ಮುಂಗಾರು ಪೂರ್ವ ಮಳೆ, ಹೆಸ್ಕಾಂಗೆ 11.69 ಕೋಟಿ ಹಾನಿ; 1,652 ಕಂಬಗಳು, 8 ಹೈಟೆನ್ಶನ್ ಟಾವರ್ ಧರೆಗೆ

Haveri, Mansoon, Rain, Hescom, Losses, 11 Crores,
Haveri, Mansoon, Rain, Hescom, Losses, 11 Crores,
Published on
ಹಾವೇರಿ: ಜಿಲ್ಲೆಯಲ್ಲಿ ಸುರಿದ ಪೂರ್ವ ಮುಂಗಾರಿನ ಅಕಾಲಿಕ ಮಳೆಯಿಂದಾಗಿ ಹೆಚ್ಚು ಹಾನಿ ಸಂಭವಿಸಿದ್ದು, ಈ ಬಗ್ಗೆ ಜಿಲ್ಲಾಡಳಿತ ವರದಿ ಸಿದ್ಧಪಡಿಸಿದೆ. ಜಿಲ್ಲೆಯಾದ್ಯಂತ ವಿದ್ಯುತ್ ಸಂಪರ್ಕ ಕಲ್ಪಿಸುವ ವ್ಯವಸ್ಥೆಯಲ್ಲೂ ಅವಘಡಗಳು ಸಂಭವಿಸಿದ್ದು, ಇದರಿಂದಾಗಿ ಹೆಸ್ಕಾಂಗೆ 11.69 ಕೋಟಿ ರೂ. ಹಾನಿ ಉಂಟಾಗಿದೆ.
ಜಿಲ್ಲೆಯಾದ್ಯಂತ ಅಳವಡಿಸಿರುವ ವಿದ್ಯುತ್ ಕಂಬಗಳ ಪೈಕಿ 1,652 ಕಂಬಗಳು ನೆಲಕ್ಕುರುಳಿದ್ದು, ಇದರಿಂದಾಗಿ 1.65 ಕೋಟಿ ಹಾನಿಯಾಗಿದೆ. 4 ಲಕ್ಷ ಮೌಲ್ಯದ 4 ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳು, 10 ಕೋಟಿ ಮೌಲ್ಯದ 8 ವಿದ್ಯುತ್ ಹೈಟೆನ್ಶನ್ ಟಾವರ್‌ಗಳು, 43 ಸಾವಿರ ಮೌಲ್ಯದ 0.85 ಕಿ.ಮೀ. ಉದ್ದದಷ್ಟು ವಿದ್ಯುತ್ ತಂತಿ ಕಳಚಿ ಬಿದ್ದು ಹಾನಿಯಾಗಿದೆ.
ನಾಲ್ಕು ಶಾಲೆಗಳ ಕಟ್ಟಡಗಳಿಗೆ ಹಾನಿಯಾಗಿದೆ. ಬ್ಯಾಡಗಿ ತಾಲ್ಲೂಕಿನ ಹಿರೇಹಳ್ಳಿ ಗ್ರಾಮದ ಅಂಗನವಾಡಿ ಕಾಂಪೌಂಡ್ ಧರೆಗೆ ಉರುಳಿಬಿದ್ದಿದೆ. ಮಳೆಯ ಜೊತೆಯಲ್ಲಿ ಗುಡುಗುಸಿಡಿಲಿನ ಅಬ್ಬರವೂ ಜೋರಾಗಿತ್ತು. ಗಾಳಿಯೂ ಜೋರಾಗಿ ಬೀಸಿತ್ತು. ಇದರಿಂದಾಗಿ, ಕೃಷಿ ಬೆಳೆಯ ಜತೆಯಲ್ಲಿ ಅಂದಾಜು 11.17 ಕೋಟಿ ರೂ. ಮೌಲ್ಯದ ಮೂಲ ಸೌಕರ್ಯ ಹಾನಿಯಾದ ಮಾಹಿತಿ ವರದಿಯಲ್ಲಿದೆ.
2026-27ನೇ ಸಾಲಿನ ಪೂರ್ವ ಮುಂಗಾರಿನ ಮಳೆಯೊಂದಿಗೆ ಜೋರು ಗಾಳಿ ಬೀಸಿತ್ತು. ಇದರಿಂದಲೇ ಹೆಚ್ಚು ಅವಘಡಗಳು ಸಂಭವಿಸಿವೆ. ಬ್ಯಾಡಗಿಯಲ್ಲಿ 279, ಹಾನಗಲ್ಲನಲ್ಲಿ 83, ಹಾವೇರಿಯಲ್ಲಿ 238, ಹಿರೇಕೆರೂರಿನಲ್ಲಿ 198, ರಾಣೆಬೆನ್ನೂರಿನಲ್ಲಿ 607, ಶಿಗ್ಗಾಂವನಲ್ಲಿ 50, ಸವಣೂರಿನಲ್ಲಿ 40 ಹಾಗೂ ರಟ್ಟೀಹಳ್ಳಿಯಲ್ಲಿ 157 ವಿದ್ಯುತ್ ಕಂಬಗಳು ಉರುಳಿಬಿದ್ದಿವೆ ಎಂದು ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.
ಮನೆ ಹಾನಿ, 111 ಅರ್ಜಿ ತಿರಸ್ಕೃತ
ಅಕಾಲಿಕ ಮಳೆಯಿಂದಾಗಿ ಮೇ 30ರವರೆಗೆ 167 ಮನೆಗಳು ಹಾನಿಯಾದ ಬಗ್ಗೆ ಮಾಲೀಕರು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳನ್ನು ಆಯಾ ತಾಲ್ಲೂಕಿನ ತಹಸೀಲ್ದಾರ್ ನೇತೃತ್ವದ ತಂಡಗಳು ಪರಿಶೀಲನೆ ನಡೆಸುತ್ತಿವೆ. ಈ ಬಗ್ಗೆ 44 ಮನೆಗಳ ಅರ್ಜಿಗಳನ್ನು ಮಾತ್ರ ಅಂಗೀಕರಿಸಲಾಗಿದ್ದು, 111 ಮನೆಗಳ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 12 ಅರ್ಜಿಗಳ ಪರಿಶೀಲನೆ ಬಾಕಿಯಿದೆ.
ಬ್ಯಾಡಗಿ ತಾಲ್ಲೂಕಿನಲ್ಲಿ 7, ಹಾನಗಲ್ಲನಲ್ಲಿ 2, ಸವಣೂರಿನಲ್ಲಿ 5, ರಾಣೆಬೆನ್ನೂರಿನಲ್ಲಿ 18, ರಟ್ಟೀಹಳ್ಳಿಯಲ್ಲಿ 12 ಮನೆಗಳಿಗೆ ಹಾನಿಯಾಗಿದೆ. ಇವುಗಳ ಅರ್ಜಿಗಳನ್ನು ಅಂಗೀಕರಿಸಿ, ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿ ದಾನಮ್ಮನವರ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net