ಜಿಲ್ಲಾ ಕೇಂದ್ರಕ್ಕೆ ಬೇಕು ಶಾಶ್ವತ ಹೆಲಿಪ್ಯಾಡ್; ಪ್ರತಿ ಸಲ ಬಾಡಿಗೆ ಸ್ಥಳಕ್ಕೆ ಅವಲಂಬನೆ; ಜಿಲ್ಲಾಡಳಿತಕ್ಕೆ ಅನಗತ್ಯವಾಗಿ ಸಮಯ, ಹಣ ವ್ಯರ್ಥ

Haveri, PWD, SP, DC, Needs, Permanent, Helipad,
Haveri, PWD, SP, DC, Needs, Permanent, Helipad,
Published on
ಹಾವೇರಿ: ಹಾವೇರಿ ಜಿಲ್ಲೆಯಾಗಿ ಮೂರು ದಶಕದತ್ತ ದಾಪುಗಾಲು ಇಡುತ್ತಿದ್ದರೂ ನಗರದಲ್ಲಿ ಈವರೆಗೆ ಒಂದು ಸ್ವಂತ ಹೆಲಿಪ್ಯಾಡ್ ಮಾಡಲು ರಾಜ್ಯ ಸರ್ಕಾರಕ್ಕೆ ಆಗಿಲ್ಲ. ತಾತ್ಕಾಲಿಕವಾಗಿ ಹೆಲಿಪ್ಯಾಡ್ ನಿರ್ಮಿಸುವುದರಿಂದ ಸರ್ಕಾರದ ಹಣ, ಸಮಯ ವ್ಯರ್ಥವಾಗುತ್ತಿದ್ದು, ಇನ್ನಾದರೂ ಶಾಶ್ವತ ಹೆಲಿಪ್ಯಾಡ್ ನಿರ್ಮಾಣದ ಕುರಿತು ಸರ್ಕಾರ ಗಂಭೀರವಾದ ಚಿಂತನೆ ನಡೆಸಬೇಕಿದೆ.
ಜಿಲ್ಲಾ ಕೇಂದ್ರ, ಯಾಲಕ್ಕಿ ನಗರಿ ಹಾವೇರಿಗೆ ಚುನಾವಣೆ ಪ್ರಚಾರ, ಸಮಾವೇಶ, ವಿಶೇಷ ಕಾರ್ಯಕ್ರಮಗಳು, ಮತ್ತಿತರ ಸಂದರ್ಭಗಳಲ್ಲಿ ಪ್ರಧಾನಮಂತ್ರಿ, ಮುಖ್ಯಮಂತ್ರಿ, ಕೇಂದ್ರ ಹಾಗೂ ರಾಜ್ಯದ ಸಚಿವರು, ಗಣ್ಯರು ಆಗಾಗ ಆಗಮಿಸುತ್ತಾರೆ. ಇಂತಹ ಸಂದರ್ಭದಲ್ಲಿ ಹೆಲಿಪ್ಯಾಡ್‌ಗಾಗಿ ಖಾಸಗಿ ಸ್ಥಳದ ಮೇಲೆಯೇ ಜಿಲ್ಲಾಡಳಿತ ಅವಲಂಭಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಸ್ವಂತ ಹೆಲಿಪ್ಯಾಡ್ ಇಲ್ಲದ ಕಾರಣ ನಗರದ ಕೆಎಲ್‌ಇ ಸಂಸ್ಥೆಯ ಕೊಳ್ಳಿ ಪಾಲಿಟೆಕ್ನಿಕ್ ಮೈದಾನ, ಮುನ್ಸಿಪಲ್ ಹೈಸ್ಕೂಲ್ ಮೈದಾನ, ಸೇರಿದಂತೆ ವಿವಿಧ ಸ್ಥಳಗಳಲ್ಲಿ ತಾತ್ಕಾಲಿಕ ಹೆಲಿಪ್ಯಾಡ್ ಮಾಡುವ ಅನಿವಾರ್ಯತೆ ಎದುರಾಗುತ್ತದೆ. ಆಯಾ ಸ್ಥಳದಲ್ಲಿ ಪೂರ್ವನಿರ್ಧರಿತ ಸಮಾರಂಭ ಇದ್ದಲ್ಲಿ ಮತ್ತೊಂದು ಜಾಗ ಬಾಡಿಗೆ ಪಡೆಯುವುದು ಲೋಕೋಪಯೋಗಿ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.
