ಹಾವೇರಿ- ಶಿರಸಿ ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ; 30ರ ಒಳಗೆ ವಾಹನ ಸಂಚಾರಕ್ಕೆ ಅನುವು ಮಾಡಿ * ಎನ್‌ಎಚ್ ಅಧಿಕಾರಿಗಳಿಗೆ ಬೊಮ್ಮಾಯಿ ಖಡಕ್ ಸೂಚನೆ

Haveri, MP Bommai, NH Officers, Meeting, Sirsi, Haveri rorad,
Haveri, MP Bommai, NH Officers, Meeting, Sirsi, Haveri rorad,
Published on
ಹಾವೇರಿ: ಸಾಗರ ಮಾಲಾ ಯೋಜನೆ ಅಡಿಯಲ್ಲಿ ಹಾವೇರಿಯಿಂದ ಶಿರಸಿವರೆಗೆ ನಿರ್ಮಿಸುತ್ತಿರುವ ರಸ್ತೆ ಅಭಿವೃದ್ದಿ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ. ಏ.30ರ ಒಳಗಾಗಿ ಎಲ್ಲ ರಸ್ತೆಯೂ ವಾಹನ ಸಂಚಾರಕ್ಕೆ ಸುಗಮವಾಗುವಂತೆ ಮಾಡಿ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ನಗರದ ಲೋಕಸಭಾ ಸದಸ್ಯರ ಜನಸಂಪರ್ಕ ಕಾರ್ಯಾಲಯದಲ್ಲಿ ಗುರುವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆಯಲ್ಲಿ ಕಾಮಗಾರಿಯ ಸಮಗ್ರ ಮಾಹಿತಿ ಪಡೆದು ಅವರು ಮಾತನಾಡಿದರು.
ಹಾನಗಲ್ಲಿನ ನಾಲ್ಕರ ಕ್ರಾಸ್‌ನಿಂದ ಸಮ್ಮಸಗಿವರೆಗಿನ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಹಾಳಾಗಿದ್ದು, ಅದನ್ನು ವಾಹನ ಸಂಚಾರಕ್ಕೆ ಸುಗಮಗೊಳಿಸಬೇಕು ಹಾಗೂ ಹಾವೇರಿಯಿಂದ ಹಾನಗಲ್ಲ ಸಂಪರ್ಕಿಸುವ ರಸ್ತೆ ಅಲ್ಲಲ್ಲಿ ಹಾಳಾಗಿದ್ದು, ಅದನ್ನು ಸರಿಪಡಿಸಲು ಸೂಚಿಸಿದರು.
ಈಗಾಗಲೇ ಮಾಡಿರುವ 5 ಕಿ.ಮೀ ರಸ್ತೆಯನ್ನು ವಾಹನ ಸಂಚಾರ ಮಾಡುವ ಹಾಗೆ ಮಾಡಿ ಉಳಿದ 3 ಕಿ.ಮಿ ಯಾವಾಗ ಮಾಡುತ್ತೀರಿ ಹೇಳಿ, ಕಂತ್ರಿಕೊಪ್ಪ ಇಂದ ಸಮ್ಮಸಗಿವರೆಗೆ ರಸ್ತೆ ಸಂಪೂರ್ಣ ಹಾಳಾಗಿದ್ದು, ಅದನ್ನು ವಾಹನ ಸಂಚಾರಕ್ಕೆ ಅನುಕೂಲ ಮಾಡಬೇಕು. ಮೊದಲಿಗೆ ಇರುವ ರಸ್ತೆಯನ್ನು ಸಂಪೂರ್ಣವಾಗಿ ತೆಗೆದು 2 ಪದರು ಹಾಕಿ ವಾಹನ ಸಂಚಾರಕ್ಕೆ ಸರಿ ಪಡಿಸಬೇಕು. ಅಕ್ಕಿಆಲೂರು ಬಸ್ ನಿಲ್ದಾಣದ ಎದುರಿಗೆ ರಸ್ತೆಯಲ್ಲಿ ನೀರು ನಿಲ್ಲುವುದನ್ನು ಸರಿಪಡಿಸಬೇಕು ಎಂದರು.
ಹಾನಗಲ್ಲ ನಾಲ್ಕರ ಕ್ರಾಸ್‌ನಿಂದ 4.5 ಕಿ.ಮಿ ಹನುಮನಕೊಪ್ಪದವರೆಗೆ ಡಿಬಿಎಂ (ಡೆನ್ಸ್ ಬಿಟುಮಿನಸ್ ಮ್ಯಾಕಡಮ್) ಮುಗಿದಿದೆ. ಹನುಮನಕೊಪ್ಪದಿಂದ ಬ್ಯಾಲಹಳ್ಳಿ 2.5 ಕೀ.ಮಿ.ವರೆಗೆ ಜೆ.ಎಸ್.ಬಿ.ವರೆಗೆ ಮುಗಿದಿದೆ. ಸಬ್ ಗ್ರೇಡ್ ಮಾಡಿ ಡಿಬಿಎಂ ಮುಗಿಸಲು 25 ದಿನ ಬೇಕು ಬಾಲಹಳ್ಳಿಯಿಂದ ಕತ್ರಿಕೊಪ್ಪ 1 ಕಿ.ಮೀ.ವರೆಗೆ ಡಿಬಿಎಂ ಮಾಡಲು ಇದೇ ಮೇ 10ವರೆಗೆ ವಾಹನ ಸಂಚಾರಕ್ಕೆ ಮಾಡುತ್ತೇವೆ ಎಂದು ಅಧಿಕಾರಿಗಳು ಹೇಳಿದರು.
ಸಭೆಯಲ್ಲಿ ಹೊನ್ನಾವರ ಎನ್‌ಎಚ್‌ಎಐ ಪ್ರಾಜೆಕ್ಟ್ ಡೈರೆಕ್ಟರ್ ಎಂ.ಶಿವಕುಮಾರ, ಸೈಟ್ ಇಂಜನಿಯರ್ ಅಮರ, ಟೀಮ್ ಲೀಡರ್ ವಿನಾಯಕ ಸೊಂಟಕ್ಕೆ, ರಾಘವೇಂದ್ರ, ಎಂ.ಎಸ್.ಖಾನ್, ಹಿರಿಯ ಇಂಜನಿಯರ್‌ಗಳು ಉಪಸ್ಥಿತರಿದ್ದರು.
ನನ್ನ ಜತೆ ಆಟ ಆಡಬೇಡಿ..
ಯೋಜನೆಯ ಕಾಮಗಾರಿ ವಿಳಂಬ ಮಾಡಬಾರದು ಜನರ ಜೀವದ ಜತೆಗೆ ಚೆಲ್ಲಾಟ ಆಡಬಾರದು. ನನ್ನ ಜತೆಗೆ ಆಟ ಆಡಬೇಡಿ, ಕೆಲಸ ಸರಿಯಾಗಿ ಮಾಡದಿದ್ದರೆ ನಿಮ್ಮನ್ನು ಹತ್ತು ವರ್ಷಗಳವರೆಗೆ ಕಪ್ಪು ಪಟ್ಟಿಗೆ ಸೇರಿಸುತ್ತೇನೆ. ನನಗೆ ಕೆಲಸ ಆಗಬೇಕು ಅಷ್ಟೇ. ನಾನು ಬೇರೆ ರಾಜಕಾರಣಿ ರೀತಿ ಅಲ್ಲ ಎಂದು ಬೊಮ್ಮಾಯಿ ಎಚ್ಚರಿಕೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net