ಸಹಕಾರಿ ಸಂಘಗಳನ್ನು ಬಲವರ್ಧನೆಗೊಳಿಸುವ ಅಗತ್ಯವಿದೆ; ವಿ.ಪ. ಮುಖ್ಯ ಸಚೇತಕ ಸಲೀಂ ಅಹ್ಮದ್ ಸಲಹೆ ; ಕಾಡಾ ವತಿಯಿಂದ ರೈತ ಸದಸ್ಯರಿಗೆ ತರಬೇತಿ ಕಾರ್ಯಕ್ರಮ

 sahakari sangha,
sahakari sangha,
Published on
ಹಾವೇರಿ: ಸಹಕಾರ ಸಂಘಗಳನ್ನು ಬಲವರ್ಧನೆಗೊಳಿಸಿದರೆ ಮಾತ್ರ ಅವುಗಳು ಪ್ರತಿಯೊಬ್ಬ ರೈತ ಸದಸ್ಯರಿಗೂ ಸಹಕಾರಿ ಆಗುವಂತೆ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಕಾಡಾ) ವತಿಯಿಂದ ನೀರು ಬಳಕೆದಾರರ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ರೈತ ಸದಸ್ಯರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂತಹ ನೀರು ಬಳಕೆದಾರರ ಸಹಕಾರ ಸಂಘಗಳನ್ನು ಹೆಚ್ಚು ಉತ್ತೇಜಿಸಬೇಕು. ಆಗ ಸರ್ಕಾರದ ಯೋಜನೆಗಳನ್ನು ಯಶಸ್ವಿಯಾಗುವಂತೆ ಮಾಡಬಹುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ರುದ್ರಪ್ಪ ಲಮಾಣಿ ಮಾತನಾಡಿ, ಬಯಲು ಸೀಮೆಯ ಈ ಭಾಗದ ಸಂಘಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಚಟುವಟಿಕೆಗಳನ್ನು ಕೈಗೊಂಡು, ಅಚ್ಚುಕಟ್ಟು ಪ್ರದೇಶದ ಕೊನೆಯ ಅಂಚಿನ ರೈತ ಸದಸ್ಯರಿಗೂ ಕೂಡ ನೀರಾವರಿ ಸೌಲಭ್ಯಗಳನ್ನು ಒದಗಿಸಬೇಕು ಹಾಗೂ ಸಂಘಗಳು ಹೆಚ್ಚಿನ ಪ್ರಗತಿಯನ್ನು ಸಾಧಿಸಬೇಕು ಎಂದು ಹೇಳಿದರು.
ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ, ಸಹಕಾರ ಸಂಘಗಳನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಕಳೆದ ಸಾಲಿಗಿಂತಲೂ ಈ ಬಾರಿ 180 ನೀರು ಬಳಕೆದಾರರ ಸಹಕಾರ ಸಂಘಗಳನ್ನು ಕಾರ್ಯನಿರತಗೊಳಿಸಲಾಗಿದೆ. ಇವುಗಳಲ್ಲಿ 150 ನೀರು ಬಳಕೆದಾರರ ಸಹಕಾರ ಸಂಘಗಳು ವಾರ್ಷಿಕ ಕಾರ್ಯಾನುದಾನ ಪಡೆಯಲಿವೆ ಹಾಗೂ ಉಳಿದ 30 ಸಂಘಗಳಿಗೆ ಅವುಗಳ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದಲ್ಲಿ ಉಪಯೋಗಿಸುವಂತೆ ಕೃಷಿ ಯಂತ್ರೋಪಕರಣಗಳನ್ನು ನೀಡಲಾಗುತ್ತಿದೆ. ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.
ಭೂ ಅಭಿವೃದ್ಧಿ ಅಧಿಕಾರಿ ಡಾ.ನಾಗೇಶ ಡೋಂಗರೆ ಮಾತನಾಡಿ, ಈ ತರಬೇತಿಯಲ್ಲಿ ತುಂಗಾ ಮೇಲ್ಕಂಡ ಯೋಜನೆಯ ವ್ಯಾಪ್ತಿಯಲ್ಲಿನ ನೀರು ಬಳಕೆದಾರರ ಸಹಕಾರ ಸಂಘಗಳನ್ನು ಪುನಃಶ್ಚೇತನಗೊಳಿಸಿ, ಅವುಗಳು ಸವಾರ್ಂಗೀಣ ಪ್ರಗತಿಯನ್ನು ಸಾಧಿಸಲು ಸಂಘಗಳಲ್ಲಿ ಲೆಕ್ಕಪತ್ರಗಳ ನಿರ್ವಹಣೆ, ದೈನಂದಿನ ಆಡಳಿತ, ಅಚ್ಚುಕಟ್ಟು ವ್ಯಾಪ್ತಿಯ ರೈತ ಸದಸ್ಯರಲ್ಲಿ ನೀರು ನಿರ್ವಹಣೆಯಲ್ಲಿ ರೈತರ ಸಹಭಾಗಿತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದೆ ಎಂದರು. ಸಹಕಾರ ಸಂಘಗಳ ವಾರ್ಷಿಕ ಲೆಕ್ಕಪರಿಶೋಧನೆ ಮತ್ತು ವಾರ್ಷಿಕ ಸರ್ವ ಸದಸ್ಯರ ಸಭೆ, ಚುನಾವಣೆ ಪ್ರಕ್ರಿಯೆ ಮುಂತಾದವುಗಳನ್ನು ನಿರ್ವಹಿಸುವ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲೆಯ ಹಾವೇರಿ ತಾಲೂಕಿನ 18 ಕಾರ್ಯನಿರತ ನೀರು ಬಳಕೆದಾರರ ಸಹಕಾರ ಸಂಘಗಳಿಗೆ ತಲಾ ಒಂದು ಲಕ್ಷ ರೂ. ಕಾರ್ಯಾನುದಾನ ಮತ್ತು 10 ಸಂಘಗಳಿಗೆ ಕೃಷಿ ಯಂತ್ರೋಪಕರಣವನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಭದ್ರಾ ಕಾಡಾ ಆಡಳಿತಾಧಿಕಾರಿ ಸತೀಶ ಆರ್., ಭೂ ಅಭಿವೃದ್ಧಿ ಅಧಿಕಾರಿ (ತಾಂತ್ರಿಕ) ಹಾಗೂ ಭೂ ಅಭಿವೃದ್ಧಿ ಅಧಿಕಾರಿ (ಕೃಷಿ)(ಪ) ಉಪಆಡಳಿತಾಧಿಕಾರಿ (ಪು), ಕೆ.ಪ್ರಶಾಂತ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಮಂಜುನಾಥ ಎಸ್.ಇ., ಸಹಾಯಕ ನಿರ್ದೇಶಕ ನಾಗೇಂದ್ರ ರಾವ್ ವೈ. ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net