ಕರ್ನಾಟಕದ ಭಗತ್‌ಸಿಂಗ್ ಮೈಲಾರ ಮಹಾದೇವಪ್ಪ; ಮೂವರು ಹುತಾತ್ಮರ ರಾಷ್ಟ್ರಪ್ರೇಮ ಎಲ್ಲರಿಗೂ ಆದರ್ಶ; ಡಿಸಿ ಡಾ.ವಿಜಯಮಹಾಂತೇಶ ದಾನಮ್ಮನವರ

Haveri, Mailara mahadevappa,
Haveri, Mailara mahadevappa,
Published on
ಹಾವೇರಿ: ಕರ್ನಾಟಕದ ಭಗತ್‌ಸಿಂಗ್ ಎಂದು ಕರೆಸಿಕೊಳ್ಳುವ ಹುತಾತ್ಮ ಮೈಲಾರ ಮಹಾದೇವಪ್ಪ ಅವರ ದೇಶಪ್ರೇಮ, ತ್ಯಾಗ ಮತ್ತು ಬಲಿದಾನ ನಮ್ಮೆಲ್ಲರಿಗೂ ಆದರ್ಶವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ನಗರದ ಹಳೆಯ ಪಿಬಿ ರಸ್ತೆ ರಾಣೆಬೆನ್ನೂರ ರಸ್ತೆಯ ಹುತಾತ್ಮರ ವೀರಸೌಧದಲ್ಲಿ ಬುಧವಾರ ಹುತಾತ್ಮ ಮೈಲಾರ ಮಹಾದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಮೊಟೇಬೆನ್ನೂರು ಬಳ್ಳಾರಿ ರುದ್ರಪ್ಪ ಬಿ.ಎಡ್.ಕಾಲೇಜು ಹಾಗೂ ಟಿ.ಎಂ.ಎ.ಇ.ಎಸ್ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಹುತಾತ್ಮ ಮೈಲಾರ ಮಹಾದೇವಪ್ಪ, ವೀರಯ್ಯ ಹಿರೇಮಠ ಹಾಗೂ ತಿರಕಪ್ಪ ಮಡಿವಾಳ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಏಪ್ರಿಲ್ 1, 1943ರಂದು ಹುತಾತ್ಮರಾದ ಸ್ಮರಣಾರ್ಥ ಆಯೋಜಿಸಿದ್ದ 83ನೇ ಹುತಾತ್ಮ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭಾರತದಲ್ಲಿ 1857ರಲ್ಲಿ ನಡೆದ ಸಿಪಾಯಿದಂಗೆ ದೇಶದ ಮೊದಲ ಸ್ವಾತಂತ್ರ್ಯ ಸಮರವಾಗಿದ್ದು, ಇದರಲ್ಲಿ ಅನೇಕ ಮಹಾನ್ ನಾಯಕರು ತಮ್ಮ ಪ್ರಾಣತ್ಯಾಗ ಮಾಡಿದರು. ನಂತರದ ದಿನಗಳಲ್ಲಿ ನಡೆದ ಸ್ವಾತಂತ್ರ್ಯ ಚಳವಳಿಯಲ್ಲಿ ಅನೇಕ ನಾಯಕರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಅದೇ ರೀತಿ ಸ್ವಾತಂತ್ರ್ಯ ಹೋರಾಟದಲ್ಲಿ ಹಾವೇರಿ ಜಿಲ್ಲೆಯೂ ಮುಂಚೂಣಿಯಲ್ಲಿತ್ತು. ಈ ಚಳವಳಿಯಲ್ಲಿ ಮೈಲಾರ ಮಹಾದೇವಪ್ಪ, ವೀರಯ್ಯ ಹಿರೇಮಠ ಮತ್ತು ತಿರಕಪ್ಪ ಮಡಿವಾಳ ಅವರ ಹೆಸರು ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿವೆ ಎಂದರು.
ಮೈಲಾರ ಮಹಾದೇವಪ್ಪ ಅವರು ಬಹಳ ಸಾತ್ವಿಕ ವ್ಯಕ್ತಿಯಾಗಿದ್ದರು. ಹತ್ತು ವರ್ಷದ ಬಾಲಕನಾಗಿದ್ದಾಗಲೇ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದರು. ಅವರು ಮಹಾತ್ಮ ಗಾಂಧೀಜಿಯವರ ಅಹಿಂಸಾ ಮಾರ್ಗವನ್ನು ಅನುಸರಿಸಿ ಹೋರಾಟ ನಡೆಸಿದವರು. 43ನೇ ವಯಸ್ಸಿನಲ್ಲಿ ಬ್ರಿಟಿಷರ ಗುಂಡಿಗೆ ಬಲಿಯಾದ ಅವರು ದೇಶಪ್ರೇಮದ ಪ್ರತೀಕವಾಗಿದ್ದಾರೆ ಎಂದು ಬಣ್ಣಿಸಿದರು.
