ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಬಳಕೆ ಸಲ್ಲ; ಕೆಎಲ್‌ಇ ಸಂಸ್ಥೆ ಆಡಳಿತ ಮಂಡಳಿ ನಿರ್ದೇಶಕ ಎಂ.ಸಿ.ಕೊಳ್ಳಿ ಕಳವಳ

Haveri, KLE GH College, MC Koli, Seminor,
Haveri, KLE GH College, MC Koli, Seminor,
Published on
ಹಾವೇರಿ: ಭೂಮಿಯ ಮೇಲಿನ ಜೀವಜಗತ್ತಿನ ಮೂಲಾಧಾರವಾದ ಜೀವ ವೈವಿಧ್ಯವು ಜೀವಿಗಳ ಅಳಿವು, ವಾಸಸ್ಥಳಗಳ ಹಾನಿ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಬಳಕೆಯಿಂದ ತೀವ್ರ ಒತ್ತಡಕ್ಕೆ ಒಳಗಾಗಿದೆ ಎಂದು ಕೆಎಲ್‌ಇ ಸಂಸ್ಥೆ ಆಡಳಿತ ಮಂಡಳಿ ನಿರ್ದೇಶಕ ಎಂ.ಸಿ.ಕೊಳ್ಳಿ ಕಳವಳ ವ್ಯಕ್ತಪಡಿಸಿದರು.
ಕೆಎಲ್‌ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಹಾವೇರಿಯ ಪ್ರಾಣಿಶಾಸ್ತ್ರ ವಿಭಾಗದ ವತಿಯಿಂದ ಜಿಎಚ್ ಕಾಲೇಜ್‌ನಲ್ಲಿ ಗುರುವಾರ ಹವಾಮಾನ ಬದಲಾವಣೆ, ಜೀವ ವೈವಿಧ್ಯ ನಷ್ಟದ ಕುರಿತು ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಪರಸ್ಪರ ಸಂಬಂಧಿತ ಪರಿಸರ ಸವಾಲುಗಳನ್ನು ಎದುರಿಸಲು ಬಹುಶಾಖೀಯ ತಂತ್ರಗಳ ಕುರಿತು ಚರ್ಚಿಸಲು ಅಧ್ಯಾಪಕರು, ಸಂಶೋಧಕರು, ನೀತಿ ರೂಪಿಸುವವರು ಹಾಗೂ ವಿದ್ಯಾರ್ಥಿಗಳಿಗೆ ಇಂತಹ ವಿಚಾರ ಸಂಕಿರಣಗಳು ಮಹತ್ವದ ವೇದಿಕೆಯನ್ನು ಒದಗಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಪ್ರೊ.ಎಂ.ಮಾಧವಿ ಉಪನ್ಯಾಸ ನೀಡಿದರು. ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳು ಆತಿಥೇಯ ಪರೋಪಜೀವಿ ಪರಸ್ಪರ ಕ್ರಿಯೆಗಳು ಮತ್ತು ರೋಗಗಳ ಉದ್ಭವದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಕುರಿತು ವಿವರಿಸಿದರು.
ವಿಚಾರ ಸಂಕಿರಣದಲ್ಲಿ ಎರಡು ತಾಂತ್ರಿಕ ಅಧಿವೇಶನಗಳು ನಡೆದವು. ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ನಿತಿನ್ ಆನಂದರಾವ್ ಕಾಂಬಳೆ ಚರ ಹವಾಮಾನ ಪರಿಸ್ಥಿತಿಗಳಲ್ಲಿನ ವಿಷಶಾಸ್ತ್ರದ ಕ್ರಮಗಳು; ಸುಸ್ಥಿರ ಅಭಿವೃದ್ಧಿಯ ದೃಷ್ಟಿಕೋನಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಅರಣ್ಯ ಮಹಾವಿದ್ಯಾಲಯದ ವನ್ಯಜೀವಿ ನಿರ್ವಹಣಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶ್ರೀಧರ ಡಿ. ಭಟ್, ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿನ ಜೈವ ವೈವಿಧ್ಯ; ಮಹತ್ವ, ಅಪಾಯಗಳು ಮತ್ತು ಸಂರಕ್ಷಣೆ ಎಂಬ ವಿಷಯದ ಕುರಿತು ಮಾತನಾಡಿದರು.
ತಮಿಳುನಾಡು, ತೆಲಂಗಾಣ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ಭಾಗವಹಿಸಿದ ಸಂಶೋಧಕರು ಪ್ರಬಂಧಗಳನ್ನು ಮಂಡಿಸಿದರು.
ಕೆಎಲ್‌ಇ ಸಂಸ್ಥೆಯ ಎಲ್‌ಜಿಬಿ ಸದಸ್ಯರಾದ ಬಸವರಾಜ ಮಾಸೂರ, ಜೆ.ಎಸ್.ಅರಣಿ, ಇತರರು ಉಪಸ್ಥಿತರಿದ್ದರು. ರೂಪಾ ಕೋರೆ, ದಾನಮ್ಮ ಹಸಬಿ, ನಯನಾ ಪಾಟೀಲ, ರೇಣುಕಾ ಅಂಗೂರ ಕಾರ್ಯಕ್ರಮ ಸಂಯೋಜಿಸಿದರು.
ಪ್ರಾಂಶುಪಾಲ ಮಂಜುನಾಥ ಹೊಳ್ಳಿಯವರ ಸ್ವಾಗತಿಸಿದರು. ಡಾ.ಇ.ಬಿ.ಸೇಡಂಕರ ವಂದಿಸಿದರು. ಮನ್ಸೂರ್ ಅಲಿ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net