ಸುರಕ್ಷತೆಯಿಂದ ವಾಹನ ಚಾಲನೆ ಮಾಡಿ; ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮದಲ್ಲಿ ಎಸ್‌ಪಿ ಯಶೋಧಾ ವಂಟಗೋಡಿ ಸಲಹೆ

nwksrtc, dc, sp, dto, road safety,
nwksrtc, dc, sp, dto, road safety,
Published on
ಹಾವೇರಿ: ದೇಶದಲ್ಲಿ ಸಾರಿಗೆ ಸೌಲಭ್ಯ ಒದಗಿಸುವಲ್ಲಿ ವಾ.ಕ.ರ.ಸಾ. ಸಂಸ್ಥೆ ಮೊದಲ ಸ್ಥಾನದಲ್ಲಿದೆ. ಪ್ರಯಾಣಿಕರ ಮತ್ತು ಕುಟುಂಬದವರ ಹಿತದೃಷ್ಟಿಯಿಂದ ಸುರಕ್ಷತೆಯಿಂದ ಚಾಲನೆ ಮಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಸಲಹೆ ನೀಡಿದರು.
ನಗರದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಾವೇರಿ ಘಟಕದಲ್ಲಿ ಶುಕ್ರವಾರ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ-2026 ಮತ್ತು ಇಂಧನ ಉಳಿತಾಯ ಮಾಸಿಕ-2026 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಾ.ಕ.ರ.ಸಾ.ಸಂಸ್ಥೆಯ ಸಾರಿಗೆಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಹೆಚ್ಚಿನ ಪ್ರಯಾಣಿಕರು ಸಂಚಾರ ಮಾಡುತ್ತಾರೆ. ಸಂಸ್ಥೆ ಉತ್ತಮ ಸಸೇವೆ ನೀಡುತ್ತಿದೆ. ನನ್ನ ಶಾಲಾ ದಿನಗಳಿಂದ ವಾ.ಕ.ರ.ಸಾ. ಸಂಸ್ಥೆಯೊಂದಿಗೆ ಅವಿನಾಭಾವ ಸಂಬಂಧವಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ ಜಿ. ಮಾತನಾಡಿ, ಚಾಲನಾ ಸಿಬ್ಬಂದಿ ಅಪಘಾತ ಮತ್ತು ಅಪರಾಧ ರಹಿತ ಚಾಲನೆ ಮಾಡಿ, ಬೆಳ್ಳಿ ಪದಕ ಮತ್ತು ಮುಖ್ಯಮಂತ್ರಿ ಚಿನ್ನದ ಪದಕ ಪಡೆಯುವಂತೆ ಕರ್ತವ್ಯ ನಿರ್ವಹಿಸಬೇಕು. ಅಪಘಾತಗಳಿಂದ ಸಂಸ್ಥೆಗೆ ಆರ್ಥಿಕ ನಷ್ಟವಾಗುತ್ತದೆ. ಹಾಗಾಗಿ, ನಮ್ಮ ಚಾಲಕರು ಅಪಘಾತ ರಹಿತ ಸೇವೆ ಮೂಲಕ ಇನ್ನೂ ಹೆಚ್ಚು ಜನಸ್ನೇಹಿ ಆಗಬೇಕು ಎಂದು ಕರೆ ನೀಡಿದರು. ಸಂಸ್ಥೆಗೆ ಹೊಸದಾಗಿ ಚಾಲಕ ಹುದ್ದೆಗೆ ಆಯ್ಕೆಯಾದ ಚಾಲನಾ ಸಿಬ್ಬಂದಿಗೆ ಶುಭ ಕೋರಿದರು.
ಸರ್ವೀಸ್ ಇಂಜಿನಿಯರ್‌ಗಳಾದ ಮುಕಂದರ್ ಹಾಗೂ ಅಶೋಕ ಲೈಲಾಂಡ್ ಮಾತನಾಡಿ, ಇಂಧನದ ಮಹತ್ವ ಮತ್ತು ವಾಹನಗಳ ಮೈಲೇಜ್ ಹೆಚ್ಚಿಸುವ ಕುರಿತು ಚಾಲನಾ ಸಿಬ್ಬಂದಿಗೆ ತಿಳಿವಳಿಕೆ ನೀಡಿದರು. ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸಲಹೆ ನೀಡಿದರು.
ವಿಭಾಗೀಯ ತಾಂತ್ರಿಕ ಅಭಿಯಂತರ ಕೆ.ಆರ್.ನಾಯ್ಕ, ಇಂಧನ ದ್ರವ ರೂಪದ ಬಂಗಾರವಾಗಿದ್ದು, ವಾಹನ ಚಾಲನಾ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಭಾಗದ ಆಡಳಿತಾಧಿಕಾರಿ, ಉಗ್ರಾಣಾಧಿಕಾರಿ, ಸಹಾಯಕ ಲೆಕ್ಕಾಧಿಕಾರಿ, ಟಿ.ಜೆ.ನದಾಫ, ಕೃಷ್ಣ ರಾಮಣ್ಣವರ, ಗೀತಾ ಸರ್ವೇದ, ಸುಪ್ರೀತ ಬೂದಿ, ಆರ್.ಎಸ್.ಮಾಸೂರು, ಕುಮಾರ ಕೆ., ಗಣೇಶ ಮತ್ತು ಘಟಕದ ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿ ಉಪಸ್ಥಿತರಿದ್ದರು.
ಘಟಕದ ವ್ಯವಸ್ಥಾಪಕ ಪ್ರಶಾಂತ ಸಂಗ್ರೇಶಿ ಸ್ವಾಗತಿಸಿದರು, ಮಲ್ಲಿಕಾರ್ಜುನ ಹಿಂಚಿಗೇರಿ ನಿರೂಪಿಸಿದರು. ಸಹಾಯಕ ಕಾರ್ಮಿಕ ಕಲ್ಯಾಣಾಧಿಕಾರಿ ಈರಪ್ಪ ಕಡ್ಲಿಮಟ್ಟಿ ವಂದಿಸಿದರು.
ವರ್ಷಕ್ಕೆ 2 ಲಕ್ಷ ಸಾವು
ಪ್ರತಿ ವರ್ಷ ಅಪಘಾತದಿಂದಲೇ ಸುಮಾರು 2 ಲಕ್ಷ ಜನ ಮರಣ ಹೊಂದುತ್ತಾರೆ. ಸಂಸ್ಥೆಯ ಚಾಲಕರು ದಿನನಿತ್ಯದ ಕರ್ತವ್ಯದಲ್ಲಿ ಶಿಸ್ತು, ಸಂಯಮ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಅಪಘಾತ ರಹಿತ ಸೇವೆ ಸಲ್ಲಿಸುವುದರ ಮೂಲಕ ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೇವೆ ಸಲ್ಲಿಸುವುದು ನಮ್ಮ ಆದ್ಯತೆಯಾಗಬೇಕು ಎಂದು ವಿಭಾಗೀಯ ಸಂಚಾರ ಅಧಿಕಾರಿ ಅಶೋಕ ಪಾಟೀಲ ಕರೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net