ಹಾವೇರಿ ಜಿಲ್ಲೆಯಾದ್ಯಂತ ಔಷಧ ಅಂಗಡಿಗಳು ಬಂದ್ 20ರಂದು; ಆನ್‌ಲೈನ್ ಫಾರ್ಮಸಿ ನಿಯಂತ್ರಣಕ್ಕೆ ಆಗ್ರಹಿಸಿ ವ್ಯಾಪಾರಸ್ಥರ ಪ್ರತಿಭಟನೆ;
Haveri, Mediclas, Bundh, On May 20th, Drugs Association,
Published on:
Copied
Follow Us
ಹಾವೇರಿ: ನಗರದಲ್ಲಿ ರ‌್ಯಾಲಿ ವಿಜಯವಾಣಿ ಸುದ್ದಿಜಾಲ ಹಾವೇರಿ ಆನ್‌ಲೈನ್ ಫಾರ್ಮಸಿ ನಿಯಂತ್ರಣ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೇ 20ರಂದು ಜಿಲ್ಲೆಯಾದ್ಯಂತ ಎಲ್ಲ ಔಷಧ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಹಾವೇರಿ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಜಿಲ್ಲಾಧ್ಯಕ್ಷ ಸತ್ಯನಾರಾಯಣ ಕೇಲಗಾರ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ ದೇಶಾದ್ಯಂತ ಬಂದ್‌ಗೆ ಕರೆ ನೀಡಿದ್ದು, ಜಿಲ್ಲೆಯ ಎಲ್ಲ ಔಷಧ ವ್ಯಾಪಾರ ಮಳಿಗೆಗಳನ್ನು ಬಂದ್ ಮಾಡಿ ಬೆಂಬಲ ಸೂಚಿಸಲಾಗುವುದು. ಮೇ 20ರಂದು ಬೆಳಗ್ಗೆ ನಗರದ ಹುಕ್ಕೇರಿ ಮಠದಿಂದ ಮೈಲಾರ ಮಹದೇವಪ್ಪ ವೃತ್ತದವರೆಗೆ ಪತ್ರಿಭಟನಾ ರ‌್ಯಾಲಿ ನಡೆಸಿ, ನಂತರ ಜಿಲ್ಲಾಧಿಕಾರಿಯವರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದರು.
ಆನ್‌ಲೈನ್ ಮೂಲಕ ಔಷಧ ವ್ಯಾಪಾರ ನಡೆಸುವುದನ್ನು ನಿಲ್ಲಿಸಬೇಕು. ಈ ಸಂಬಂಧ ಕೋವಿಡ್ ಸಮಯದಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶಗಳನ್ನು ಹಿಂಪಡೆಯಬೇಕು. ಕಾರ್ಪೊರೇಟ್ ಕಂಪನಿಗಳಿಂದ ನಡೆಯುತ್ತಿರುವ ವಿನಾಯ್ತಿ ವ್ಯಾಪಾರ ನಿಲ್ಲಿಸಬೇಕು. ನಕಲಿ ಔಷಧಗಳ ಹಾವಳಿ ನಿಲ್ಲಿಸಿ ಸರಳ ಕಾನೂನುಗಳಿಂದ ಔಷಧ ವ್ಯಾಪಾರಿಗಳನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.
ರೋಗಿಗಳ ಸುರಕ್ಷತೆ, ನಕಲಿ ಔಷಧಗಳ ಭೀತಿ, ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ನೀಡುವ ಅತಿಯಾದ ರಿಯಾಯ್ತಿಗಳಿಂದ ಸ್ಥಳೀಯ ವ್ಯಾಪಾರಿಗಳ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದೆ. ಆನ್‌ಲೈನ್‌ನಲ್ಲಿ ವೈದ್ಯರ ಚೀಟಿ ಇಲ್ಲದೇ ಅಥವಾ ಒಂದೇ ಚೀಟಿ ಬಳಸಿ ಪದೇಪದೆ ಔಷಧ ಖರೀದಿ ಮಾಡುವುದರಿಂದ ಅಪಾಯ ಹೆಚ್ಚಲಿದೆ. ಜನರ ಜೀವಕ್ಕೆ ಅಪಾಯವಿರುವ ನಿಷೇಧಿತ ನಾರ್ಕೋಟಿಕ್ ಡ್ರಗ್‌ಗಳೂ ಆನ್‌ಲೈನ್‌ನಲ್ಲಿ ದೊರೆಯುತ್ತಿರುವುದು ಅಪಾಯಕಾರಿಯಾಗಿದೆ. ಸ್ಥಳೀಯ ಔಷಧ ಅಂಗಡಿಗಳ ಮೇಲೆ ಡ್ರಗ್ ಕಂಟ್ರೋಲರ್‌ಗಳು ನಿಗಾ ಇಡುತ್ತಾರೆ. ಹಾಗಾಗಿ, ನಿಯಮ ಬದ್ಧವಾಗಿ ವ್ಯಾಪಾರ ಮಾಡಲಾಗುತ್ತದೆ. ಇ-ಫಾರ್ಮಾಸಿಗಳ ಮೇಲೆ ಸರ್ಕಾರ ಸರಿಯಾದ ನಿಯಂತ್ರಣ ಹೊಂದಿಲ್ಲ. ಅವರು ಯಾವುದೇ ಮಾಹಿತಿಯನ್ನು ನೀಡುವುದಿಲ್ಲ. ಇದರಿಂದ ಸಮಾಜದ ಮೇಲೆ ಅಡ್ಡ ಪರಿಣಾಮ ಉಂಟಾಗುತ್ತಿದೆ ಎಂದು ದೂರಿದರು.
ಸಂಘದ ಉಪಾಧ್ಯಕ್ಷ ಶರದ್ ಕುದರಿ, ಕಾರ್ಯದರ್ಶಿ ರಾಜೇಂದ್ರ ಇರಕಲ್, ಖಜಾಂಚಿ ರಾಜೇಶ ಲೊಡಾಯ, ಹಾವೇರಿ ತಾಲೂಕು ಅಧ್ಯಕ್ಷ ಸಿದ್ದಣ್ಣ ಮೆಣಸಿನಹಾಳ, ಕಾರ್ಯದರ್ಶಿ ಸುಬ್ರಮಣ್ಯ, ನೀಲಕಂಠ ನಾಡಿಗೇರ, ಗೋಪಣ್ಣ, ಇತರರಿದ್ದರು.
ಯುದ್ದದ ಎಫೆಕ್ಟ್, ದರ ಹೆಚ್ಚಳ
ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಸಾಗಾಟದಲ್ಲಿ ವಿಳಂಬದಿಂದ ಅಗತ್ಯ ಔಷಧಗಳ ಕಚ್ಚಾವಸ್ತುಗಳ ಬೆಲೆ ಏರಿಕೆಯಾಗಿವೆ. ಜತೆಗೆ ದರದಲ್ಲಿ ಶೇ.10ರಷ್ಟು ಹೆಚ್ಚಳವಾಗಿದೆ. ಜಿಲ್ಲೆಯಲ್ಲಿ 700 ಔಷಧ ಮಾರಾಟ ಮಳಿಗೆಗಳು ನೋಂದಣಿಯಾಗಿದ್ದು, ಪ್ರಸ್ತುತ 600ಕ್ಕೂ ಅಧಿಕ ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ. ಪ್ರಸಕ್ತ ವರ್ಷದಲ್ಲಿ ನಿಯಮ ಉಲ್ಲಂಘಿಸಿದ ಅಂದಾಜು 50ಕ್ಕೂ ಅಧಿಕ ಅಂಗಡಿಗಳ ಲೈಸನ್ಸ್ ರದ್ದತಿಯಾಗಿದೆ ಎಂದರು.