ಶಬರಿಮಲೆ ಯಾತ್ರಿಕರೇ ಎಚ್ಚರವಹಿಸಿ

Shabarimale yatra
Shabarimale yatra
Published on

ಪ್ರಮುಖ ಮುಖ್ಯಾಂಶಗಳು

  • ಕೇರಳ ರಾಜ್ಯದಲ್ಲಿ ಮಿದುಳು ತಿನ್ನುವ ಅಮೀಬಾ
  • ಅಮೀಬಾದಿಂದ ಉಂಟಾಗುವ ಅಮೀಬಿಕ್ ಮೆನಿಂಗೊ ಎನ್ಸೆಫಲೈಟಿಸ್ ಪ್ರಕರಣಗಳು ಹೆಚ್ಚಾಗುತ್ತಿವೆ
  • ರಾಜ್ಯ, ಜಿಲ್ಲೆಯಿಂದ ಶಬರಿಮಲೆಗೆ ತೆರಳುವ ಯಾತ್ರಿಕರು ತಮ್ಮ ಆರೋಗ್ಯದ ಬಗ್ಗೆ ಜಾಗರೂಕತೆ ವಹಿಸುವಂತೆ ಆರೋಗ್ಯ ಆಯುಕ್ತಾಲಯ ಸೂಚನೆ
ಹಾವೇರಿ: ಕೇರಳ ರಾಜ್ಯದಲ್ಲಿ ಮಿದುಳು ತಿನ್ನುವ ಅಮೀಬಾ(ನೇಗ್ಲೇರಿಯಾ ಫೌಲೇರಿ)ದಿಂದ ಉಂಟಾಗುವ ಅಮೀಬಿಕ್ ಮೆನಿಂಗೊ ಎನ್ಸೆಫಲೈಟಿಸ್ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ, ರಾಜ್ಯ, ಜಿಲ್ಲೆಯಿಂದ ಶಬರಿಮಲೆಗೆ ತೆರಳುವ ಯಾತ್ರಿಕರು ತಮ್ಮ ಆರೋಗ್ಯದ ಬಗ್ಗೆ ಜಾಗರೂಕತೆ ವಹಿಸುವಂತೆ ಮತ್ತು ಸೋಂಕು ತಡೆಯಲು ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲ ಸೂಚನೆ ನೀಡಿದೆ.
ನೇಗ್ಲೇರಿಯಾ ಫೌಲೇರಿ ಎಂಬುದು ಒಂದು ಸ್ವತಂತ್ರವಾಗಿ ಬದುಕುವ ಅಮೀಬಾ ಆಗಿದ್ದು, ಇದು ಮುಖ್ಯವಾಗಿ ಬೆಚ್ಚಗಿನ ಸಿಹಿನೀರು ಹಾಗೂ ಮಣ್ಣಿನಲ್ಲಿ ಕಂಡುಬರುತ್ತದೆ. ಉದಾಹರಣೆಗೆ ನಿಂತ ನೀರು, ಕೊಳ, ಈಜು ಕೊಳಗಳು ಹಾಗೂ ಕೆರೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಅಥವಾ ಕಲುಷಿತಗೊಂಡ ನೀರನ್ನು ಕುಡಿಯುವುದರಿಂದ ಹರಡುವುದಿಲ್ಲ. ನೇಗ್ಲೇರಿಯಾ ಫೌಲರಿ ಅತ್ಯಂತ ವಿಷಕಾರಿ ಸೂಕ್ಷ್ಮಜೀವಿಯಾಗಿದ್ದು, ನೀರಿನಿಂದ ಮೂಗಿಗೆ ಪ್ರವೇಶಿಸಿದಾಗ ಅದು ಮೆದುಳನ್ನು ತಲುಪಿ, ಅಮೀಬಿಕ್ ಮೆನಿಂಗೊಎನ್ಸೆಫಲೈಟಿಸ್ ಎನ್ನುವ ಅಪರೂಪದ ಗಂಭೀರ ಮತ್ತು ಮಾರಣಾಂತಿಕ ಖಾಯಿಲೆ ಉಂಟುಮಾಡುತ್ತದೆ. ಆದ್ದರಿಂದ ಯಾತ್ರೆಯ ಸಂದರ್ಭದಲ್ಲಿ ನಿಂತ ನೀರಿನಲ್ಲಿ ಸ್ನಾನ ಮಾಡುವಾಗ ನೀರು ಪ್ರವೇಶಿಸದಂತೆ ಮೂಗಿನ ಕ್ಲಿಪ್‌ಗಳನ್ನು ಬಳಸಿ ಅಥವಾ ನಿಮ್ಮ ಮೂಗನ್ನು ಬಿಗಿಯಾಗಿ ಮುಚ್ಚಿ ಹಿಡಿದು ಮುನ್ನೆಚ್ಚರಿಕೆ ವಹಿಸುವುದು ಸೂಕ್ತ. ನೀರಿನ ಸಂಪರ್ಕದ ಏಳು ದಿನಗಳ ಒಳಗೆ ಜ್ವರ ತೀವು ತಲೆನೋವು, ವಾಕರಿಕೆ, ವಾಂತಿ, ಕುತ್ತಿಗೆ ಬಿಗಿತ, ಗೊಂದಲ, ಮಾನಸಿಕ ಸ್ಥಿತಿಗಳಲ್ಲಿ ಬದಲಾವಣೆಗಳು ಹಾಗೂ ವ್ಯಕ್ತಿಯ ವರ್ತನೆಯಲ್ಲಿ ಅಸ್ವಸ್ಥತೆಯ ಲಕ್ಷಣಗಳು ಕಾಣಿಸಿಕೊಂಡರೆ ಕೂಡಲೇ ಹತ್ತಿರದ ಸರ್ಕಾರಿ ಆಸ್ಪತ್ರೆ ಅಥವಾ ವೈದ್ಯರನ್ನು ಸಂಪರ್ಕಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net