10.70 ಕೆಜಿ ಗಾಂಜಾ ಹಾವೇರಿ ಪೊಲೀಸರ ವಶಕ್ಕೆ; ಸಿವಿಲ್ ಇಂಜಿನಿಯರ್ ಸೇರಿ ಇಬ್ಬರ ಬಂಧನ

ganja, arrest
ganja, arrest
Published on
ಹಾವೇರಿ: ಗಾಂಜಾ ಮಾರಾಟ ಮಾಡಲು ಯತ್ನಿಸಿದ್ದ ಓರ್ವ ಸಿವಿಲ್ ಇಂಜಿನಿಯರ್ ಸೇರಿದಂತೆ ಇಬ್ಬರನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿತರಿಂದ 10.70 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಇಲ್ಲಿನ ನಾಗೇಂದ್ರನಮಟ್ಟಿ ನಿವಾಸಿಗಳಾದ ದಿಳ್ಳೆಪ್ಪ ಮಲ್ಲಪ್ಪ ಅಳಲಗೇರಿ (28) ಹಾಗೂ ರಾಜಾಸಾಬ ಬಾಬುಸಾಬ ನದಾಫ (27) ಬಂಧಿತ ಆರೋಪಿಗಳು.
ಸಿವಿಲ್ ಇಂಜಿನಿಯರ್ ಆಗಿರುವ ರಾಜಾಸಾಬ ನದಾಫ ಮತ್ತು ದಿಳ್ಳೆಪ್ಪ ಅಳಲಗೇರಿ ಇಬ್ಬರೂ ಓಡಿಶಾ ರಾಜ್ಯದಿಂದ ಗಾಂಜಾ ಖರೀದಿಸಿ ಬೆಂಗಳೂರು ಮಾರ್ಗವಾಗಿ ರೈಲಿನ ಮೂಲಕ ಹಾವೇರಿಗೆ ಗಾಂಜಾ ತಂದಿದ್ದರು. ಗಾಂಜಾ ವಾಸನೆ ಬಾರದಂತೆ ತಡೆಯಲು ಗಾಂಜಾ ತುಂಬಿದ್ದ ಬ್ಯಾಗ್‌ಗೆ ಗಟ್ಟಿಯಾಗಿ ಟಿಸ್ಕೋ ಟೇಪ್ ಅಂಟಿಸಿದ್ದರು. ರೈಲು ನಿಲ್ದಾಣದಿಂದ ನಾಗೇಂದ್ರನಮಟ್ಟಿಗೆ ತೆಗೆದುಕೊಂಡು ಹೋಗಿ ದೇವಸ್ಥಾನ ಒಂದರ ಬಳಿ ಮಾರಾಟಕ್ಕೆ ಮುಂದಾಗಿದ್ದರು.
ಖಚಿತ ಮಾಹಿತಿ ಮೇರೆಗೆ ಶಹರ ಠಾಣೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನೂ ಬಂಧಿಸಿ, ಗಾಂಜಾ ವಶಪಡಿಸಿಕೊಂಡಿದ್ದಾರೆ ಎಂದು ಗೊತ್ತಾಗಿದೆ. ಈ ಕುರಿತು ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net