ಫೆಬ್ರವರಿ 14ರಂದು ರಾಜ್ಯ ಸರ್ಕಾರದಿಂದ ಹಾವೇರಿಯಲ್ಲಿ ಆಯೋಜಿಸಿದ್ದ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶದ ಅಂಗವಾಗಿ ಇಲ್ಲಿನ ದೇವಗಿರಿ ಯಲ್ಲಾಪುರದ ಹಾವೇರಿ ಮೆಡಿಕಲ್ ಕಾಲೇಜ್‌ನಲ್ಲಿ ನಾಲ್ಕು ತಾತ್ಕಾಲಿಕ ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಾಗಿತ್ತು. 2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹಾವೇರಿಯ ಅಜ್ಜಯ್ಯನ ಗುಡಿ ಸಮೀಪ ಬಿಜೆಪಿ ವತಿಯಿಂದ ಆಯೋಜಿಸಿದ್ದ ಚುನಾವಣಾ ರ‌್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದರು. ಆ ವೇಳೆ ಪ್ರಧಾನಿಗಾಗಿ ಒಂದು ಹಾಗೂ ಸೇನಾ ಹೆಲಿಕಾಪ್ಟರ್‌ಗಳಿಗಾಗಿ ಎರಡು ಸೇರಿ ಮೂರು ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಿಸಲಾಗಿತ್ತು.
ಹೀಗೆ ಪದೇಪದೆ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಿಸುವುದರಿಂದ ಸರ್ಕಾರಗಳು ಹಾಗೂ ಜಿಲ್ಲಾಡಳಿತದ ಹಣ ಪೋಲಾಗುತ್ತದೆ. ಒಂದು ಬಾರಿ ಹೆಲಿಪ್ಯಾಡ್ ನಿರ್ಮಿಸಲು ಕನಿಷ್ಠ 25ರಿಂದ 30 ಸಾವಿರ ರೂ. ಬೇಕಾಗುತ್ತದೆ. ಒಂದೆರೆಡು ದಿನದ ನಂತರ ಮತ್ತೆ ಅದನ್ನು ವಾಪಸ್ ಮರಳಿಸಬೇಕು. ಮತ್ತೆ ಅಗತ್ಯವಿದ್ದಲ್ಲಿ ಮತ್ತೊಮ್ಮೆ ಹೊಸ ಹೆಲಿಪ್ಯಾಡ್ ನಿರ್ಮಿಸಬೇಕಾಗುತ್ತದೆ.
ಹೀಗೆ ಹಣ ಪೋಲು ಮಾಡುವ ಬದಲು ಜಿಲ್ಲಾ ಕೇಂದ್ರಕ್ಕೆ ಶಾಶ್ವತವಾಗಿ ಒಂದು ಹೆಲಿಪ್ಯಾಡ್ ನಿರ್ಮಿಸುವ ಅಗತ್ಯವಿದೆ. ಈ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಬೇಕು. ಇದರ ಬಗ್ಗೆ ಜಿಲ್ಲಾಡಳಿತವೂ ಸರ್ಕಾರಕ್ಕೆ ವರದಿ ಸಲ್ಲಿಸಿ ಒತ್ತಡ ಹೇರಬೇಕಿದೆ.
ನೆಲೋಗಲ್, ಕಳ್ಳಿಹಾಳ ಸ್ಥಳ ರದ್ದು
ನೆಹರು ಓಲೇಕಾರ ಶಾಸಕರಾಗಿದ್ದ ವೇಳೆ 2021ರಲ್ಲಿ ಹಾವೇರಿ ತಾಲೂಕಿನ ಕಳ್ಳಿಹಾಳ ಗ್ರಾಮದ ಎಸ್‌ಸಿಎಸ್‌ಟಿ ವಸತಿ ಕಾಲೇಜ್ ಬಳಿ ಹೆಲಿಪ್ಯಾಡ್ ನಿರ್ಮಿಸಲು ಚಿಂತನೆ ನಡೆದಿತ್ತು. ಈ ಹಿಂದೆ ಶೆಟ್ಟೆಣ್ಣನವರ ಜಿಲ್ಲಾಧಿಕಾರಿ ಆಗಿದ್ದಾಗ ಹಾವೇರಿ ತಾಲೂಕಿನ ನೆಲೋಗಲ್ಲ ಗುಡ್ಡದ ಈಗಿನ ಜಿಟಿಟಿಸಿ ಕಾಲೇಜ್ ಬಳಿ ಇರುವ ಸ್ಥಳದಲ್ಲಿ ಶಾಶ್ವತ ಹೆಲಿಪ್ಯಾಡ್ ನಿರ್ಮಿಸಲು ಯೋಜಿಸಲಾಗಿತ್ತು. ತಾಂತ್ರಿಕ ಕಾರಣಗಳಿಂದ ಆ ಎರಡೂ ಸ್ಥಳಗಳನ್ನು ಕೈಬಿಡಲಾಯಿತು ಎಂದು ಜಿಲ್ಲೆಯ ಹಿರಿಯ ಅಧಿಕಾರಿ ಒಬ್ಬರು ಮಾಹಿತಿ ನೀಡಿದರು.
