ಕೈಗಾರಿಕಾ ಕಾರಿಡಾರ್‌ಗೆ ಸಶಸ್ತ್ರ ಸಿಬ್ಬಂದಿ ನಿಯೋಜಿಸಿ; ಮಣ್ಣು, ಮರಳು ಲೂಟಿ ಕಂಡು ಸಚಿವರು ಗರಂ; ಅಧಿಕಾರಿಗಳಿಗೆ ನೋಟಿಸ್ ನೀಡಲು ಸೂಚನೆ
koluru-ganajuru-industrian-corridor
Published on:
Copied
Follow Us
ಹಾವೇರಿ: ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಅಕ್ರಮವಾಗಿ ಮರಳುಗಾರಿಕೆ ಮತ್ತು ಸರ್ಕಾರದ ಜಾಗದಲ್ಲಿನ ಮಣ್ಣು ಸಾಗಾಟ ಆಗುತ್ತಿದ್ದರೂ ಏಕೆ ಮೌನ ವಹಿಸಿದ್ದೀರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೈಗಾರಿಕಾ ಕಾರಿಡಾರ್ ಕಾವಲಿಗೆ ಸಶಸ್ತ್ರ ಸಿಬ್ಬಂದಿ ನಿಯೋಜಿಸಿ ಎಂದು ನಿರ್ದೇಶಿಸಿದರು.
ತಾಲೂಕಿನ ಕೋಳೂರು- ಗಣಜೂರು ಕೈಗಾರಿಕಾ ಪ್ರದೇಶಕ್ಕೆ ಸೋಮವಾರ ಭೇಟಿ ನೀಡಿ, ಮಣ್ಣು ಅಗೆದು ಸಾಗಾಟ ಮಾಡಿದ ಪ್ರದೇಶ ವೀಕ್ಷಿಸಿದರು. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಣ್ಣು ಸಾಗಾಟವಾಗುತ್ತಿದ್ದರೂ ಕ್ರಮ ಕೈಗೊಳ್ಳದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗೆ ನೋಟಿಸ್ ನೀಡಿ ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.
ಸಾಲುಗಟ್ಟಿ ವಾಹನಗಳಲ್ಲಿ ಮಣ್ಣು ಮತ್ತು ಮರಳು ಸಾಗಾಟ ಮಾಡಲಾಗುತ್ತಿರುವ ಫೋಟೋ, ವಿಡಿಯೋ ನನ್ನ ಬಳಿ ಇವೆ. ತೋರಿಸಬೇಕಾ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಅವರು, ನಿಮಗೆ ಇದೆಲ್ಲವೂ ಗೊತ್ತಿದ್ದೂ ಸುಮ್ಮನಿದ್ದೀರಿ ಎಂದರೆ ಏನರ್ಥ ಎಂದರು.
ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೇರಲಗಿ, ಜಿಪಂ ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸಗೆಣ್ಣಿ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಪಂ ಸಿಇಒ ರುಚಿ ಬಿಂದಲ್, ಎಸ್‌ಪಿ ಯಶೋಧಾ ವಂಟಿಗೋಡಿ, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ನೆಪಕ್ಕೆ ದಂಡ ಬೇಡ, ಕಡಿವಾಣ ಹಾಕಿ
ಮಣ್ಣು, ಮರಳು ಕಳ್ಳರು ಸರ್ಕಾರಕ್ಕೆ ಬೆದರಿಕೆ ಹಾಕುವ ಮಟ್ದಕ್ಕೆ ಬೆಳೆದಿದ್ದಾರಾ? ಎಂದು ಸಚಿವರು ಪ್ರಶ್ನಿಸಿದರು. ಕೇವಲ 80 ಸಾವಿರ ರೂ. ಡಂಡ ವಿಧಿಸಲಾಗಿದೆ ಅಂದರೆ ಏನು? ಅಲ್ಪಸ್ವಲ್ಪ ದಂಡ ವಿಧಿಸುವ, ಪ್ರಕರಣ ದಾಖಲಿಸುವ ಔಪಚಾರಿಕ ಕೆಲಸ ಬೇಕಿಲ್ಲ. ಜಿಲ್ಲೆಯ ನದಿಗಳಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುವುದನ್ನು ತಡೆಗಟ್ಟಬೇಕು. ಮಣ್ಣು ಸಾಗಾಟಕ್ಕೆ ಕಡಿವಾಣ ಹಾಕಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಖಂಡ್ರೆ ಜತೆ ಸಭೆ ಆಯೋಜಿಸಿ
39 ಎಕರೆ ಪ್ರದೇಶ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿರುವ ಕಾರಣ ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತಿಲ್ಲ. ಕೆಲವು ಕುಟುಂಬಗಳು ವಾಸವಾಗಿದ್ದು, ಪರಿಹಾರ ಕೊಡಬೇಕಾಗಿದೆ ಎಂದು ಕೆಐಎಡಿಬಿ ಅಧಿಕಾರಿ ಆನಂದಕುಮಾರ ಝಳಕಿ ವಿವರಿಸಿದರು. ಈ ಬಗ್ಗೆ ಫೆ.12ರಂದು ಹಾವೇರಿಯಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರೊಂದಿಗೆ ಸಭೆಗೆ ವ್ಯವಸ್ಥೆ ಮಾಡಿ. ಮುಂದಿನ ಕೆಡಿಪಿ ಸಭೆಗೆ ಈ ವಿಷಯ ಸೇರಿಸಿ ಎಂದು ಸಚಿವರು ಸೂಚಿಸಿದರು.
"
ಜಿಲ್ಲೆಯಲ್ಲಿ ಅಕ್ರಮವಾಗಿ ಮರಳು, ಮಣ್ಣು ಸಾಗಾಟ ಮಾಡುವುದನ್ನು ಗಂಭೀರವಾಗಿ ಪರಿಗಣಿಸಿದ್ದೇನೆ. ನನ್ನ ಮೂಲಗಳಿಂದಲೂ ಮಾಹಿತಿ ಪಡೆದಿದ್ದೇನೆ. ಸಂಬಂಧಪಟ್ಟ ಸಂಪೂರ್ಣ ಮಾಹಿತಿ ನನ್ನ ಬಳಿ ಇದೆ. ಇಂತಹ ಅಕ್ರಮಗಳಿಗೆ ಆಸ್ಪದ ನೀಡುವುದಿಲ್ಲ. ಅಧಿಕಾರಿಗಳು ನನ್ನನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ.