ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮತಗಳನ್ನು ಕದ್ದಿದೆ; ವಿಧಾನ ಪರಿಷತ್ ಮುಖ್ಯಸಚೇತಕ ಸಲೀಂ ಅಹ್ಮದ್ ಆರೋಪ

Haveri, MLC< Saleem Ahmed, Press Byte,
Haveri, MLC< Saleem Ahmed, Press Byte,
Published on
ಹಾವೇರಿ: ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ 2,201 ಮತಗಳಲ್ಲಿ ನಾವು ಗೆದ್ದಿದ್ದೆವು. ಆದರೆ, ಬಿಜೆಪಿ ಷಡ್ಯಂತ್ರ ಮಾಡಿ ಮತ ಕಳ್ಳತನ ಮಾಡಿ ಈಗ ಗೆಲುವು ಸಾಧಿಸಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಆರೋಪಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋರ್ಟ್ ಮತಗಳನ್ನು ಎಣಿಸಲು ಹೇಳಿತ್ತು. ಮತಗಳ ಎಣಿಕೆ ನಂತರ ಕೋರ್ಟ್‌ಗೆ ತಿಳಿಸಬೇಕಿತ್ತು. ಆದರೆ, ಅದನ್ನು ಬಿಟ್ಟು ಘೋಷಣೆ ಮಾಡಿದ್ದಾರೆ. ಬ್ಯಾಲೆಟ್ ಪೇಪರ್ ತಿದ್ದುವ ಮೂಲಕ ಸೋತವರನ್ನು ಗೆಲ್ಲಿಸಿದ್ದಾರೆ. ಬಿಜೆಪಿ ವೋಟು ಚೋರಿ ಪಾರ್ಟಿ. ಬೆಂಗಳೂರು ಸೆಂಟ್ರಲ್ನಲ್ಲಿ ವೋಟು ಕಳ್ಳತನ ಮಾಡಿರುವುದನ್ನು ನಾವು ತೋರಿಸಿದ್ದೆವು. ಇದರ ವಿರುದ್ಧವೂ ನಾವು ಕಾನೂನು ಹೋರಾಟ ಮಾಡುತ್ತೇವೆ. ಮತ ಎಣಿಕೆ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾಗಳು ಇರುತ್ತವೆ. ಅವುಗಳನ್ನು ತೆಗೆದು ನೋಡುವ ಕೆಲಸ ಮಾಡಬೇಕು ಎಂದರು.
ದಾವಣಗೆರೆ ಹಾಗೂ ಬಾಗಲಕೋಟೆ ಎರಡು ಉಪಚುನಾವಣೆಗಳಲ್ಲಿ ಜನರು ನಮಗೆ ಆಶೀರ್ವಾದ ಮಾಡಿದ್ದಾರೆ. 2028ಕ್ಕೆ ನಮ್ಮ ಸರ್ಕಾರ ಅಧಿಕಾರಿಕ್ಕೆ ಬರಲು ಇದು ದಿಕ್ಸೂಚಿ ಆಗಲಿದೆ. ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತೇವೆ ಅಂದಿದ್ದರು. ಒಂಬತ್ತು ತಿಂಗಳ ಹಿಂದೆ ಮೂರು ಉಪಚುನಾವಣೆಯಲ್ಲೂ ಕಾಂಗ್ರೆಸ್ ಗೆದ್ದಿದೆ. ಸಿದ್ದರಾಮಯ್ಯ, ಡಿಕೆಶಿ ನಾಯಕತ್ವದ ಸರ್ಕಾರ ನುಡಿದಂತೆ ನಡೆದಿದೆ. ಗ್ಯಾರಂಟಿಗಳೇ ನಮ್ಮ ಗೆಲುವಿಗೆ ಶ್ರೀರಕ್ಷೆಯಾಗಿವೆ. 2028ರಲ್ಲೂ ಕಾಂಗ್ರೆಸ್ ಅಧಿಕಾರಿಕ್ಕೆ ಬರಲಿದೆ. ಬಿಜೆಪಿಯವರು ಗ್ಯಾರಂಟಿಗಳನ್ನು ನಿಲ್ಲಿಸಿ ಅಂತಾ ಹೇಳಲಿ ನೋಡೋಣ. ರಾಜ್ಯದಲ್ಲಿ ಗ್ಯಾರಂಟಿಗಳ ಜತೆಗೆ ಅಭಿವೃದ್ಧಿ ಆಗುತ್ತಿದೆ. ಮುಂದೆಯೂ ರಾಜ್ಯದ ಜನರು ನಮ್ಮ ಕೈ ಹಿಡಿಯುತ್ತಾರೆ ಎಂದರು.
ತಮಿಳುನಾಡಿನಲ್ಲಿ ರಾಜ್ಯಪಾಲರು ರಾಜಕಾರಣ ಮಾಡಿ ಅತಂತ್ರ ಮಾಡಿದ್ದಾರೆ. ದೊಡ್ಡ ಪಕ್ಷವನ್ನು ಕರೆದು ಬಹುಮತ ಸಾಬೀತಿಗೆ ಅವಕಾಶ ಕೊಡಬೇಕಿತ್ತು. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಬಹುಮತ ಸಾಬೀತಿಗೆ ಅವಕಾಶ ಕೊಡದೇ ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ. ರಾಜ್ಯಪಾಲರ ಕೆಲಸ ರಾಜಕೀಯ ಪ್ರೇರಿತವಾಗಿದೆ ಎಂದು ದೂರಿದರು.
ವಿಜಯ ಅವರನ್ನು ಸಿಎಂ ಮಾಡಬಾರದು ಅಂತಾ ಕೇಂದ್ರ ಸರ್ಕಾರ ಷಡ್ಯಂತ್ರ ಮಾಡುತ್ತಿದೆ. ದೊಡ್ಡ ಪಕ್ಷ ಯಾವುದಿದೆ ಅವರಿಗೆ ಅವಕಾಶ ಕೊಡಬೇಕು. ಅಲ್ಲಿ ಬಹುಮತ ಸಾಬೀತಾಗಬೇಕು. 113 ಸೀಟುಗಳಿವೆ, ಅವಕಾಶ ಕೊಡಬೇಕು ಎಂದರು.
ತಿಂಗಳಲ್ಲಿ ಸಚಿವ ಸಂಪುಟ ಪುನಾರಚನೆ
ಚುನಾವಣೆಗಳಲ್ಲಿ ನಾಯಕರು ಬಿಸಿ ಆಗಿದ್ದರಿಂದ ಸಂಪುಟ ಪುನಾರಚನೆ ವಿಳಂಭ ಆಗಿತ್ತು. ಬಹುಶಃ ಈ ತಿಂಗಳಲ್ಲಿ ಸಂಪುಟ ಪುನಾರಚನೆ ಆಗಬಹುದು. ಸಿಎಂ, ಡಿಸಿಎಂ ಸೇರಿದಂತೆ ಹೈಕಮಾಂಡ್ ನಾಯಕರು ಸೇರಿ ಅಂತಿಮ ತೀರ್ಮಾನ ಮಾಡುತ್ತಾರೆ. ಆದಷ್ಟು ಬೇಗ ಸಚಿವ ಸಂಪುಟ ಪುನಾರಚನೆ ಆಗುತ್ತದೆ ಎಂದು ಸಲೀಂ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net