ಸಮಿಷ್ಠಿ ಪ್ರಜ್ಞೆ ಮೈಗೂಡಿಸಿಕೊಂಡಿರುವ ಸತೀಶ ಕುಲಕರ್ಣಿ; ಸನ್ಮಾನ ಸಮಾರಂಭದಲ್ಲಿ ಸಾಹಿತಿ ಡಾ.ಶ್ರೀಪಾದ ಶೆಟ್ಟಿ ಅಭಿಮತ

satish kulakarni sanman
satish kulakarni sanman
Published on
ಹಾವೇರಿ: ಬರೆದಂತೆ ಬದುಕಿದ, ಸಮಿಷ್ಠಿ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿರುವ ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಐವತ್ತು ವರ್ಷಗಳ ಹಿಂದೆ ಕಪ್ಪು ನೆಲದ ಕೆಂಪು ಕಾವ್ಯದ ಮೂಲಕ ಪ್ರಸಿದ್ಧರಾದವರು. ಬೆಂಕಿಯನ್ನು ಬೆಳದಿಂಗಳಾಗಿಸುವ ಸಾಮರ್ಥ್ಯದ ಕವಿ ಎಂದು ಸಾಹಿತಿ ಡಾ.ಶ್ರೀಪಾದ ಶೆಟ್ಟಿ ಹೇಳಿದರು.
ನಗರದ ಕಸಾಪ ಸಾಹಿತ್ಯ ಭವನದಲ್ಲಿ ಮಂಗಳವಾರ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಆಯೋಜಿಸಿದ್ದ ಧಾರವಾಡದ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನಿಂದ ಕೊಡುವ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ಸತೀಶ ಕುಲಕರ್ಣಿ ಅವರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಜಾನಪದ ತಜ್ಞ ಶಂಭು ಬಳಿಗಾರ ಮಾತನಾಡಿ, ಹಾವೇರಿ ನೆಲದ ಅಸ್ಮಿತೆಯಾಗಿರುವ ಸತೀಶ ತಾವು ಮಾತ್ರ ಬೆಳೆಯದೇ ಮಹಾವೃಕ್ಷವಾಗಿ ಅನೇಕರನ್ನು ಬೆಳೆಸುತ್ತಿದ್ದಾರೆ. ವಿದ್ಯಾರ್ಥಿ ದೆಸೆಯಿಂದ ಕ್ರಿಯಾಶೀಲರಾಗಿ ತೊಡಗಿಸಿಕೊಂಡಿರುವ ಸತೀಶ ಈಗಲೂ ಅನೇಕರಿಗೆ ಮಾದರಿಯಾಗಿದ್ದಾರೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ಈವರೆಗೆ ರಾಜ್ಯ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದ ಸತೀಶ ಅವರಿಗೆ ರಾಷ್ಟ್ರೀಯ ಪುರಸ್ಕಾರ ಲಭಿಸಿದ್ದು ವಿಶೇಷವಾಗಿದೆ ಎಂದರು.
ಸಮಾರಂಭದಲ್ಲಿ ಕಸಾಪದಿಂದ ಸತೀಶ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.
ಪ್ರಮುಖರಾದ ವಿಜಯಕುಮಾರ ಮುದಕಣ್ಣನವರ, ವೈ.ಬಿ.ಆಲದಕಟ್ಟಿ, ಎಸ್.ಎನ್.ದೊಡ್ಡಗೌಡರ, ಡಾ.ಗೀತಾ ಸುತ್ತಕೋಟಿ, ರೇಣುಕಾ ಗುಡಿಮನಿ, ಶಂಕರ ಸುತಾರ, ನೇತ್ರಾ ಅಂಗಡಿ, ಎನ್.ಬಿ.ಕಾಳೆ, ಈರಣ್ಣ ಬೆಳವಡಿ, ಎ.ಬಿ.ಗುಡ್ಡಳ್ಳಿ, ಮಾಲತೇಶ ಮರಿಗೂಳಪ್ಪನವರ, ಎಸ್.ಆರ್.ಹಿರೇಮಠ, ಪೃಥ್ವಿರಾಜ ಬೆಟಗೇರಿ, ಶಂಕರ ಬಡಿಗೇರ, ಇತರರಿದ್ದರು.
ಕೋಟ್:
ದ.ರಾ.ಬೇಂದ್ರೆ ಮತ್ತು ಕುವೆಂಪು ಕನ್ನಡ ನಾಡಿನ ಎರಡು ಕಣ್ಣುಗಳು. ಇವರ ಪ್ರಭಾವಲಯದಲ್ಲಿಯೇ ನಾವೆಲ್ಲ ಬೆಳೆದವರು. ಬೇಂದ್ರೆ ಎಲ್ಲ ಕಾಲಕ್ಕೂ ನಿಲುಕದ ಕವಿ. ಅವರ ಹೆಸರಿನಲ್ಲಿ ನೀಡಲಾಗುವ ಈ ಪ್ರಶಸ್ತಿ ನನಗೆ ಅತ್ಯಂತ ಅಮೂಲ್ಯವಾದದ್ದು.
ಸತೀಶ ಕುಲಕರ್ಣಿ, ಹಿರಿಯ ಸಾಹಿತಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net