ಶೇ.100ರಷ್ಟು ಎನುಮರೇಷನ್ ವಿತರಣೆ; ಶೇ.72.89ರಷ್ಟು ಗಣಕೀಕರಣ, ರಾಜ್ಯಕ್ಕೆ 2ನೇ ಸ್ಥಾನ; ಎಸ್‌ಐಆರ್ ವಿವಿಧ ಪಕ್ಷಗಳ ಸಭೆಯಲ್ಲಿ ಡಿಸಿ ಮಾಹಿತಿ

Haveri, SIR, DC, All Party, Meeting,
Haveri, SIR, DC, All Party, Meeting,
Published on
ಹಾವೇರಿ: ಭಾರತ ಸರ್ಕಾರದಿಂದ ಹಮ್ಮಿಕೊಂಡಿರುವ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲಿ ಶೇ.100ರಷ್ಟು ಎನುಮರೇಷನ್ ನಮೂನೆ ವಿತರಣೆ ಮಾಡಲಾಗಿದ್ದು, ಶೇ.72.89ರಷ್ಟು ಗಣಕೀಕರಣ ಪೂರ್ಣಗೊಂಡಿದೆ. ಗಣಕೀರಣದಲ್ಲಿ ಜಿಲ್ಲೆ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದರು.
ನಗರದ ಹೊರವಲಯ ದೇವಗಿರಿಯ ಜಿಲ್ಲಾಧಿಕಾರಿಯವರ ಕಚೇರಿಯ ಕೋರ್ಟ್ ಹಾಲ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚುನಾವಣಾ ಆಯೋಗದ ಮಾರ್ಗಸೂಚಿ ಅನ್ವಯ ಕಾರ್ಯ ನಿರ್ವಹಿಸಲಾಗುತ್ತಿದೆ. ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಎಲ್ಲ ಮತಗಟ್ಟೆಗಳ ಬೂತ್ ಮಟ್ಟದ ಅಧಿಕಾರಿಗಳ (ಬಿ.ಎಲ್‌ಒ) ಮನೆ ಮನೆ ಭೇಟಿ ಆಗಸ್ಟ್ 8ರವರೆಗೆ ನಡೆಯಲಿದೆ ಎಂದರು.
ಜಿಲ್ಲೆಯಲ್ಲಿ ಈವರೆಗೆ 13,35,342 ಮತದಾರರಿದ್ದು, ನೂರಕ್ಕೆ ನೂರಷ್ಟು ಎನುಮರೇಷನ್ ನಮೂನೆ ವಿತರಣೆ ಮಾಡಲಾಗಿದೆ. 9,73,373 (ಶೇ.72.89)ಗಣಕೀಕರಣ ಮಾಡಲಾಗಿದೆ. ಈವರೆಗೆ 8,200 ಮರಣ, 200 ಸಂಗ್ರಹವಾಗದ/ ಗೈರು, 7,032 ಶಾಶ್ವತ ವಲಸೆ, 3,542 ದ್ವಿಪ್ರತಿ ಹಾಗೂ ಇತರೆ 28 ಸೇರಿ 19,002 ವಿವರಗಳನ್ನು ಕಲೆ ಹಾಕಲಾಗಿದೆ ಎಂದರು.
ವೋಟರ್ ಸ್ಪೆಷಲಿಸ್ಟ್ ಸೆಂಟರ್:
ಪ್ರತಿ ಮತಗಟ್ಟೆಯಲ್ಲಿ ವೋಟರ್ ಸ್ಪೆಷಲಿಸ್ಟ್ ಸೆಂಟರ್ ತರಯಲಾಗಿದೆ. ಎನುಮರೇಷನ್ ಫಾರ್ಮ ಭರ್ತಿ ಸೇರಿದಂತೆ ವಿವಿಧ ಮಾಹಿತಿ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್., ಚುನಾವಣಾ ತಹಸೀಲ್ದಾರ್ ಅಮೃತಗೌಡ ಪಾಟೀಲ, ಮಾಜಿ ಶಾಸಕರಾದ ಶಿವರಾಜ ಸಜ್ಜನರ, ವಿರುಪಾಕ್ಷಪ್ಪ ಬಳ್ಳಾರಿ, ರಾಜಕೀಯ ಪಕ್ಷದ ಮುಖಂಡರಾದ ಸಂಜೀವಕುಮಾರ ನೀರಲಗಿ, ಇತರರು ಉಪಸ್ಥಿತರಿದ್ದರು.
ಪರಿಷ್ಕೃತ ವೇಳಾಪಟ್ಟಿ
ಬಿಎಲ್‌ಒ ಮನೆ ಮನೆ ಭೇಟಿ ಜೂನ್ 30ರಿಂದ ಆಗಸ್ಟ್ 8ರವರೆಗೆ, ಮತಗಟ್ಟೆಗಳ ತರ್ಕಬದ್ಧಗೊಳಿಸುವಿಕೆ/ ಮರು ಜೋಡಣೆ ಕಾರ್ಯ ಆಗಸ್ಟ್ 8ರಿಂದ, ಕರಡು ಮತದಾರರ ಪಟ್ಟಿಯ ಪ್ರಕಟಣೆ ಆ.17ರಿಂದ, ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಅವಧಿ ಆ.17ರಿಂದ ಸೆ.16ರವರೆಗೆ, ಹಕ್ಕು ಮತ್ತು ಆಕ್ಷೇಪಣೆಗಳ ಸೂಚನೆ ಹಂತ/ವಿಲೇವಾರಿ ಆ.17ರಿಂದ ಅಕ್ಟೋಬರ್ 15ರವರೆಗೆ ನಡೆಯಲಿದೆ. ಅಂತಿಮ ಮತದಾರರ ಪಟ್ಟಿ ದಿನಾಂಕ ಅಕ್ಟೋಬರ್ 19ರಂದು ಪ್ರಕಟಣೆಯಾಗಲಿದೆ ಎಂದು ಡಿಸಿ ವಿವರಿಸಿದರು.
ಮನೆ ಮನೆ ಭೇಟಿ ಕಡ್ಡಾಯ
ಯಾವುದೇ ಧಾರ್ಮಿಕ ಸ್ಥಳ, ಸಮುದಾಯ ಭವನ, ಕಲ್ಯಾಣ ಮಂಟಪದಲ್ಲಿ ಮತದಾರರನ್ನು ಒಗ್ಗೂಡಿಸಿ ವಿತರಣೆ ಅಥವಾ ಸಂಗ್ರಹಣೆ ಮಾಡಲು ಅವಕಾಶವಿರುವುದಿಲ್ಲ. ಆಗಸ್ಟ್ 8ರವರೆಗೆ ಬೂತ್ ಮಟ್ಟದ ಅಧಿಕಾರಿಗಳು(ಬಿಎಲ್‌ಒ) ಮನೆ ಮನೆಗೆ ಭೇಟಿ ನೀಡಲಿದ್ದಾರೆ. ರಾಜಕೀಯ ಪಕ್ಷದಿಂದ ನೇಮಕಗೊಂಡ ಬಿಎಲ್‌ಎಗಳು ಒಂದು ವೇಳೆ ಬದಲಾವಣೆಯಾದಲ್ಲಿ ಅಂದೇ ಸಂಬಂಧಿಸಿದ ಮತದಾರರ ನೋಂದಣಾಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಡಿಸಿ ಸೂಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net