಲೀಸ್ ಕಾನ್‌ಸ್ಟೆಬಲ್ ಸೇರಿದಂತೆ ಐವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಆದೇಶಿಸಿದ್ದಾರೆ.
ಹಾವೇರಿ ತಾಲೂಕು ದೇವಿಹೊಸೂರ ಗ್ರಾಮದ ಸಂತೆ ಮೈದಾನದ ಬಯಲು ಜಾಗದಲ್ಲಿ ಏ.28ರಂದು ಸಂಜೆ ಹಲವು ಜನ ಸೇರಿ ಇಸ್ಪೀಟ್ ಜೂಜಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಡಿಸಿಆರ್‌ಬಿ ತಂಡದ ಅಧಿಕಾರಿ, ಸಿಬ್ಬಂದಿ ದಾಳಿ ನಡೆಸಿದ್ದರು. ನಾಗರಾಜ ಬೆಲಗೂರ ಸೇರಿ 8 ಜನರನ್ನು ಬಂಧಿಸಿ, 5,525 ರೂ. ನಗದು ,4 ಬೈಕ್ ವಶಕ್ಕೆ ಪಡೆದಿದ್ದರು.
ಹಾವೇರಿ ಗ್ರಾಮೀಣ ಠಾಣೆ ಪೊಲೀಸರ ನಿರ್ಲಕ್ಷೃದಿಂದ ಗ್ರಾಮದಲ್ಲಿ ಇಸ್ಪೀಟ್ ಅಡ್ಡೆ ರಾಜಾರೋಷವಾಗಿ ನಡೆಯುತ್ತಿತ್ತು ಎಂಬ ಆರೋಪಗಳು ಕೇಳಿ ಬಂದಿದ್ದವು. ಹೀಗಾಗಿ, ಕರ್ತವ್ಯ ಲೋಪದ ಆರೋಪದಡಿ ಗ್ರಾಮದ ಬೀಟ್ ಪೊಲೀಸ್ ಮಹಮ್ಮದ್ ಷರೀಫ್ ಎಸ್ ಯರೆಕೊಪ್ಪಿ ಎಂಬುವರನ್ನು ಅಮಾನತು ಮಾಡಲಾಗಿದೆ. ಇಸ್ಪೀಟ್ ದಂಧೆಗೆ ಸಾಥ್ ನೀಡಿದ ಆರೋಪವೂ ಇದೆ.
ಶಿಗ್ಗಾಂವಿಯ ಸಮೀಪದ ಡಾಬಾ ಒಂದರಲ್ಲಿ ನಾಲ್ವರು ಪೊಲೀಸರು ಇತ್ತೀಚೆಗೆ ಖಾಕಿ ಸಮವಸ್ತ್ರ ಧರಿಸಿ, ಕರ್ತವ್ಯದ ವೇಳೆ ಮದ್ಯ ಸೇವಿಸಿದ್ದ ವಿಡಿಯೋ ಒಂದು ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಕರ್ತವ್ಯಲೋಪದ ಆರೋಪದಡಿ ಶಿಗ್ಗಾಂವಿ ಪೊಲೀಸ್ ಠಾಣೆಯ ಒಬ್ಬ ಹಾಗೂ ಬಂಕಾಫುರ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಿ ಎಸ್‌ಪಿ ಯಶೋಧಾ ವಂಟಗೋಡಿ ಆದೇಶಿಸಿದ್ದಾರೆ.
ಪಿಎಸ್‌ಐಗೆ ನೋಟಿಸ್
ಹಾವೇರಿ ತಾಲೂಕು ದೇವಿಹೊಸೂರ ಗ್ರಾಮದ ಇಸ್ಪೀಟ್ ಕೇಸ್‌ಗೆ ಸಂಬಂಧಿಸಿದಂತೆ ಸಮಗ್ರವಾಗಿ ಉತ್ತರಿಸುವಂತೆ ಗ್ರಾಮೀಣ ಠಾಣೆ ಪಿಎಸ್‌ಐ ರವಿಕುಮಾರ್‌ಗೆ ನೋಟಿಸ್ ನೀಡಿದ್ದಾಗಿ ಎಸ್‌ಪಿ ತಿಳಿಸಿದ್ದಾರೆ.
"

ಕರ್ತವ್ಯ ಲೋಪ ಆರೋಪದ ಆಧಾರದ ಮೇಲೆ ಐವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿ, ಇಲಾಖಾ ತನಿಖೆಗೆ ಆದೇಶಿಸಲಾಗಿದೆ.

— ಯಶೋಧಾ ವಂಟಗೋಡಿ, ಎಸ್‌ಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net