ಮರಿಕಲ್ಯಾಣದಲ್ಲಿ ಸರ್ವಧರ್ಮ ಕಹಳೆ; ಹಿಂದು, ಮುಸ್ಲಿಂ, ಜೈನ, ಕ್ರೈಸ್ತ ಸಮುದಾಯದ ಧಾರ್ಮಿಕ ಸಮಾರಂಭ ಆಯೋಜನೆ; ಕಳೆಗಟ್ಟಿದ ಹಾವೇರಿ

Religious Programms
Religious Programms
Published on
ಹಾವೇರಿ: ಅರವತ್ತ ಮೂರು ಮಠಗಳನ್ನು ಹೊಂದುವ ಮೂಲಕ ಮರಿಕಲ್ಯಾಣ ಎಂಬ ಬಿರುದು ಪಡೆದಿರುವ ಹಾವೇರಿ ನಗರದಲ್ಲಿ ಈಗ ಸರ್ವಧರ್ಮ ಕಹಳೆ ಮೊಳಗಿದೆ. ಹಿಂದು, ಮುಸ್ಲಿಂ, ಜೈನ, ಕ್ರೈಸ್ತ ಸಮುದಾಯಗಳ ಬೃಹತ್ ಧಾರ್ಮಿಕ ಸಭೆ, ಸಮಾರಂಭಗಳಿಗೆ ಮರಿಕಲ್ಯಾಣ ಸಾಕ್ಷಿಯಾಗುತ್ತಿರುವುದು ವಿಶೇಷವಾಗಿದೆ.
ಮದ್ಯಪಾನ, ಧೂಮ್ರಪಾನ, ಗುಟಕಾ, ಮಟಕಾ, ಇಸ್ಪೀಟ್, ಮತ್ತಿತರ ದುಶ್ಚಟಗಳಿಗೆ ಬಲಿಯಾಗಿ ಧಾರ್ಮಿಕ ಆಚರಣೆ, ಪರಂಪರೆ, ಸಂಸ್ಕಾರಗಳನ್ನು ಮರೆಯುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಜನರನ್ನು ಧರ್ಮದತ್ತ ಕೊಂಡೊಯ್ಯುವ ಸಾಹಸಕ್ಕೆ ಕೈಹಾಕಿರುವ ವಿವಿಧ ಧರ್ಮಗಳ ಧರ್ಮ ಗುರುಗಳು ಮರಿಕಲ್ಯಾಣದತ್ತ ಮುಖ ಮಾಡಿದ್ದಾರೆ. ಡಿಸೆಂಬರ್‌ನಲ್ಲಿ ಹಿಂದು, ಮುಸ್ಲಿಂ, ಜೈನ, ಕ್ರೈಸ್ತ ಸಮುದಾಯಗಳ ದೊಡ್ಡ ಮಟ್ಟದ ಧರ್ಮಸಭೆ, ಸಮಾವೇಶಗಳು ನಡೆಯುತ್ತಿದ್ದು, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರ ಮಟ್ಟದ ಧರ್ಮ ಗುರುಗಳು ಯಾಲಕ್ಕಿ ನಗರಿಗೆ ಬಂದು ಠಿಕಾಣಿ ಹೂಡಿದ್ದಾರೆ. ಸಮಾವೇಶಗಳಲ್ಲಿ ಲಕ್ಷಾಂತರ ಜನರು ಭಾಗವಹಿಸುವ ಮೂಲಕ ಧಾರ್ಮಿಕ ಆಸಕ್ತಿಯನ್ನು ತೋರುತ್ತಿದ್ದಾರೆ.