ಮಹಾತ್ಮಾ ಗಾಂಧೀಜಿಯವರು 1930ರಲ್ಲಿ ಹಮ್ಮಿಕೊಂಡಿದ್ದ ಐತಿಹಾಸಿಕ ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ 78 ಜನರಲ್ಲಿ ಕರ್ನಾಟಕದಿಂದ ಏಕೈಕ ಪ್ರತಿನಿಧಿ ಮೈಲಾರ ಮಹದೇವಪ್ಪನವರು. ಸಾಬರಮತಿ ಆಶ್ರಮದಲ್ಲಿ ತರಬೇತಿ ಪಡೆದು ಹಾವೇರಿ ಜಿಲ್ಲೆಯ ಹೊಸರಿತ್ತಿ ಹಾಗೂ ಕೊರಡೂರನ್ನು ತಮ್ಮ ಕರ್ಮಭೂಮಿಯನ್ನಾಗಿಸಿಕೊಂಡು ಅವರು ಹೋರಾಟ ನಡಿಸಿದ್ದರು. 1941ರಲ್ಲಿ ಸೆರೆಮನೆ ವಾಸ ಅನುಭವಿಸಿದ್ದರೂ ಹಾಗೂ ಮರಳಿ ಬಂದು ಬ್ರಿಟಿಷರ ವಿರುದ್ಧ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ ಧೀಮಂತ ವ್ಯಕ್ತಿತ್ವ ಅವರದು ಎಂದು ಹೇಳಿದರು.
ಇಂದಿನ ಯುವಪೀಳಿಗೆ ಆಧುನೀಕರಣ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗದೇ ಇಂತಹ ಮಹಾನ್ ನಾಯಕ ಜೀವನ ಚರಿತ್ರೆ ಓದಬೇಕು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನವನ್ನು ಯುವಕರಿಗೆ ಪರಿಚಯಿಸುವ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ ಮಾತನಾಡಿ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರವಹಿಸಿ ಬ್ರಿಟಿಷರ ಆಡಳಿತದ ವಿರುದ್ಧ ಧೈರ್ಯವಾಗಿ ಹೋರಾಡಿದ ಮಹಾನ್ ವ್ಯಕ್ತಿ ಮೈಲಾರ ಮಹಾದೇವಪ್ಪನವರು. ಅವರ ತ್ಯಾಗ, ಧೈರ್ಯ ಮತ್ತು ದೇಶಭಕ್ತಿ ಯುವಪೀಳಿಗೆಗೆ ಆದರ್ಶವಾಗಬೇಕು. ಅವರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಹರಿಹರದ ಹಿರಿಯ ಸಾಹಿತಿ ಪ್ರೊ.ಲಿಂಗರಾಜ ಕಮ್ಮಾರ ಅವರು ಮೈಲಾರ ಮಹಾದೇವಪ್ಪನವರ ತ್ಯಾಗ, ಧೈರ್ಯ ಮತ್ತು ಸಾಧನೆಗಳ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಂ.ಎಂ.ಮೈದೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯೆ ಪರಿಮಳಾ ಜೈನ್, ಸಾಹಿತಿ ಸತೀಶ ಕುಲಕರ್ಣಿ, ಎಚ್.ಎಸ್.ಮಹಾದೇವ, ವಿ.ಎನ್.ತಿಪ್ಪನಗೌಡ, ನಾಗೇಂದ್ರ ಕಟಕೋಳ, ಡಾ.ಎಸ್.ಕೆ. ಪ್ರಸಾದಿಮಠ, ಬಳ್ಳಾರಿ ರುದ್ರಪ್ಪ ಬಿ.ಎಡ್. ಕಾಲೇಜ್ ಪ್ರಾಂಶುಪಾಲ ಸುರೇಶ ಎಂ., ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗಯ್ಯ ಹಿರೇಮಠ, ಇತರರು ಉಪಸ್ಥಿತರಿದ್ದರು.
ಬಾಕ್ಸ್
ಕೊರಡೂರ ಸೇವಾಶ್ರಮ ನವೀಕರಣ
ಮೈಲಾರ ಮಹದೇವಪ್ಪನವರ ಹೆಸರಿನಲ್ಲಿ ಸ್ಥಾಪಿತವಾಗಿರುವ ಟ್ರಸ್ಟ್ ಮೂಲಕ ಅನೇಕ ಪುಸ್ತಕಗಳು ಪ್ರಕಟವಾಗಿವೆ. ವೀರಸೌಧದ ಆವರಣದಲ್ಲಿ ಅವರ ಜೀವನ ಚಿತ್ರಣ ನೀಡುವ ಸುಸಜ್ಜಿತ ಸಂಗ್ರಹಾಲಯ ನಿರ್ಮಿಸುವ ಚಿಂತನೆ ಇದೆ. ಕೊರಡೂರು ಸೇವಾಶ್ರಮವನ್ನು ನವೀಕರಿಸಲಾಗಿದ್ದು, ಈ ಬಾರಿ ಜೂನ್ 8ರಂದು ಅವರ ಜನ್ಮದಿನವನ್ನು ಸಡಗರದಿಂದ ಆಚರಿಸಲಾಗುವುದು ಎಂದು ಡಿಸಿ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net