ಮೋದಿ ಕಾಲದಲ್ಲಿ ರಾಜ್ಯಕ್ಕೆ 2,86,730 ಕೋಟಿ ರೂ. ತೆರಿಗೆ; ಸಿಂಗ್ ಅವಧಿಯಲ್ಲಿ 81,784 ಲಕ್ಷ ಕೋಟಿ ಬಂದಿತ್ತು; ಎಂಎಲ್‌ಸಿ ಎನ್.ರವಿಕುಮಾರ ಮಾಹಿತಿ

Haveri, MLC, N.Ravikumar, Pressmeet, Modi 2.0,
Haveri, MLC, N.Ravikumar, Pressmeet, Modi 2.0,
Published on
ಹಾವೇರಿ: ಯುಪಿಎ ಸರ್ಕಾರದಲ್ಲಿ ಅಂದಿನ ಪ್ರಧಾನಿ ಮನಮೋಹನ ಸಿಂಗ್ ಅವರ ಹತ್ತು ವರ್ಷದ ಅವಧಿಯಲ್ಲಿ ರಾಜ್ಯಕ್ಕೆ ಕೇವಲ 81,784 ಲಕ್ಷ ಕೋಟಿ ರೂ. ತೆರಿಗೆ ನೀಡಲಾಗಿತ್ತು. ಎನ್‌ಡಿಎ ಸರ್ಕಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಾಲದಲ್ಲಿ 10 ವರ್ಷದಲ್ಲಿ 2,86,730 ಕೋಟಿ ರೂ. ತೆರಿಗೆ ರಾಜ್ಯಕ್ಕೆ ನೀಡುವ ಮೂಲಕ ಶೇ.262ರಷ್ಟು ಹೆಚ್ಚಿನ ತೆರಿಗೆಯನ್ನು ಮೋದಿ ನೀಡಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷದ ಮುಖ್ಯ ಸಚೇತಕ‌ ಎನ್. ರವಿಕುಮಾರ ಹೇಳಿದರು.
ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಅತ್ಯಂತ ದೀರ್ಘಾವಧಿಯ ಚುನಾಯಿತ ಪ್ರಧಾನಿ ಎಂಬ ಗೌರವ ಪಡೆದಿರುವ ನರೇಂದ್ರ ಮೋದಿ ವಿಶ್ವದ ಗಮನ ಸೆಳೆಯುತ್ತಿದ್ದಾರೆ. ಕೇಂದ್ರ ಸರಿಯಾಗಿ ನಮ್ಮ ಪಾಲಿನ ತೆರಿಗೆ ಹಣ ನೀಡುತ್ತಿಲ್ಲ ಎಂದು ಹಿಂದಿನ ಸಿಎಂ ಸಿದ್ದರಾಮಯ್ಯ ಆರೋಪಿಸುತ್ತಿದ್ದರು. ಈ ಕುರಿತು ಬಿಜೆಪಿ ಅಂಕಿ- ಅಂಶ ಬಿಡುಗಡೆ ಮಾಡಿದ ನಂತರ ಸುಮ್ಮನಾದರು ಎಂದರು.
ದೇಶದಲ್ಲಿ ನಕ್ಸಲಿಸಂ ಶೂನ್ಯವಾಗಿದೆ. ಭಯೋತ್ಪಾದನೆ ಚಟುವಟಿಕೆ ಮಟ್ಟ ಹಾಕಲಾಗಿದೆ. ಕೋವಿಡ್ ಮಹಾಮಾರಿ ಎದುರಿಸುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಭಾರತ ದೊಡ್ಡ ಸಾಧನೆ ಮಾಡಿದೆ. ಪ್ರಪಂಚದಾದ್ಯಂತ ಯೋಗ ದಿನ ಆಚರಿಲಾಗುತ್ತಿದೆ. ಭಾರತ ಡಿಜಿಟಲ್ ಇಂಡಿಯಾ ಆಗಿದೆ. ತುಮಕೂರಿನಲ್ಲಿ ಹೆಲಿಕಾಪ್ಟರ್ ತಯಾರಿಕಾ ಘಟಕ ಆರಂಭಿಸಲಾಗಿದೆ. ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ಕಾರಿಡಾರ್, ಸೇರಿದಂತೆ ಅನೇಕ ಯೋಜನೆಗಳನ್ನು ಕೇಂದ್ರ ಸರ್ಕಾರ ರಾಜ್ಯದಲ್ಲಿ ಜಾರಿಗೊಳಿಸಿದೆ ಎಂದರು.
ಫ್ರಾನ್ಸ್ ಹಾಗೂ ಭಾರತದ ನೇತೃತ್ವದಲ್ಲಿ ಸ್ಥಾಪಿಸಿರುವ ಇಂಟರ್ ನ್ಯಾಶನಲ್ ಸೋಲಾರ್ ಅಲಯನ್ಸ್‌ಗೆ 120 ರಾಷ್ಟ್ರಗಳು ಸದಸ್ಯತ್ವ ಪಡೆದಿವೆ. 190 ದೇಶಗಳಿಗೆ 7,500 ಬಗೆಯ ಸರಕುಗಳು ಭಾರತದಿಂದ ರಫ್ತು ಆಗುತ್ತಿವೆ. 6,000 ವಸ್ತುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ದೇಶದ ಸೈನಿಕರಿಗೆ ಬೇಕಾದ ಶೂ, ಬುಲೆಟ್ ಫ್ರೂಪ್ ಜಾಕೆಟ್ ಬೇರೆ ದೇಶದಿಂದ ಬರುತ್ತಿತ್ತು. ಈಗ ಇಲ್ಲೇ ಉತ್ಪಾದನೆ ಆಗುತ್ತಿವೆ ಎಂದರು.
ನರೇಗಾ ಯೋಜನೆಯನ್ನು ವಿಬಿಜಿ ರಾಮ್‌ಜಿ ಎಂದು ಪರಿವರ್ತಿಸಿ ಪಾರದರ್ಶಕತೆ ತರಲಾಗಿದೆ. ರಾಜ್ಯದ 6.16 ಲಕ್ಷ ಬೀದಿಬದಿ ವ್ಯಾಪಾರಿಗಳಿಗೆ ಸಾಲ ನೀಡಲಾಗಿದೆ. 1,610 ಜನೌಷಧ ಕೇಂದ್ರಗಳು ಆರಂಭಿಸಿದ್ದು, 1.90 ಕೋಟಿ ರಾಜ್ಯದಲ್ಲಿ ಆಯುಷ್ಮಾನ್ ಭಾರತ ಕಾರ್ಡ್ ನೀಡಲಾಗಿದೆ. ರಾಜ್ಯದಲ್ಲಿ 4.20 ಕೋಟಿ ಜನರಿಗೆ ಪ್ರತಿ ತಿಂಗಳು ತಪ್ಪದೇ 5 ಕೆಜಿ ಪಡಿತರ ಅಕ್ಕಿ ವಿತರಿಸಲಾಗುತ್ತಿದೆ. 43.20 ಲಕ್ಷ ರೈತರಿಗೆ ಕಿಸಾನ್ ಸಮ್ಮಾನ್ ನೀಡಲಾಗುತ್ತಿದೆ. ಜೆಜೆಎಂ ಮೂಲಕ 87 ಲಕ್ಷ ಮನೆಗಳಿಗೆ ನೀರು ಒದಗಿಸಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕ ಶಿವರಾಜ ಸಜ್ಜನರ, ವಿಭಾಗದ ಪ್ರಭಾರಿ ಭೋಜರಾಜ ಕರೂದಿ, ನೀಲಪ್ಪ ಚಾವಡಿ, ಸಂತೋಷ ಆಲದಕಟ್ಟಿ, ನಂಜುಂಡೇಶ ಕಳ್ಳೇರ, ನಿರಂಜನ ಹೆರೂರ, ವಿಜಯಕುಮಾರ ಚಿನ್ನಿಕಟ್ಟಿ, ಇತರರಿದ್ದರು.
ಜೆಜೆಎಂನಲ್ಲಿ ಭ್ರಷ್ಟಾಚಾರ
ಜಿಲ್ಲೆಯಲ್ಲಿ ಜೆಜೆಎಂ ಯೋಜನೆಯಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ ಆಗಿದೆ. ನೀರಿನ ಟ್ಯಾಂಕ್ ಸುತ್ತ ಬೇಲಿ ನಿರ್ಮಿಸಲು ಕೆಲವೆಡೆ 5 ಲಕ್ಷ ರೂ. ಖರ್ಚು ತೋರಿಸಿದ್ದಾರೆ. ಇದರಲ್ಲಿ ಜಿಲ್ಲೆಯ ಕೆಲ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಆರೋಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net