ಜನಜಂಗುಳಿ, ಬ್ಯಾನರ್, ಬಂಟಿಂಗ್ ಭರಾಟೆ :
ವಿವಿಧ ಧರ್ಮಗಳ ಜಾಗೃತಿ ಸಮಾರಂಭ, ಸಮಾವೇಶಗಳಿಂದಾಗಿ ಹಾವೇರಿ ನಗರದಲ್ಲಿ ಸದ್ಯ ಜನಜಂಗುಳಿ ಸೃಷ್ಟಿಯಾಗಿದೆ. ಎಲ್ಲೆಲ್ಲೂ ಜನಜಾತ್ರೆ ಕಂಡುಬರುತ್ತಿದೆ. ನಗರದಾದ್ಯಂತ ವಿವಿಧ ಬಗೆಯ ಬ್ಯಾನರ್, ಬಂಟಿಂಗ್ ರಾರಾಜಿಸುತ್ತಿದೆ. ವಿದ್ಯುತ ಅಲಂಕಾರದಿಂದ ಹುಕ್ಕೇರಿ ಮಠ, ಜೈನಮಂದಿರ, ಚರ್ಚ್‌ಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಹುಕ್ಕೇರಿ ಮಠದ ಜಾತ್ರೆ ಅಂಗವಾಗಿ ನಗರದಾದ್ಯಂತ ವಿಶೇಷ ಅಲಂಕಾರ ಮಾಡಲಾಗಿದ್ದು, ಹಾವೇರಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಬಾಕ್ಸ್ ಹುಕ್ಕೇರಿ ಮಠದ ಜಾತ್ರೆ ವೈಭವ ಈ ಭಾಗದ ಪ್ರಸಿದ್ಧ ಮಠ ಹುಕ್ಕೇರಿ ಮಠದ ನಮ್ಮೂರ ಜಾತ್ರೆ ವೈಭವ ಮರುಕಳಿಸಿದೆ. ಈ ಬಾರಿ ಶ್ರೀ ಸದಾಶಿವ ಸ್ವಾಮೀಜಿಯವರ 15ನೇ ವರ್ಷದ ಪಟ್ಟಾಭಿಷೇಕದ ಅಂಗವಾಗಿ ಬೆಳ್ಳಿ ತುಲಾಭಾರ ಹಾಗೂ ಹುಕ್ಕೇರಿಮಠ ಶಾಲೆಯ ಸುವರ್ಣ ಮಹೋತ್ಸವ ಸಮಾರಂಭ ಮೇಳೈಸಿರುವುದು ಜಾತ್ರೆಗೆ ಹೆಚ್ಚಿನ ಮೆರಗು ಮತ್ತು ವೈಭವ ತಂದುಕೊಟ್ಟಿದೆ. ಜಾತ್ರೆ ಅಂಗವಾಗಿ ಶೇಗುಣಸಿ ವಿರಕ್ತಮಠದ ಡಾ.ಮಹಾಂತಪ್ರಭು ಸ್ವಾಮೀಜಿ ಅವರ ಪ್ರವಚನ, ಶ್ರೀ ಸದಾಶಿವ ಸ್ವಾಮೀಜಿ ಅವರ ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ ಪಾದಯಾತ್ರೆಗೆ ಜನಸಾಗರವೇ ಹರಿದು ಬರುತ್ತಿದೆ. ಈಗಾಗಲೇ 75 ಹಳ್ಳಿಗಳಲ್ಲಿ ಪಾದಯಾತ್ರೆ ನಡೆಸಿರುವ ಶ್ರೀಗಳು, ಹಾವೇರಿ ನಗರದಲ್ಲಿ ಪಾದಯಾತ್ರೆ ಶುರು ಮಾಡಿದ್ದಾರೆ.
