ಹಾವೇರಿ: ತಾಲೂಕಿನ ದೇವಿಹೊಸೂರಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಸಭಾಂಗಣದಲ್ಲಿ ಗುರು ಪೂರ್ಣಿಮೆಯನ್ನು ಭಕ್ತಿ ಹಾಗೂ ಶ್ರದ್ಧೆಯಿಂದ ಆಚರಿಸಲಾಯಿತು. ವೇದಗಳು ಮತ್ತು ಪುರಾಣಗಳ ಮಹಾನ್ ಜ್ಞಾನವನ್ನು ಲೋಕಕ್ಕೆ ನೀಡಿದ ಮಹರ್ಷಿ ಶ್ರೀ ವೇದವ್ಯಾಸರನ್ನು ಸ್ಮರಿಸಿ ಗೌರವಿಸಲಾಯಿತು.
ಎಂಟನೇ ತರಗತಿಯ ವಿದ್ಯಾರ್ಥಿ ಆಯುಷ್ ಭಾಷಣದಲ್ಲಿ ಮಾತನಾಡಿ, ಗುರುಗಳ ಮಹತ್ವ, ಅವರ ಆಶೀರ್ವಾದದ ಮಹಿಮೆ ಹಾಗೂ ಶ್ರೀ ವೇದವ್ಯಾಸ ಜಯಂತಿಯನ್ನು ವ್ಯಾಸ ಪೂರ್ಣಿಮೆಯಾಗಿ ಆಚರಿಸುವ ಮಹತ್ವದ ಕುರಿತು ಅರ್ಥಪೂರ್ಣವಾಗಿ ವಿವರಿಸಿದರು.
ಆಂಗ್ಲ ಭಾಷಾ ಶಿಕ್ಷಕ ಶರಣಪ್ಪ ಗುರೂಜಿ ಮಾತನಾಡಿ, ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠ ಶಾಲೆ. ತಾಯಿಯ ಮಹತ್ವ ಮತ್ತು ಗುರುವಿನ ಮಹತ್ವವನ್ನು ತಿಳಿಸಿಕೊಟ್ಟರು.
ರಾಷ್ಟ್ರಗೀತೆ ಹಾಗೂ ವಂದೇ ಮಾತರಂ ಗೀತೆ ಹಾಡುವ ಮೂಲಕ ಕಾರ್ಯಕ್ರಮ ಸಮಾಪ್ತಿಯಾಯಿತು.
ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಪ್ರಾಂಶುಪಾಲೆ ಶ್ಯಾಮಲಾ ಮಾತಾಜಿ, ಶಾಲೆಯ ಆಡಳಿತಾಧಿಕಾರಿ ರಾಘವೇಂದ್ರ ಪಾಟೀಲ, ಶಿಕ್ಷಕರು, ವಿದ್ಯಾರ್ಥಿಗಳು, ಇತರರು ಉಪಸ್ಥಿತರಿದ್ದರು.