ಒಳ ಮೀಸಲಾತಿ ಜಾರಿಗೆ ರಾಜ್ಯ ಸರ್ಕಾರಕ್ಕೆ ಆಗ್ರಹ

ola meesalati,
ola meesalati,
Published on
ಹಾವೇರಿ: ಒಳಮೀಸಲಾತಿ ಇಲ್ಲದೇ ಸರ್ಕಾರಿ ಉದ್ಯೋಗ ನೇಮಕ ಮಾಡಲು ಆದೇಶ ಹೊರಡಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ, ಸಾಮಾಜಿಕ ನ್ಯಾಯಕ್ಕಾಗಿ ಆಗ್ರಹಿಸಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ವತಿಯಿಂದ ನಗರದಲ್ಲಿ ಇತ್ತೀಚೆಗೆ ಪ್ರತಿಭಟನೆ ನಡೆಸಲಾಯಿತು.
ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್. ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಮಿತಿ ಸದಸ್ಯರು ಮನವಿ ಪತ್ರ ಸಲ್ಲಿಸಿದರು.
ರಾಜ್ಯಾದ್ಯಂತ 35 ವರ್ಷಗಳಿಂದ ನಿರಂತರ ಹೋರಾಟ ನಡೆಸಿದ್ದೇವೆ. ಸುಪ್ರೀಂಕೋರ್ಟ್ ಪರಿಶಿಷ್ಟ ಮೀಸಲಾತಿ ವರ್ಗೀಕರಿಸಲು ರಾಜ್ಯಕ್ಕೆ ಅವಕಾಶ ನೀಡಿತ್ತು. ರಾಜ್ಯ ಸರ್ಕಾರ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗ ರಚಿಸಿ ವರದಿ ಪಡೆದು ಸಚಿವ ಸಂಪುಟದಲ್ಲಿ ಅನುಮೋಧಿಸಿತ್ತು. ಆ ನಂತರ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಮಸೂದೆ ಅಂಗೀಕರಿಸಿ ರಾಜ್ಯಪಾಲರ ಸಹಿ ನಂತರ ವಿಧೇಯಕವಾಗಿದೆ.
ಕಾಂಗ್ರೆಸ್ ಸರ್ಕಾರ ಆರಂಭದಿಂದಲೂ ಒಳಮೀಸಲಾತಿ ವಿರೋಧಿಯಾಗಿದೆ. ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಳಮೀಸಲಾತಿ ವಿರೋಧಿಗಳ ರಾಜಕೀಯ ಒತ್ತಡದ ಪ್ರಭಾವಕ್ಕೆ ಒಳಗಾಗಿದ್ದಾರೆ. ಒಳಮೀಸಲಾತಿ ಜಾರಿ ಮಾಡಲು ವಿಶೇಷ ಸಚಿವ ಸಂಪುಟದ ದೀರ್ಘ ಚರ್ಚೆಯ ಅಗತ್ಯವಿಲ್ಲ. ಯಾವ ಕೋರ್ಟ್ ತಡೆಯಾಜ್ಞೆ ಹಾಗೂ ತಾಂತ್ರಿಕ ಆಡಚಣೆಗಳಿಲ್ಲ. ಅಡಚಣೆ ಇರುವುದು ಸರ್ಕಾರದಲ್ಲಿ ಆದ್ದರಿಂದ ಮುಖ್ಯಮಂತ್ರಿಯವರು ಸಮರ್ಥ ಹಾಗೂ ನಿಷ್ಠುರ ನಿರ್ಧಾರ ಮಾಡಬೇಕು. ಈ ಕೂಡಲೇ ಒಳ ಮೀಸಲಾತಿ ಜಾರಿಗೊಳಿಸಬೇಕು. ನಂತರವೇ ನೇಮಕಾತಿ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಒಳಮೀಸಲಾತಿ ಜಾರಿ ಹೋರಾಟ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಉಡಚಪ್ಪ ಮಾಳಗಿ, ಕಲ್ಯಾಣ ಸಮಿತಿ ಜಿಲ್ಲಾಧ್ಯಕ್ಷ ಮಂಜಪ್ಪ ಮರೋಳ, ಜಗದೀಶ ಹರಿಜನ, ಶಿವಲಿಂಗಪ್ಪ ನಿಂಗಪ್ಪನವರ, ಮಹೇಶಪ್ಪ ಶಾಕಾರ, ರಾಜಪ್ಪ ಸೋಮನಕಟ್ಟಿ, ವೆಂಕಟೇಶ ಹಾವನೂರ, ಪುನೀತ ಹಾವನೂರ, ಯಶವಂತ ಹಾವನೂರ, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net