ಬಸ್ ನಿಲ್ದಾಣಗಳಲ್ಲಿ ತಂಬಾಕು ಮಾರುವಂತಿಲ್ಲ; ಸಾರ್ವಜನಿಕ ಸ್ಥಳದಲ್ಲಿ ಬಳಸಿದರೆ ಸಾವಿರ ರೂ. ದಂಡ; ತಂಬಾಕು ನಿಯಂತ್ರಣ ಕುರಿತು ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ

Haveri, No Tobaco, DC COTPA, Meeting,
Haveri, No Tobaco, DC COTPA, Meeting,
Published on
ಹಾವೇರಿ: ಜಿಲ್ಲೆಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಗಳ ಮಳಿಗೆಗಳಲ್ಲಿ ಕಡ್ಡಾಯವಾಗಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಲು ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.
ದೇವಗಿರಿಯ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ತಂಬಾಕು ನಿಯಂತ್ರಣ ಕುರಿತು ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ನಡೆಸಿದ ಅವರು, ತಂಬಾಕು ನಿಯಂತ್ರಣ ತಿದ್ದುಪಡಿ ಕಾಯ್ದೆ-2024ರ ಅನ್ವಯ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆ ನಿಷೇಧಿಸಲಾಗಿದೆ. 21 ವರ್ಷದ ಒಳಗಿನವರಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ. ದಂಡದ ಮೊತ್ತವನ್ನು 200 ರೂ. ಬದಲಾಗಿ ಒಂದು ಸಾವಿರಕ್ಕೆ ಹೆಚ್ಚಿಸಲಾಗಿದೆ. ಈ ಕಾಯ್ದೆಗಳ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ದಂಡದ ಸೂಚನಾ ಫಲಕ ಅಳವಡಿಸಬೇಕು ಎಂದು ಸೂಚಿಸಿದರು.
ತಂಬಾಕು ಉತ್ಪನ್ನಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಿಗೆ, ಶಾಲಾ-ಕಾಲೇಜ್ ಮಕ್ಕಳಿಗೆ ಸತತವಾಗಿ ಅರಿವು ಮೂಡಿಸಬೇಕು. ತಾಲೂಕು ಮಟ್ಟದಲ್ಲಿ ನಿಯಮಾನುಸಾರ ಸಭೆ ನಡೆಸಬೇಕು. ಅಂಗಡಿಗಳ ಮೇಲೆ ಅನಿರೀಕ್ಷಿತ ದಾಳಿ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗಳಲ್ಲಿ ತಂಬಾಕು ಮಾರಾಟಗಾರರಿಗೆ ನಿಯಮನುಸಾರ ಪ್ರತ್ಯೇಕ ಪರವಾನಗಿ ನೀಡಬೇಕು ಎಂದು ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಯಾನಂದ, ಡಾ.ಚನ್ನಬಸಯ್ಯ ವಿರಕ್ತ ಮಠ, ಡಾ.ಸರಿತಾ, ಡಾ.ನೀಲೇಶ, ಡಾ.ಸಂತೋಷ ದಡ್ಡಿ, ತಾಲೂಕು ಆರೋಗ್ಯಾಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ತಂಬಾಕುಮುಕ್ತ ಗ್ರಾಮ ನಾಮಫಲಕ ಹಾಕಿ
ನಿಯಮಾನುಸಾರ ಶಾಲಾ-ಕಾಲೇಜ್‌ಗಳ 100 ಮೀಟರ್ ಅಂತರದೊಳಗೆ ತಂಬಾಕು ಉತ್ಪನ್ನಗಳ ಮಾರಾಟ ಮಾಡುವಂತಿಲ್ಲ. ಆಯಾ ಶಾಲಾ-ಕಾಲೇಜ್‌ಗಳ ವ್ಯಾಪ್ತಿಯ ಸ್ಥಳೀಯ ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಶಿಕ್ಷಕರು, ಎಸ್.ಡಿ.ಎಂ.ಸಿ. ಪ್ರತಿನಿಧಿಗಳು ಹಾಗೂ ಪೊಲೀಸ್ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ತಂಬಾಕು ಮುಕ್ತ ಶಿಕ್ಷಣ ಸಂಸ್ಥೆ ಮಾಡಬೇಕು ಹಾಗೂ ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ನಿರ್ಮಿಸಬೇಕು. ಕೋಟ್ಪಾ ಕಾಯ್ದೆ ಪರಿಣಾಮಕಾರಿ ಅನುಷ್ಠಾನದ ಮೂಲಕ ತಂಬಾಕು ಮುಕ್ತ ಗ್ರಾಮ ಘೋಷಣೆಯಾದ ಗ್ರಾಮಗಳಲ್ಲಿ ನಾಮಫಲಕ ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ಡಿಸಿ ನಿರ್ದೇಶಿಸಿದರು.
316 ಪ್ರಕರಣ, 30 ಸಾವಿರ ದಂಡ
ಜಿಲ್ಲಾ ಮಟ್ಟದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಜಿಲ್ಲೆಯಲ್ಲಿ 2025-26ನೇ ಸಾಲಿನಲ್ಲಿ 29 ದಾಳಿ ನಡೆಸಿ, 316 ಪ್ರಕರಣ ದಾಖಲಿಸಲಾಗಿದೆ. 30,100 ರೂ. ದಂಡ ವಿಧಿಸಲಾಗಿದೆ. 494 ಪುರುಷ ಹಾಗೂ 58 ಮಹಿಳೆಯರು ಸೇರಿ 552 ಜನರಿಗೆ ಆಪ್ತಸಮಾಲೋಚನೆ ನಡೆಸಲಾಗಿದೆ. ನಿಕೋಟಿನ್ ಗಮ್ಸ್ ಹಾಗೂ ಅಗತ್ಯ ಚಿಕಿತ್ಸೆ ನೀಡಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಗದೀಶ ಪಾಟೀಲ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net