ಕನಿಷ್ಠ 100 ಮೀಟರ್ ಬಯಲು
ಹೆಲಿಪ್ಯಾಡ್ ನಿರ್ಮಿಸಲು ಕನಿಷ್ಠ 2 ಎಕರೆ ಜಾಗ ಹಾಗೂ 100 ಮೀಟರ್ ಬಯಲು ಜಾಗ ಇರಬೇಕು. ಆ ಸ್ಥಳದಲ್ಲಿ ಗಿಡ, ಮರ, ವಿದ್ಯುತ್, ಇತರ ಕಂಬಗಳು ಇರಬಾರದು. ಅಕ್ಕಪಕ್ಕದಲ್ಲಿ ಕಲ್ಲು ಕ್ವಾರಿ, ಸೇರಿದಂತೆ ಗಣಿಗಾರಿಕೆ ಇತರ ಕಾಮಗಾರಿಗಳು ನಡೆಯುತ್ತಿರಬಾರದು ಎಂಬ ನಿಯಮಗಳಿವೆ. ಸ್ಥಳ ಅಂತಿಮಗೊಳಿಸಲು ಪೊಲೀಸ್ ಇಲಾಖೆಯ ಅನುಮತಿಯೂ ಬೇಕಾಗುತ್ತದೆ. ಸೂಕ್ತ ಭದ್ರತೆ ಹೊಂದಿರುವ ಸ್ಥಳದಲ್ಲಿ ಹೆಲಿಪ್ಯಾಡ್ ನಿರ್ಮಿಸಬೇಕಾಗುತ್ತದೆ. ಈ ಎಲ್ಲ ಅಂಶಗಳನ್ನು ಗಮನಿಸಿ ಸರ್ಕಾರ ಶೀಘ್ರದಲ್ಲೇ ಶಾಶ್ವತ ಹೆಲಿಪ್ಯಾಡ್ ನಿರ್ಮಿಸಬೇಕಿದೆ.
ಹೆಲಿ ಟೂರಿಸಂಗೆ ಸಹಕಾರಿ
ಶಾಶ್ವತ ಹೆಲಿಪ್ಯಾಡ್ ನಿರ್ಮಾಣದಿಂದ ಸರ್ಕಾರಕ್ಕೆ ಹೆಲಿ ಟೂರಿಸಂ ಮೂಲಕ ಆದಾಐವೂ ಲಭಿಸುತ್ತದೆ. ಇತ್ತೀಚೆಗೆ ಹಾವೇರಿಯ ಹುಕ್ಕೇರಿ ಮಠದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಜಾತ್ರಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಹೆಲಿ ಟೂರಿಸಂಗೆ ಭರ್ಜರಿ ಸ್ಪಂದನೆ ದೊರೆತಿತ್ತು. ಕೊಳ್ಳಿ ಪಾಲಿಟೆಕ್ನಿಕ್ ಮೈದಾನದಲ್ಲಿ ಹೆಲಿಪ್ಯಾಡ್ ನಿರ್ಮಿಸಿ ಜಾತ್ರೆ ಸಂದರ್ಭದಲ್ಲಿ ಒಂದು ರೌಂಡ್ ಹಾವೇರಿ, ಹುಕ್ಕೇರಿ ಮಠದ ಸುತ್ತ ಸುತ್ತು ಹೊಡೆಸಲು ನಾಲ್ಕೈದು ಸಾವಿರ ರೂ. ದರ ನಿಗದಿಪಡಿಸಲಾಗಿತ್ತು. ಆಗ ಹೆಲಿಕಾಪ್ಟರ್ ಏರಲು ಜನ ಸರತಿಯಲ್ಲಿ ನಿಂತಿದ್ದು ಕಂಡು ಬಂದಿತ್ತು. ಶಾಶ್ವತ ಹೆಲಿಪ್ಯಾಡ್ ನಿರ್ಮಾಣವಾದರೆ ಹೆಲಿ ಟೂರಿಸಂ ಆರಂಭಿಸಲು ಸಹಕಾರಿ ಆಗುತ್ತದೆ.
"

ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ಶಾಶ್ವತವಾದ ಹೆಲಿಪ್ಯಾಡ್ ನಿರ್ಮಾಣದ ಕುರಿತು ಈ ಹಿಂದೆ ನೋಡಿದ್ದ ಕೆಲ ಸ್ಥಳಗಳನ್ನು ತಾಂತ್ರಿಕ ಕಾರಣದಿಂದ ಕೈಬಿಡಲಾಗಿದೆ. ಅಂದಾಜು ಎರಡು ಎಕರೆ ಜಾಗ ನೀಡಿದರೆ ಶಾಶ್ವತ ಹೆಲಿಪ್ಯಾಡ್ ನಿರ್ಮಿಸಬಹುದು. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರವೇ ಸ್ಥಳ ಲಭ್ಯವಾಗುವ ಭರವಸೆ ಇದೆ.

— ಶ್ರೀಮಂತ ಹದಗಲ್, ಎಇಇ, ಲೋಕೋಪಯೋಗಿ ಇಲಾಖೆ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net