ಜೈನ ಸಮಾಜದ ಧಾರ್ಮಿಕ ಶ್ರದ್ದೆ
ಜೈನಮುನಿಗಳಾದ ಚರ್ಯಾಶಿರೋಮಣಿ ವಿದಿತಸಾಗರ ಮಹಾರಾಜರು ಕಳೆದ ಒಂದು ತಿಂಗಳಿನಿಂದ ಹಾವೇರಿಯಲ್ಲೇ ವಾಸ್ತವ್ಯ ಹೂಡುವ ಮೂಲಕ ಸಮುದಾಯದ ಜನರಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಆರಂಭದಲ್ಲಿ ನಗರದ ಜೈನ ಮಂದಿರದಲ್ಲಿ ಚಾತುರ್ಮಾಸ ಕಾರ್ಯಕ್ರಮ ನಡೆದಿತ್ತು. ಸೆ.22ರಿಂದ 29ರವರೆಗೆ ಧಾರ್ಮಿಕ ಸಂಸ್ಕಾರ ಶಿಬಿರ ನಡೆದಿದ್ದು, ಸದ್ಯ ಡಿ.12ರಿಂದ ಬೃಹತ್ ಸಿದ್ಧಚಕ್ರ ಮಹೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ. ಹಾವೇರಿ ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಕಡೆಗಳಿಂದ ಆಗಮಿಸುತ್ತಿರುವ ಜೈನ ಸಮುದಾಯದವರು ಅತ್ಯಂತ ಶ್ರದ್ದೆಯಿಂದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.
ಸುನ್ನಿ ತರಬೇತಿ ಇಜ್ತಿಮಾ
ಹಾವೇರಿ ನಗರದ ಹೊರವಲಯ ಹಾವೇರಿ-ಹುಬ್ಬಳ್ಳಿ ರಸ್ತೆಯ ಪ್ರವೇಶ ದ್ವಾರದ ಬಳಿ ಮುಸ್ಲಿಂ ಸಮುದಾಯದಿಂದ ಡಿ.20, 21ರಂದು ‘ಸುನ್ನಿ ತರಬೇತಿ ಇಜ್ತಿಮಾ’ ಧಾರ್ಮಿಕ ಧರ್ಮ ಸಭೆ ಆಯೋಜಿಸಲಾಗಿದೆ. ಸಮುದಾಯದ ಹೆಣ್ಣು ಮಕ್ಕಳು ಹಾಗೂ ಪುರುಷರಿಗಾಗಿ ಪ್ರತ್ಯೇಕವಾದ ದಿನಗಳಂದು ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಜನ ಆಗಮಿಸಿದ್ದಾರೆ. 25 ವರ್ಷಗಳ ಬಳಿಕ ರಾಜ್ಯದಲ್ಲಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ರಾಷ್ಟ್ರ ಮಟ್ಟದ ಧರ್ಮಗುರುಗಳಾದ ಅಸ್ಜದ್ ರಜಾ ಖಾನ್ ಹಾಗೂ ಮುಫ್ತಿ ಜಿಯಾ ಉಲ್ ಮುಸ್ತಫಾ ಖಾದ್ರಿ, ಮತ್ತಿತರರು ವಿಶೇಷ ಪ್ರವಚನ, ತರಬೇತಿ ನೀಡುತ್ತಿದ್ದಾರೆ.
ಕ್ರಿಸ್‌ಮಸ್ ಆಚರಣೆಗೆ ಸಿದ್ಧತೆ
ಡಿಸೆಂಬರ್ ಬರುತ್ತಿದ್ದಂತೆ ಕ್ರೈಸ್ತ ಸಮುದಾಯದಲ್ಲಿ ಕ್ರಿಸ್‌ಮಸ್ ಹಬ್ಬದ ಕಳೆಗಟ್ಟುತ್ತದೆ. ನಗರದ ಸಿಎಸ್‌ಐ ಗುರುಕೃಪಾ ಚರ್ಚ್‌ನಲ್ಲಿ ಇತ್ತೀಚೆಗೆ ಕ್ರಿಸ್‌ಮಸ್ ಸಹಮಿಲನ ಕಾರ್ಯಕ್ರಮ ನಡೆದಿದೆ. ಧರ್ಮಜಾಗೃತಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದ್ದು, ಡಿ.25ರಂದು ಅದ್ಧೂರಿಯಾಗಿ ಕ್ರಿಸ್‌ಮಸ್ ಆಚರಿಸಲು ಕ್ರೈಸ್ತರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net