ಅಡ್ಡ ಮಳೆ, ರೈತರ ಬದುಕಿಗೆ ಬರಸಿಡಿಲು !; 18 ದಿನದಲ್ಲಿ 57.90 ಮಿ.ಮೀ. ಸುರಿದ ಮಳೆ; ಸಿಡಿಲಿಗೆ ರಾಣೆಬೆನ್ನೂರ ತಾಲೂಕಿನ ಯುವಕ ಬಲಿ

Haveri, Pre Mansoon, Rain, Farmers, Public, Problems,
Haveri, Pre Mansoon, Rain, Farmers, Public, Problems,
Published on
ಹಾವೇರಿ: ಮುಂಗಾರು ಮಳೆ ಆರಂಭಕ್ಕೂ ಮುನ್ನವೇ ಮೇನಲ್ಲಿ ಸುರಿದ ಮುಂಗಾರು ಪೂರ್ವ ಮಳೆಯಿಂದ ಜಿಲ್ಲೆಯ ರೈತರು ಮತ್ತು ಜನರ ಜೀವನ ತತ್ತರಿಸಿದೆ. ಮೇ 1ರಿಂದ 18ರವರೆಗೆ ವಾಡಿಕೆಗಿಂತ ಹೆಚ್ಚಿನ ಅಂದರೆ 57.90 ಮಿ.ಮೀ. ಮಳೆ ಸುರಿದಿದ್ದು, ಜಿಲ್ಲೆಯಾದ್ಯಂತ 1,235 ಹೆಕ್ಟೇರ್ ಬೆಳೆ ಹಾನಿಯುಂಟಾಗಿದೆ. ಇದರಿಂದ ರೈತರ ಬದುಕಿಗೆ ಬರಸಿಡಿಲು ಬಡಿದಂತಾಗಿದೆ.
ಮೇ ತಿಂಗಳಲ್ಲಿ ಈವರೆಗೆ 36 ಮಿ.ಮೀ ವಾಡಿಕೆ ಮಳೆ ಆಗಬೇಕಿತ್ತು. ಆದರೆ, 57.90 ಮಿ.ಮೀ. ಮಳೆ ಸುರಿದಿದೆ. ಬ್ಯಾಡಗಿ ತಾಲೂಕಿನಲ್ಲಿ ಅತಿಹೆಚ್ಚು 69.69 ಮಿ.ಮೀ. ಮಳೆಯಾಗಿದೆ. ಹಾನಗಲ್ಲ ತಾಲೂಕಿನಲ್ಲಿ 61.63, ಹಾವೇರಿ 62.53, ಹಿರೇಕೆರೂರ 49.13, ರಾಣೆಬೆನ್ನೂರ 37.91, ಸವಣೂರ 48.57, ಶಿಗ್ಗಾಂವಿ 36.88, ರಟ್ಟಿಹಳ್ಳಿಯಲ್ಲಿ 26.68 ಮಿ.ಮೀ. ಕಡಿಮೆ ಮಳೆಯಾಗಿದೆ.
ಮುಂಗಾರು ಪೂರ್ವ ಮಳೆಯ ಆರಂಭದಲ್ಲಿ ಸಿಡಿಲು, ಗಾಳಿ, ಮಳೆಯ ಅಬ್ಬರ ಜೋರಾಗಿದೆ. ಈ ವೇಳೆ ಸಿಡಿಲಾಘಾತಕ್ಕೆ ರಾಣೆಬೆನ್ನೂರ ತಾಲೂಕಿನ ಸುಣಕಲ್ಲ ಬಿದರಿ ಗ್ರಾಮದ ಯುವಕ ಗಿರೀಶ ಕರಿಯಾಲಪ್ಪ (25) ಸಿಡಿಲಿಗೆ ಬಲಿಯಾಗಿದ್ದಾರೆ. ಹಾನಗಲ್ಲ ತಾಲೂಕು ಕಂಚಿನೆಗಳೂರ ಗ್ರಾಮದಲ್ಲಿ ಕೆರೆಯಲ್ಲಿ ಮುಳುಗಿ ಸೃಜನ ಬ್ಯಾತನಾಳ (11) ಹಾಗೂ ಸಚಿನ್ ಬ್ಯಾತನಾಳ (13) ಎಂಬ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ.
ರಾಣೆಬೆನ್ನೂರ ತಾಲೂಕಿನಲ್ಲಿ ಮಳೆ ಗಾಳಿ, ಸಿಡಿಲಿಗೆ ಐದು ಮೇಕೆ, ಎರಡು ಕುರಿ, ಒಂದು ಎತ್ತು, ಹಿರೆಕೆರೂರ ತಾಲೂಕು ಕೋಡ ಗ್ರಾಮದಲ್ಲಿ ಒಂದು ಹಸು ಮೃತಪಟ್ಟಿದೆ. ಪರಿಹಾರ ನೀಡುವುದು ಬಾಕಿ ಇದೆ. ಮುಂಗಾರು ಪೂರ್ವ ಮಳೆಯ ಬೆನ್ನಲ್ಲೇ ಮುಂಗಾರು ಮಳೆ ಆರಂಭವಾಗುವ ಮುನ್ಸೂಚನೆ ಇದ್ದು, ಸಂಭವನೀಯ ಅನಾಹುತಗಳನ್ನು ತಡೆಗಟ್ಟುವಲ್ಲಿ ಜಿಲ್ಲಾಡಳಿತ ಮತ್ತಷ್ಟು ಮುಂಜಾಗ್ರತೆ ವಹಿಸಬೇಕಿದೆ.
