ಶಿಕ್ಷಣ ಇಲಾಖೆಗೆ ಪಿಯು ಬೋರ್ಡ್ ಸೇರ್ಪಡೆ ಬೇಡ; ಪ.ಪೂ. ಕಾಲೇಜ್‌ಗಳ ಉಪನ್ಯಾಸಕರ ಸಂಘದ ಒತ್ತಾಯ

Haveri, Lecturers Opposed, Pu Colleges, Merg With, High Schools,
Haveri, Lecturers Opposed, Pu Colleges, Merg With, High Schools,
Published on
ಹಾವೇರಿ: ಪದವಿಪೂರ್ವ ಕಾಲೇಜ್‌ಗಳ ಉಪನ್ಯಾಸಕರನ್ನು 9 ಮತ್ತು 10ನೇ ತರಗತಿಗಳ ಬೋಧನೆಗೆ ನಿಯೋಜಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಕರಡು ನಿಯಮ ಪದವಿಪೂರ್ವ ಶಿಕ್ಷಣ ಇಲಾಖೆಯ ಅಸ್ತಿತ್ವವನ್ನೇ ದುರ್ಬಲಗೊಳಿಸುವ ಪ್ರಯತ್ನವಾಗಿದೆ. ಹಾಗಾಗಿ, ಶಿಕ್ಷಣ ಇಲಾಖೆಗೆ ಪಿಯು ಶಿಕ್ಷಣ ಇಲಾಖೆ ಸೇರ್ಪಡೆ ಮಾಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಬಿಡಬೇಕು ಎಂದು ನಗರದಲ್ಲಿ ಬುಧವಾರ ರಾಜ್ಯ ಪದವಿಪೂರ್ವ ಕಾಲೇಜ್‌ಗಳ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಸ್.ನಿಸ್ಸೀಮಗೌಡ್ರ ಆಗ್ರಹಿಸಿದರು.
ಜೂನ್ 8ರಂದು ಶಿಕ್ಷಣ ಇಲಾಖೆ ಹೊರಡಿಸಿರುವ ಕರಡು ನಿಯಮದ ಪ್ರಕಾರ ಪದವಿಪೂರ್ವ ಉಪನ್ಯಾಸಕರನ್ನು 9 ಮತ್ತು 10ನೇ ತರಗತಿಗಳ ಶಿಕ್ಷಕರಾಗಿ ನಿಯೋಜಿಸಲು ಅವಕಾಶ ಕಲ್ಪಿಸಲಾಗಿದೆ. ಈ ಕ್ರಮ ಉಪನ್ಯಾಸಕರ ಹುದ್ದೆಯ ಗೌರವ ಹಾಗೂ ಸೇವಾ ಭದ್ರತೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಆರೋಪಿಸಿದರು.
ಹಿಂದೆ ಪದವಿಪೂರ್ವ ಕಾಲೇಜ್‌ಗಳು ಪದವಿ ಕಾಲೇಜ್‌ಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದವು. ಬಳಿಕ ಅವುಗಳನ್ನು ಶಾಲಾ ಶಿಕ್ಷಣ ಇಲಾಖೆಗೆ ವರ್ಗಾಯಿಸಲಾಯಿತು. ಸರ್ಕಾರ ನಮ್ಮನ್ನು ಉಪನ್ಯಾಸಕರು ಎಂದು ನೇಮಕ ಮಾಡಿಕೊಂಡಿದ್ದು, ಈಗ ಶಿಕ್ಷಕರಾಗಿ ನಿಯೋಜಿಸುವುದು ಹಿಂಬಡ್ತಿ ಮಾಡಿದಂತಾಗುತ್ತದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಪಿಯು ಉಪನ್ಯಾಸಕರ ಮುಖ್ಯ ಜವಾಬ್ದಾರಿ ವಿದ್ಯಾರ್ಥಿಗಳನ್ನು ದ್ವಿತೀಯ ಪಿಯುಸಿ ಪರೀಕ್ಷೆಗಳ ಜತೆಗೆ ನೀಟ್, ಜೆಇಇ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಗೊಳಿಸುವುದಾಗಿದೆ. ಇದರ ಜತೆಗೆ ಹೈಸ್ಕೂಲ್ ವಿದ್ಯಾರ್ಥಿಗಳ ಬೋಧನೆಯ ಹೊಣೆ ನೀಡಿದರೆ ಗುಣಮಟ್ಟದ ಶಿಕ್ಷಣದ ಮೇಲೆಯೂ ಪರಿಣಾಮ ಬೀಳಲಿದೆ ಎಂದು ಹೇಳಿದರು.
