ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಸಮಗ್ರ ತನಿಖೆ ನಡೆಸಿ; ಎನ್‌ಟಿಎ ರದ್ದುಗೊಳಿಸಲು ವಿದ್ಯಾರ್ಥಿಗಳ ಆಗ್ರಹ

Haveri, SFI, NEET, Exam, Papers, Leakage, Protest,
Haveri, SFI, NEET, Exam, Papers, Leakage, Protest,
Published on
ಹಾವೇರಿ: ಮೇ 3ರಂದು ದೇಶಾದ್ಯಂತ ನಡೆದ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದರಿಂದ, ಈ ಪರೀಕ್ಷೆಯನ್ನೇ ರದ್ದುಗೊಳಿಸಿ ವಿದ್ಯಾರ್ಥಿಗಳ ಜೀವನದ ಜತೆಗೆ ಚೆಲ್ಲಾಟ ಆಡುತ್ತಿರುವ ಕೇಂದ್ರ ಸರ್ಕಾರದ ನಡೆಯನ್ನು ವಿದ್ಯಾರ್ಥಿಗಳು ಖಂಡಿಸಿದರು. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ಜರಿಗಿಸುವಂತೆ ಆಗ್ರಹಿಸಿದರು.
ನಗರದ ಮೈಲಾರ ಮಹದೇವಪ್ಪ ವೃತ್ತದಲ್ಲಿ ಬುಧವಾರ ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನ್ಯಾಶನಲ್ ಟೆಸ್ಟ್ ಏಜೆನ್ಸಿ (ಎನ್‌ಟಿಎ) ರದ್ದುಪಡಿಸಲು ಆಗ್ರಹಿಸಿದರು.
ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಮಾತನಾಡಿ, ದೇಶದಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ವೈದ್ಯಕೀಯ ಮತ್ತು ಇತರೆ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ರಾಷ್ಟ್ರ ಮಟ್ಟದಲ್ಲಿ ನಡೆಸುವ ನೀಟ್ ಪರೀಕ್ಷೆಗೆ ಹಾಜರಾಗಿದ್ದರು. ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆ ಏಕಾಏಕಿ ಆ ಪರೀಕ್ಷೆಯನ್ನೇ ರದ್ದುಪಡಿಸಲಾಗಿದೆ. ಇದರಿಂದಾಗಿ ಎನ್‌ಟಿಎ ಪರೀಕ್ಷೆಯ ನಡವಳಿಕೆಯ ಬಗ್ಗೆ ಹಾಗೂ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಪಾರದರ್ಶಕತೆಯನ್ನು ಪ್ರಶ್ನಿಸುವ ಹಲವಾರು ದೂರುಗಳು ದೇಶಾದ್ಯಂತ ಬರುತ್ತಿವೆ. ಈ ಸಂಸ್ಥೆ ಪ್ರವೇಶ ಪರೀಕ್ಷೆ ನಡೆಸಲು ಅಸಮರ್ಥ ಮತ್ತು ಅನರ್ಹವಾಗಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇದರಿಂದ ವಿದ್ಯಾರ್ಥಿಗಳು ಎದುರಿಸಬೇಕಾದ ಮಾನಸಿಕ ಒತ್ತಡ ಮತ್ತು ತೊಂದರೆಗಳಿಗೆ ಕೇಂದ್ರ ಸರ್ಕಾರವೇ ಹೊಣೆಯಾಗುತ್ತದೆ ಎಂದು ದೂರಿದರು.
ಒಟ್ಟು 720 ಅಂಕಗಳಲ್ಲಿ ಸುಮಾರು 600 ಅಂಕಗಳ ಪ್ರಶ್ನೆಗಳು ಸೋರಿಕೆಯಾಗಿದ್ದು, ಇದು ಪರೀಕ್ಷೆಯ ಪಾವಿತ್ರ್ಯತೆಗೆ ಧಕ್ಕೆ ತಂದಿದೆ. ಪರೀಕ್ಷೆಯ 180 ಪ್ರಶ್ನೆಗಳಲ್ಲಿ ಸುಮಾರು 15 ಪ್ರಶ್ನೆಗಳನ್ನು ಸಂಭಾವ್ಯ ಪ್ರಶ್ನೆ ಪತ್ರಿಕೆಯ ಹೆಸರಿನಲ್ಲಿ ಮೊದಲೇ ವಿತರಿಸಲಾಗಿತ್ತು ಮತ್ತು ರಸಾಯನಶಾಸ್ತ್ರ ವಿಭಾಗದ ಸುಮಾರು 120 ಪ್ರಶ್ನೆಗಳು ಇದ್ದಕ್ಕಿದ್ದಂತೆ ಸೋರಿಕೆಯಾಗಿವೆ ಎಂದು ವರದಿಯಾಗಿದೆ ಎಂದರು.