1,235 ಹೆಕ್ಟೇರ್ ಬೆಳೆ ಹಾನಿ
ಜಿಲ್ಲೆಯಲ್ಲಿ ಮೇನಲ್ಲಿ ಸುರಿದ ಭಾರೀ ಮಳೆ ಗಾಳಿಗೆ 1,235 ಹೆಕ್ಟೇರ್ ಬೆಳೆಹಾನಿಗೀಡಾಗಿದೆ. ಇದರಲ್ಲಿ 1,181 ಹೆಕ್ಟೇರ್ ಕೃಷಿ ಬೆಳೆ ಹಾಗೂ 54.79 ಹೆಕ್ಟೇರ್ ತೋಟಗಾರಿಕಾ ಬೆಳೆಹಾನಿ ಸಂಭವಿಸಿದೆ.ರಾಣೆಬೆನ್ನೂರ ತಾಲೂಕಿನಲ್ಲಿ ಅತಿ ಹೆಚ್ಚು 1,035 ಹೆಕ್ಟೇರ್‌ಗಿಂತ ಹೆಚ್ಚಿನ ಬೆಳೆಹಾನಿಯಾಗಿದೆ. ರಟ್ಟಿಹಳ್ಳಿ ತಾಲೂಕಿನಲ್ಲಿ 182 ಹೆಕ್ಟೇರ್, ಹಾನಗಲ್ಲ 7.1, ಹಿರೇಕೆರೂರ 5.7, ಬ್ಯಾಡಗಿ 3.45, ಹಾನಗಲ್ಲ 7.1, ಹಾವೇರಿ 0.9, ಸವಣೂರ 0.1 ಹೆಕ್ಟೇರ್ ಬೆಳೆಹಾನಿಯಾದ ವರದಿಯಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಅಂದಾಜು 20.14 ಕೋಟಿ ರೂ. ಮೌಲ್ಯದ ಬೆಳೆ ಹಾನಿಗೀಡಾಗಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ. ಪರಿಹಾರ ಕಾರ್ಯಕ್ಕೆ ಮುಂದಾಗಿದೆ.
11 ಕೋಟಿ ಮೌಲ್ಯದ ಮೂಲಸೌಕರ್ಯ ಹಾನಿ
ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆಗೆ 11.13 ಕೋಟಿ ರೂ. ಮೌಲ್ಯದ ಮೂಲಸೌಕರ್ಯಕ್ಕೆ ಹಾನಿಯುಂಟಾಗಿದೆ. 4 ಶಾಲಾ ಕೊಠಡಿಗಳು, 1,008 ವಿದ್ಯುತ್ ಕಂಬಗಳು, 4 ವಿದ್ಯುತ್ ಟ್ರಾನ್ಸಫಾರ್ಮರ್‌ಗಳು, 8 ವಿದ್ಯುತ್ ಹೈಟೆನ್ಷನ್ ಟಾವರ್‌ಗಳು, 0.85 ಮೀ. ವಿದ್ಯುತ್ ತಂತಿ ಹಾನಿಗೀಡಾಗಿದೆ.
127 ಮನೆಗಳಿಗೆ ಹಾನಿ
ಪೂರ್ವ ಮುಂಗಾರು ಮಳೆಗೆ ಜಿಲ್ಲೆಯ 127 ಮನೆಗಳಿಗೆ ಹಾನಿ ಉಂಟಾಗಿವೆ. ಬ್ಯಾಡಗಿ 28, ಹಾಣಗಲ್ಲ 14, ಸವಣೂರ 10, ರಾಣೆಬೆನ್ನೂರ 64, ಶಿಗ್ಗಾಂವಿ 1, ಹಿರೇಕೆರೂರ 6, ರಟ್ಟೀಹಳ್ಳಿ 13, ಹಾವೇರಿ ತಾಲೂಕಿನ 1 ಮನೆಗೆ ಹಾನಿಯಾಗಿದೆ. ಇದರಲ್ಲಿ 13 ಅರ್ಜಿಗಳು ತಿರಸ್ಕೃತಗೊಂಡಿವೆ. 114 ಅರ್ಜಿಗಳು ವಿಚಾರಣೆಗೆ ಬಾಕಿ ಇವೆ. ಆಯಾ ತಾಲೂಕಿನ ತಹಸೀಲ್ದಾರ್ ನೇತೃತ್ವದಲ್ಲಿ ಮನೆಹಾನಿ ಪರಿಶೀಲನೆ ನಡೆಸಿ ಸರ್ಕಾರದಿಂದ ಪರಿಹಾರ ವಿತರಿಸಲಾಗುತ್ತದೆ.
ಮೇನಲ್ಲಿ ಸುರಿದ ಮಳೆಯ ಮಾಹಿತಿ (ಮಿ.ಮೀ.ಗಳಲ್ಲಿ)
ತಾಲೂಕು ವಾಡಿಕೆ ಮಳೆ ವಾಸ್ತವ ಮಳೆ
ಬ್ಯಾಡಗಿ 17.30 69.69
ಹಾನಗಲ್ಲ 16.30 61.63
ಹಾವೇರಿ 18.60 62.53
ಹಿರೇಕೆರೂರ 16.60 49.13
ರಾಣೆಬೆನ್ನೂರ 17.70 37.91
ಸವಣೂರ 18.30 48.57
ಶಿಗ್ಗಾಂವಿ 15.70 36.88
ರಟ್ಟಿಹಳ್ಳಿ 15.00 26.68
---------------------------------------------------------
ಒಟ್ಟು 15.90 49.60
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net