ಸರ್ಕಾರಿ ಸೇವೆ ಬದಲಾವಣೆ ತರಲು ರಹದಾರಿ; ವೀರಮಲ್ಲಪ್ಪ ಪೂಜಾರ ಬೀಳ್ಕೊಡುಗೆ ಸಮಾರಂಭದಲ್ಲಿ ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಅಭಿಪ್ರಾಯ

haveri-pujar-veeramallappa, felicitation,
haveri-pujar-veeramallappa, felicitation,
Published on
ಹಾವೇರಿ: ಸರ್ಕಾರಿ ಸೇವೆ ಎಂಬುದು ಕೇವಲ ಉದ್ಯೋಗವಲ್ಲ, ಜನರ ಬದುಕಿನಲ್ಲಿ ಉತ್ತಮ ಬದಲಾವಣೆ ತರಲು ದೊರೆತಿರುವ ಅಮೂಲ್ಯ ಅವಕಾಶವಾಗಿದೆ. ಆ ಅವಕಾಶವನ್ನು ಪ್ರಾಮಾಣಿಕತೆ, ಜನಪರ ಕಾಳಜಿ ಮತ್ತು ನಿಷ್ಠೆಯಿಂದ ಬಳಸಿದಾಗ ಮಾತ್ರ ಸೇವೆಗೆ ನಿಜವಾದ ಸಾರ್ಥಕತೆ ದೊರೆಯುತ್ತದೆ. ಅಂತಹ ಕಾರ್ಯವನ್ನು ವೀರಮಲ್ಲಪ್ಪ ಪೂಜಾರ ಅವರು ಸಲ್ಲಿಸಿದ್ದಾರೆಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.
ನಗರದ ರಜನಿ ಕನ್ವೆನ್ಷನ್ ಹಾಲ್‌ನಲ್ಲಿ ಶುಕ್ರವಾರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ವೀರಮಲ್ಲಪ್ಪ ಪೂಜಾರ ಅವರ ವಯೋನಿವೃತ್ತಿ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸರಳತೆ, ಗ್ರಾಮೀಣ ಸೊಗಡು ಮತ್ತು ಸೇವಾ ಮನೋಭಾವದಿಂದ ಎಲ್ಲರ ಮನಗೆದ್ದಿದ್ದಾರೆ. ಪೂಜೆ, ಆಚರಣೆ ಹಾಗೂ ಸಂಸ್ಕಾರವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸದ್ಭಾವನೆ ಬೆಳೆಯುತ್ತದೆ. ಅದೇ ವ್ಯಕ್ತಿತ್ವವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎಂಬುದಕ್ಕೆ ವೀರಮಲ್ಲಪ್ಪ ಸಾಕ್ಷಿ ಎಂದರು.
ಶಾಸಕ ರುದ್ರಪ್ಪ ಲಮಾಣಿ ಮಾತನಾಡಿ, ತಹಸೀಲ್ದಾರ್, ಎಡಿಸಿ, ಹುಡಾ ಆಯುಕ್ತರಾಗಿ ಸೇವೆ ಸಲ್ಲಿಸಿರುವ ವೀರಮಲ್ಲಪ್ಪ ಪೂಜಾರ ಅವರು ನಗರಾಭಿವೃದ್ಧಿ ಪ್ರಾಧಿಕಾರಕ್ಕೂ ಹೊಸ ರೂಪ ನೀಡಿದ್ದಾರೆ. ಯಾರಿಗೂ ಅನ್ಯಾಯ ಮಾಡದೇ ಜನಸೇವೆಯನ್ನೇ ಧ್ಯೇಯವಾಗಿಸಿಕೊಂಡು ಕೆಲಸ ಮಾಡಿದ್ದಾರೆ ಎಂದರು.
ಹೊಸಮಠದ ಶ್ರೀ ಬಸವ ಶಾಂತಲಿಂಗ ಸ್ವಾಮೀಜಿ ಮಾತನಾಡಿದರು.
ಸಮಾರಂಭದಲ್ಲಿ ದೊಡ್ಡಹುಣಸೆ ಕಲ್ಮಠದ ಚನ್ನಬಸವ ಸ್ವಾಮೀಜಿ, ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್., ಉಪ ವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ, ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪುರೆ, ಕೊಟ್ರೇಶಪ್ಪ ಬಸೇಗಣ್ಣಿ, ಡಿ.ಎಸ್.ಮಾಳಗಿ, ಶಿವಾನಂದ ಮ್ಯಾಗೇರಿ, ಮಲ್ಲೇಶ ಕರಿಗಾರ, ಕೆ.ಶರಣಮ್ಮ, ಚನ್ನಪ್ಪ ಎಚ್.ಬಿ., ಎಂ.ಎಂ. ಮೈದೂರ, ಮಲ್ಲಿಕಾರ್ಜುನ ಮಠದ, ಶಶಿಧರ ಯಲಿಗಾರ, ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಪ್ರಾಮಾಣಿಕತೆ ದೊಡ್ಡ ಸಂಪತ್ತು
ಸರ್ಕಾರಿ ಸೇವೆ ಎಂಬುದು ಜನರ ವಿಶ್ವಾಸ ಉಳಿಸಿಕೊಳ್ಳುವ ದೊಡ್ಡ ಜವಾಬ್ದಾರಿಯಾಗಿದೆ. ಬದುಕು ಕ್ಷಣಿಕ ಎಂಬ ಅರಿವು ಇದ್ದಾಗ ಪ್ರತಿಯೊಂದು ಕ್ಷಣವನ್ನೂ ಸಾರ್ಥಕವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಸೇವಾ ಅವಧಿಯಲ್ಲಿ ಪ್ರಾಮಾಣಿಕತೆ ಮತ್ತು ಮಾನವೀಯತೆ ಉಳಿಸಿಕೊಂಡರೆ ಅದೇ ಅಧಿಕಾರಿಯ ದೊಡ್ಡ ಸಂಪತ್ತು. ಅಂತಹ ಸಾರ್ಥಕ ಜೀವನವನ್ನು ಪೂಜಾರ ವೀರಮಲ್ಲಪ್ಪ ತಮ್ಮದಾಗಿಸಿಕೊಂಡಿದ್ದಾರೆ. ಇತರರಿಗೆ ಮಾದರಿಯಾಗಿದ್ದಾರೆ ಎಂದು ಡಿಸಿ ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
"

ಪ್ರಾಮಾಣಿಕತೆ, ಶಿಸ್ತು ಹಾಗೂ ನಿಸ್ವಾರ್ಥ ಸೇವೆ ಅಧಿಕಾರಿಯ ನಿಜವಾದ ಆಭರಣಗಳಾಗಿವೆ. ಲೇಔಟ್ ನಿರ್ಮಾಣ ಮಾಡಬೇಕಾದರೆ ರಸ್ತೆ, ಒಳಚರಂಡಿ, ಸಸಿ ನೆಡುವುದು ಹೀಗೆ ವೀರಮಲ್ಲಪ್ಪ ಪೂಜಾರ ಅವರು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಉತ್ತಮ ಮಾದರಿ ನಿರ್ಮಿಸಿದ್ದಾರೆ.

— ಎಸ್.ಎಫ್.ಎನ್. ಗಾಜಿಗೌಡ್ರ, ಅಧ್ಯಕ್ಷ, ಹುಡಾ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net