ರಾಜಸ್ಥಾನ ಸೇರಿದಂತೆ ವಿವಿಧೆಡೆ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮಗಳು ನಡೆದ ಆರೋಪಗಳು ಕೇಳಿಬರುತ್ತಿವೆ ಅಕ್ರಮ ನಡೆದ ಪ್ರದೇಶಗಳಲ್ಲಿ ಕಟ್ಟುನಿಟ್ಟಾದ ಕ್ರಮವನ್ನು ತೆಗೆದುಕೊಳ್ಳಲಾಗದೆ. ಎಮ್ಮೆಗೆ ಜ್ವರ ಬಂದರೆ ಎತ್ತಿಗೆ ಬರೆ ಎಳೆದರಂತೆ ಹಾಗೆ ಆಗಿದೆ. ಯಾರೋ ಮಾಡಿದ ತಪ್ಪಿಗೆ ವಿದ್ಯಾರ್ಥಿಗಳಿಗೆ ಮಾನಸಿಕ ಹಿಂಸೆ ನೀಡುತ್ತಿರುವುದು ಸರಿಯಲ್ಲ. ವೈದ್ಯಕೀಯ ಕ್ಷೇತ್ರದಲ್ಲಿ ರಾಜ್ಯ ಆಧಾರಿತ ಪ್ರವೇಶ ಪರೀಕ್ಷೆ ಪದ್ಧತಿಯನ್ನು ಬದಲಾಯಿಸಲು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹೇಳಲಾಗಿತ್ತು. ಈಗ ನೀಟ್-ಯುಜಿಗೆ ಸಂಬಂಧಿಸಿದಂತೆಯೂ ಇದೇ ಆರೋಪ ಸಾಬೀತಾಗಿದೆ. ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಮಿತಿ ರಚನೆ ಮಾಡಿ ತನಿಖೆ ಮಾಡಿಸಬೇಕು ಎಂದು ಒತ್ತಾಐಇಸಿದರು.
ಅರುಣ ನಾಗಾವತ ಮಾತನಾಡಿ, ನಿಟ್ ಪರೀಕ್ಷೆಯಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಲಕ್ಷಾಂತರ ರೂಪಾಯಿ ಸುರಿಯುವ ಮೂಲಕ ಉನ್ನತ ಶೈಕ್ಷಣಿಕ ಸೌಲಭ್ಯವುಳ್ಳ ಅಭ್ಯರ್ಥಿಗಳ ಜತೆಗೆ ಪೈಪೋಟಿ ನಡೆಸಿ ಸೀಟು ಗಿಟ್ಟಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.
ಪ್ರತಿಭಟನೆಯಲ್ಲಿ ಕೃಷ್ಣಾ ನಾಯ್ಕ, ರಘು ಅಂಗಡಿ, ಶಶಿಕಲಾ ದೊಡ್ಡಮನಿ, ನಂದಾ ಎಚ್.ಕೆ., ಸಿಂಚನಾ ಮಲ್ಲಣ್ಣನವರ, ಶಶಿಕಲಾ ಎಂ., ಸರಸ್ವತಿ ತಳವಾರ, ಲಲಿತಾ ಪೂಜಾರ, ತೇಜಸ್ವಿನಿ ಮಳಾಪುರ, ಭಾಗ್ಯಶ್ರೀ ಪಾಟೀಲ, ದೀಕ್ಷಾ ಬಂಕಾಪುರ, ಮಧು ವರದಿ, ಸೃಷ್ಟಿ ದೇವಗಿರಿ, ಫರ್ಹಾನ್ ಧಾರದವರ್, ಸುನೀಲ ಟಿ., ಮನೋಜ ಚೌಡಮ್ಮನವರ, ನಂಜುಂಡಿ ಸುಡಂಬಿ, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net