ಜಿಲ್ಲೆಯ ಮೊದಲ ಕ್ಯಾತ್ ಲ್ಯಾಬ್ ಉದ್ಘಾಟನೆ 12ರಂದು; ಸರ್ಜಿ ರೇಣುಕಾ ದೇವಧರ ಆಸ್ಪತ್ರೆಯಲ್ಲಿ ಕಾರ್ಯಾಚರಣೆ; ಹೃದಯ ಕಾಯಿಲೆಗಳಿಗೆ ತ್ವರಿತ ಚಿಕಿತ್ಸೆ ಸೌಲಭ್ಯ; ಡಾ.ಮಧು ಕೆ.ಆರ್.

Haveri, Sarji Renuka Devadhar Hospital, Cath Lab, Dr.Madhu KR,
Haveri, Sarji Renuka Devadhar Hospital, Cath Lab, Dr.Madhu KR,
Published on
ಹಾವೇರಿ: ಜಿಲ್ಲೆಯಲ್ಲೇ ಮೊದಲ ಬಾರಿಗೆ ಹೃದಯ ಸಂಬಂಧಿ ಕಾಯಿಲೆಗಳಿಗೆ ಅತ್ಯಾಧುನಿಕ ಹಾಗೂ ತ್ವರಿತ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ನಗರದ ಸರ್ಜಿ ರೇಣುಕಾ ದೇವಧರ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಕ್ಯಾತ್ ಲ್ಯಾಬ್ ಜು.12ರಂದು ಬೆಳಗ್ಗೆ 9 ಗಂಟೆಗೆ ಉದ್ಘಾಟನೆಯಾಗಲಿದೆ ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಮಧು ಕೆ.ಆರ್. ತಿಳಿಸಿದರು.
ಜಿಲ್ಲೆಯ ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಹೊಸದೊಂದು ಮೈಲಿಗಲ್ಲು ನಿರ್ಮಾಣವಾಗುತ್ತಿದ್ದು, ಜಿಲ್ಲೆಯ ಜನತೆಗೆ ಗುಣಮಟ್ಟದ ಹಾಗೂ ತುರ್ತು ಆರೋಗ್ಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲೇ ಮೊಟ್ಟ ಮೊದಲ ಬಾರಿಗೆ ಕ್ಯಾತ್ ಲ್ಯಾಬ್‌ಗೆ ಚಾಲನೆ ನೀಡಲಾಗುತ್ತಿದ್ದು, ಗಣ್ಯರಿಂದ ಉದ್ಘಾಟನೆಯಾಗಲಿದೆ ಎಂದರು.
ಹೃದಯಾಘಾತ ಸಂಭವಿಸಿದ ‘ಗೋಲ್ಡನ್ ಅವರ್’ನಲ್ಲಿ ರೋಗಿಗೆ ಸೂಕ್ತ ಚಿಕಿತ್ಸೆ, ಅಂದರೆ ಆಂಜಿಯೋಗ್ರಾಮ್ ಅಥವಾ ಆಂಜಿಯೋಪ್ಲಾಸ್ಟಿ (ಸ್ಟೆಂಟ್ ಅಳವಡಿಕೆ) ಚಿಕಿತ್ಸೆ ದೊರೆತರೆ, ಆತನ ಪ್ರಾಣ ಉಳಿಸುವ ಸಾಧ್ಯತೆ ಶೇ.90ರಷ್ಟು ಇರುತ್ತದೆ. ಆದರೆ, ಹಾವೇರಿ ಜಿಲ್ಲೆಯಲ್ಲಿ ಈವರೆಗೆ ಕ್ಯಾತ್ ಲ್ಯಾಬ್ ಸೌಲಭ್ಯ ಇರಲಿಲ್ಲ. ಈ ಕಾರಣದಿಂದಾಗಿ, ಹೃದಯಾಘಾತಕ್ಕೆ ಒಳಗಾದ ರೋಗಿಗಳನ್ನು ತುರ್ತಾಗಿ ಪಕ್ಕದ ಜಿಲ್ಲೆಯ ಹುಬ್ಬಳ್ಳಿ ಅಥವಾ ದಾವಣಗೆರೆಗೆ ಕರೆದೊಯ್ಯಬೇಕಾದ ಅನಿವಾರ್ಯತೆ ಇತ್ತು ಎಂದರು.
