24ರಿಂದ ರೈತರಿಂದ ಅಹೋರಾತ್ರಿ ಧರಣಿ; ಮೆಕ್ಕೆಜೋಳಕ್ಕೆ 3 ಸಾವಿರ ರೂ. ಬೆಂಬಲ ಬೆಲೆಗೆ ಆಗ್ರಹ; ಜೈಲ್‌ಭರೋ, ರಸ್ತೆತಡೆ ಯಾವುದಕ್ಕೂ ಸಿದ್ಧ

Raita Sangha
Raita Sangha
Published on

ಪ್ರಮುಖ ಮುಖ್ಯಾಂಶಗಳು

  • ಒಂಟು ಕ್ವಿಂಟಲ್ ಮೆಕ್ಕೆಜೋಳಕ್ಕೆ 3 ಸಾವಿರ ರೂ. ದರ ನಿಗಧಿಪಡಿಸಿ
  • ಈ ಕೂಡಲೇ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಆಗ್ರಹ
  • ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ
ಹಾವೇರಿ: ಕೇಂದ್ರ ಸರ್ಕಾರ 2,400 ರೂ. ಹಾಗೂ ರಾಜ್ಯ ಸರ್ಕಾರ 600 ರೂ. ಪ್ರೋತ್ಸಾಹ ಧನ ಸೇರಿಸಿ ಒಂಟು ಕ್ವಿಂಟಲ್ ಮೆಕ್ಕೆಜೋಳಕ್ಕೆ 3 ಸಾವಿರ ರೂ. ದರ ನಿಗಧಿಪಡಿಸಿ, ಈ ಕೂಡಲೇ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಆಗ್ರಹಿಸಿ ನ.24ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.24ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರದಲ್ಲಿ ಅಹೋರಾತ್ರಿ ಧರಣಿ ಪ್ರಾರಂಭವಾಗಲಿದೆ. ನಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಕೈಬಿಡಲ್ಲ. ರಾಷ್ಟ್ರೀಯ ಹೆದ್ದಾರಿ ತಡೆ, ಜೈಲ್‌ಭರೋ ಚಳವಳಿಗೂ ಸಿದ್ಧವಾಗಿದ್ದೇವೆ ಎಂದರು. ಜಿಲ್ಲೆಯಲ್ಲಿ ಈ ಬಾರಿಯೂ ಅತಿ ಹೆಚ್ಚು ಮೆಕ್ಕೆಜೋಳ ಬೆಳೆಯಲಾಗಿದೆ. ಮೆಕ್ಕೆಜೋಳದಿಂದ 55 ಉತ್ಪನ್ನಗಳು ತಯಾರಾಗುತ್ತವೆ. ಈ ಬಾರಿ ಅತಿವೃಷ್ಟಿಯಿಂದಾಗಿ ಎರಡು ಬಾರಿ ಬಿತ್ತನೆ ಮಾಡಲಾಗಿದೆ. ಹಲವು ರೈತರ ಬೆಳೆ ಹಾನಿಯಾಗಿದೆ. ಕಟಾವು, ಕಳೆ ವೆಚ್ಚ, ಸಾರಿಗೆ ವೆಚ್ಚ ಹೆಚ್ಚಾಗಿದೆ. ಇಳುವರಿಯೂ ಕಡಿಮೆಯಾಗಿದೆ. ಖರೀದಿ ಕೇಂದ್ರದಿಂದಲೇ ರೈತರ ಬೆಳೆ ಖರೀದಿಸುವುದಾಗಿ ಹೇಳುವ ಸರ್ಕಾರ ಈವರೆಗೆ ಯಾಕೆ ಸುಮ್ಮನೆ ಕುಳಿತಿದೆ. ಯಾಕೆ ದರ ನಿಗದಿಪಡಿಸುತ್ತಿಲ್ಲ ಎಂದು ಸ್ಪಷ್ಟಪಡಿಸಬೇಕು. ಇಲ್ಲದಿದ್ದರೆ ಮೆಕ್ಕೆಜೋಳ ಬೆಳೆಯಬೇಕೋ ಬೇಡವೋ ಸ್ಪಷ್ಟಪಡಿಸಬೇಕು ಎಂದು ಸವಾಲು ಹಾಕಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಮೆಕ್ಕೆಜೋಳದಿಂದ ಎಥೆನಾಲ್ ಸಿದ್ಧಪಡಿಸಲಾಗುತ್ತಿದೆ. ದೇಶದಲ್ಲಿ 782 ಎಥೆನಾಲ್ ಫ್ಯಾಕ್ಟರಿಗಳಿವೆ. ಮಾಜಿ, ಹಾಲಿ ಶಾಸಕರ ಕಪಿಮುಷ್ಟಿಯಲ್ಲಿ ಎಥೆನಾಲ್ ಫ್ಯಾಕ್ಟರಿಗಳು ಸಿಲುಕಿವೆ. ಫ್ಯಾಕ್ಟರಿಗಳು ದರ ಕಡಿಮೆ ಮಾಡಿದ್ದರಿಂದ ಈ ಪರಿಸ್ಥಿತಿ ಬಂದಿದೆ. ನಮ್ಮ ಜಿಲ್ಲೆಯ ಫ್ಯಾಕ್ಟರಿಗಳು 1,7,00 ಹಾಗೂ 1,800 ರೂ.ಗೆ ಖರೀದಿಸುತ್ತಿವೆ. ಹಾಗಾಗಿ, ದಲ್ಲಾಳಿಗಳು ರೈತರಿಂದ 1,400ರಿಂದ 1,500 ರೂ.ಗೆ ಖರೀದಿಸುತ್ತಿದ್ದಾರೆ. ಇತ್ತೀಚೆಗೆ ಕುಲಾಂತರಿ ತಳಿಗಳು ಹೆಚ್ಚು ಇಳುವರಿ ಕೊಡುತ್ತಿವೆ. ಎಕರೆಗೆ 10 ಚೀಲ ಬೆಳೆಯುವಲ್ಲಿ 20, 30 ಚೀಲ ಬೆಳೆಯಲಾಗುತ್ತಿದೆ. ಇದರಿಂದ ದರ ಕಡಮೆ ಆಗುತ್ತದೆ. ಇದಕ್ಕೆ ವಿದೇಶದಿಂದ ಕುಲಾಂತರಿ ತಳಿ ಆಮದು ಮಾಡಲು ಕೇಂದ್ರ ಸರ್ಕಾರ ಸಹಿ ಹಾಕುತ್ತಿದ್ದು, ಇದಕ್ಕೆ ನಮ್ಮ ವಿರೋಧವಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತ ಕಾಲಹರಣ ಮಾಡುವುದನ್ನು ಬಿಟ್ಟು ರೈತರ ನೆರವಿಗೆ ಧಾವಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಶಿವಯೋಗಿ ಹೊಸಗೌಡ್ರ, ಮಾಲತೇಶ ಪೂಜಾರ, ಬಸವನಗೌಡ ಗಂಗಪ್ಪನವರ, ಎಚ್.ಎಚ್.ಮುಲ್ಲಾ, ಬಸವರಾಜ ಬಣಕಾರ, ಮರಿಗೌಡ ಪಾಟೀಲ, ಇತರರಿದ್ದರು.
ಸರ್ಕಾರದಿಂದಲೇ ರೈತರ ಕೊಲೆ
ಮೂರು ತಿಂಗಳಾದರೂ ಬೆಳೆಹಾನಿ ಪರಿಹಾರ ಕೊಟ್ಟಿಲ್ಲ. ನಮ್ಮನ್ನು ಭಿಕ್ಷುಕರು ಎಂದು ತಿಳಿದಿದ್ದೀರಾ ? ಎಂದು ರಾಮಣ್ಣ ಕೆಂಚಳ್ಳೇರಿ ಖಾರವಾಗಿ ಪ್ರಶ್ನಿಸಿದರು. ಜಂಟಿ ಸಮೀಕ್ಷೆ ಎನ್ನುತ್ತಾರೆ ಯಾರೂ ಹೊಲಕ್ಕೆ ಬರಲ್ಲ. ಅಧಿಕಾರಿಗಳ ಕೈಯಲ್ಲಿ ಸಿಲುಕಿ ರೈತರು ನೊಂದಿದ್ದಾರೆ. ಆತ್ಮಹತ್ಯೆ ಹೆಚ್ಚಳಕ್ಕೆ ಸರ್ಕಾರ ಮತ್ತು ಅಧಿಕಾರಿಗಳು ಕಾರಣ. ಇದು ರೈತ ಆತ್ಮಹತ್ಯೆಯಲ್ಲ. ಸರ್ಕಾರ ಮಾಡುವ ಕೊಲೆಗಳು. ರೈತರ ಮೇಲೆ ಪ್ರೀತಿ ಇದ್ದರೆ ತಕ್ಷಣವೇ ಎಚ್ಚೆತ್ತು ನ್ಯಾಯ ಕೊಡಿಸಬೇಕು. ಇಲ್ಲವೇ ರೈತರ ಆಕ್ರೋಶ ಎದುರಿಸಿ ಎಂದರು. ಎಲ್ಲರೂ ಚಳವಳಿಯಲ್ಲಿ ಧುಮುಕಿ ಎಂದು ಕರೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net