ಕೆಪಿಎಸ್ ಶಾಲೆಗಳಲ್ಲಿ ಪಿಯು ಉಪನ್ಯಾಸಕರನ್ನು ಹೈಸ್ಕೂಲ್ ತರಗತಿಗಳ ಬೋಧನೆಗೆ ಬಳಸುವ ಯೋಜನೆ ಸರ್ಕಾರದ ಮುಂದಿದ್ದು, ಹೈಸ್ಕೂಲ್‌ಗೆ ನಿಯೋಜನೆಗೊಂಡ ಉಪನ್ಯಾಸಕರ ಆಡಳಿತಾತ್ಮಕ ನಿಯಂತ್ರಣವನ್ನು ಡಿಡಿಪಿಐ ನೋಡಲಿದ್ದಾರೆಯೋ ಅಥವಾ ಡಿಡಿಪಿಯು ನೋಡಲಿದ್ದಾರೆಯೋ ಎಂಬುದರ ಕುರಿತು ಸರ್ಕಾರ ಇನ್ನೂ ಸ್ಪಷ್ಟತೆ ನೀಡಿಲ್ಲ ಎಂದು ತಿಳಿಸಿದರು.
ಈ ನಿಯಮ ಜಾರಿಯಾದರೆ ಪಿಯು ಉಪನ್ಯಾಸಕರ ಸೇವಾ ಭದ್ರತೆಗೆ ಧಕ್ಕೆಯಾಗುವುದಲ್ಲದೇ, ವೃಂದ ನೇಮಕಾತಿಯಲ್ಲಿಯೂ ತಾರತಮ್ಯ ಉಂಟಾಗುವ ಸಾಧ್ಯತೆ ಇದೆ. ಪದವಿಪೂರ್ವ ಶಿಕ್ಷಣ ವ್ಯವಸ್ಥೆಯನ್ನು ಬುಡಮೇಲು ಮಾಡುವ ಅವೈಜ್ಞಾನಿಕ ನಿಯಮ ಇದಾಗಿದೆ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಅನುದಾನಿತ ಪಿಯು ಕಾಲೇಜ್‌ಗಳ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಪರಶುರಾಮ ಗಚ್ಚಿನಮನಿ, ರಾಜ್ಯ ಪದವಿಪೂರ್ವ ಕಾಲೇಜ್‌ಗಳ ಉಪನ್ಯಾಸಕರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶಿವಾನಂದ ಕಾಕೋಳ, ಕಾರ್ಯದರ್ಶಿ ಸತೀಶ ಬೇವಿನಹಳ್ಳಿ, ಸಂಚಾಲಕ ಶೇಖರ ಭಜಂತ್ರಿ, ಇತರರಿದ್ದರು.
ಹಿಂಪಡೆಯದಿದ್ದರೆ ಹೋರಾಟ
ಪಿಯು ಉಪನ್ಯಾಸಕರ ಎಲ್ಲ ಸಂಘಟನೆಗಳು ಸರ್ಕಾರದ ಈ ನಡೆಯನ್ನು ತೀವ್ರವಾಗಿ ಖಂಡಿಸುತ್ತಿವೆ. ಕರಡು ನಿಯಮವನ್ನು ಹಿಂಪಡೆಯದಿದ್ದರೆ ಜುಲೈ ಮೊದಲ ವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಪದವಿಪೂರ್ವ ಕಾಲೇಜ್‌ಗಳ ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ದ್ಯಾಮನಕೊಪ್ಪ ಎಚ್ಚರಿಕೆ ನೀಡಿದರು. ಸಾರ್ವಜನಿಕರು, ಪಾಲಕರು ಹಾಗೂ ಶಿಕ್ಷಣ ತಜ್ಞರು ಪದವಿಪೂರ್ವ ಶಿಕ್ಷಣದ ಹಿತದೃಷ್ಟಿಯಿಂದ ತಮ್ಮ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net