ಈ ಪ್ರಯಾಣದ ಅವಧಿಯಲ್ಲಿ ರಸ್ತೆ ಸಂಚಾರದ ವಿಳಂಬದಿಂದಾಗಿ ‘ಗೋಲ್ಡನ್ ಅವರ್’ ಮೀರಿಹೋಗಿ, ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೇ ಜಿಲ್ಲೆಯಲ್ಲಿ ನೂರಾರು ಜನರು ಸಾವನ್ನಪ್ಪಿರುವ ನಿದರ್ಶನಗಳಿವೆ. ಈ ಕೊರತೆಯನ್ನು ನೀಗಿಸಲು ಮತ್ತು ಹಾವೇರಿಯ ಜನತೆಗೆ ಸ್ಥಳೀಯವಾಗಿಯೇ ಅತ್ಯಂತ ಕಡಿಮೆ ವೆಚ್ಚದಲ್ಲಿ ಶ್ರೇಷ್ಠ ದರ್ಜೆಯ ಹೃದಯ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲು ಈ ಕ್ಯಾತ್‌ಲ್ಯಾಬ್ ಸೇವೆ ಆರಂಭಿಸುತ್ತಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ಹೃದ್ರೋಗ ತಜ್ಞವೈದ್ಯ ಡಾ.ದೀಪಕಕುಮಾರ ಎ., ಡಾ.ರಾಘವಾಂಕ, ಗುಡ್ಡಪ್ಪ ಎಸ್.ಎ., ಪ್ರವೀಣಕುಮಾರ ಸಿ. ಇತರರಿದ್ದರು.
24/7 ಸೇವೆ ಲಭ್ಯ
ಸರ್ಜಿ ಕ್ಯಾತ್‌ಲ್ಯಾಬ್ ದಿನದ 24 ಗಂಟೆಗಳ ಕಾಲ ತುರ್ತು ಹೃದಯ ಚಿಕಿತ್ಸೆ ಒದಗಿಸಲು ಸಜ್ಜಾಗಿದೆ. ನುರಿತ ಹೃದ್ರೋಗ ತಜ್ಞರಾದ ಡಾ.ದೀಪಕಕುಮಾರ ತಂಡ ಹೃದಯಾಘಾತವಾದ ರೋಗಿಗೆ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ತಪಾಸಣೆ ನಡೆಸಿ, ಆಂಜಿಯೋಗ್ರಾಮ್ ಮತ್ತು ಆಂಜಿಯೋಪ್ಲಾಸ್ಟಿ ಚಿಕಿತ್ಸೆಯನ್ನು ತ್ವರಿತವಾಗಿ ನೀಡುತ್ತದೆ. ಇದರಿಂದ ಹೊರ ಜಿಲ್ಲೆಗಳಿಗೆ ಅಲೆಯುವುದು ತಪ್ಪುತ್ತದೆ. ಜತೆಗೆ ಹಣದ ಉಳಿತಾಯವಾಗುತ್ತದೆ. ಅಮೂಲ್ಯವಾದ ಜೀವವೂ ಉಳಿಯುತ್ತದೆ. ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುವುದು ನಮ್ಮ ಉದ್ದೇಶ ಎಂದು ಡಾ.ಮಧು ತಿಳಿಸಿದರು.
ಎದೆನೋವು ಕಂಡರೆ ಇಸಿಜಿ ಮಾಡಿಸಿ
ಮದ್ಯಪಾನ, ಧೂಮಪಾನ, ತಂಬಾಕು ಸೇವನೆ, ಅತಿಯಾದ ಬೊಜ್ಜು, ಒತ್ತಡದ ಬದುಕು, ಕೌಟುಂಬಿಕ ಇತಿಹಾಸ, ಮತ್ತಿತರ ಕಾರಣಗಳಿಂದ ಹೃದಯಸಂಬಂಧೀ ಕಾಯಿಲೆಗಳು ಕಾಡುತ್ತಿವೆ. 25ರಿಂದ 35 ವರ್ಷದ ಯುವಜನರೂ ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ಆತಂಕದ ವಿಷಯ. ಇದರಿಂದ ವಿಮುಖರಾಗಲು ನಿಯಮಿತವಾದ ವ್ಯಾಯಾಮ, ಕ್ರಮಬದ್ಧವಾದ ಆಹಾರ ಸೇವನೆ ಮುಖ್ಯ. ಎದೆನೋವು ಕಾಣಿಸಿಕೊಂಡರೆ ಸಮೀಪದ ಆಸ್ಪತ್ರೆಗೆ ತೆರಳಿ ಇಸಿಜಿ ಮಾಡಿಸಿ. ಇಸಿಜಿಯಲ್ಲಿ ಹೃದಯದ ಸಮಸ್ಯೆ ಇದ್ದರೆ ತಿಳಿಯುತ್ತದೆ. ಹೃದಯದ ರಕ್ತನಾಳಗಳಲ್ಲಿ ಶೇ.70ಕ್ಕಿಂತ ಹೆಚ್ಚು ಬ್ಲಾಕ್ ಇದ್ದರೆ ಸ್ಟಂಟ್ ಅಳವಡಿಸಲಾಗುತ್ತದೆ ಎಂದು ಡಾ.ಮಧು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net