ಸಾಹಿತ್ಯ ಲೋಕ ಸದಾ ಜೀವಂತವಾಗಿರಲಿ; ಕಸಾಪ ಸಂಸ್ಥಾಪನಾ ದಿನಾಚರಣೆಯಲ್ಲಿ ಸಂಜೀವಕುಮಾರ ನೀರಲಗಿ ಸಲಹೆ

Haveri, Kasapa, Samsthapana Divas,
Haveri, Kasapa, Samsthapana Divas,
Published on
ಹಾವೇರಿ: ಸರ್ಕಾರ ಮತ್ತು ದಾನಿಗಳ ಸಹಕಾರದಿಂದ ಕನ್ನಡ ಸಾಹಿತ್ಯ ಪರಿಷತ್ ಸ್ವಾಯತ್ತ ಸಂಸ್ಥೆಗೆ ಸ್ವಂತ ಕಟ್ಟಡ ನಿರ್ಮಿಸಿರುವುದು ಹೆಮ್ಮೆಯ ವಿಷಯವಾಗಿದ್ದು, ಮುಂಬರುವ ದಿನಗಳಲ್ಲಿ ಜಿಲ್ಲೆಯ ಸಾಹಿತ್ಯ ಲೋಕ ಸದಾ ಜೀವಂತಿಕೆ ರೂಪ ಪಡೆಯಲು ಮತ್ತಷ್ಟು ಪರಿಣಾಮಕಾರಿಯಾದ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಹುತಾತ್ಮ ಮೈಲಾರ ಮಹಾದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.
ಇಲ್ಲಿನ ವಿನಾಯಕ ನಗರದ ಶ್ರೀ ಗಂಗಾಧರ ನಂದಿ ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಒಂದು ಸಂಸ್ಥೆ ಕ್ರಿಯಾಶೀಲವಾಗಿ ಕೆಲಸ ಮಾಡಲು ಸಕ್ರಿಯ ರೂಪದ ತಂಡ ಇರಬೇಕು. ಆಗ ಮಾತ್ರ ಗುರಿ ಮತ್ತು ಉದ್ದೇಶ ತಲುಪಲು ಸಾಧ್ಯ. ಈ ಹಿನ್ನೆಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಯೊಬ್ಬರೂ ತನು-ಮನ-ಧನದಿಂದ ಸಾಹಿತ್ಯಿಕ ವಾತಾವರಣ ಸೃಷ್ಟಿಸಿದ್ದಾರೆ. ಇದರ ಪರಿಣಾಮ ನಮ್ಮ ಜಿಲ್ಲೆಯಲ್ಲಿ ಆಯೋಜಿಸಿದ್ದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿದೆ ಎಂದರು.
ಸಾಹಿತಿ ಡಾ.ಎಚ್.ಐ.ತಿಮ್ಮಾಪುರ ಮಾತನಾಡಿ, ಕನ್ನಡ ನಾಡು-ನುಡಿ ಪೋಷಿಸಲು ಮೈಸೂರು ಅಭ್ಯುದಯ ಸಮಾಜದ ಹೆಸರಿನಲ್ಲಿ ಶುರುವಾದ ಕನ್ನಡ ಸಾಹಿತ್ಯ ಪರಿಷತ್ತು ಸದ್ಯ ನಾಲ್ಕು ಲಕ್ಷಕ್ಕೂ ಅಧಿಕ ಆಜೀವ ಸದಸ್ಯರನ್ನು ಪಡೆದ ಹೆಗ್ಗಳಿಕೆ ಹೊಂದಿದೆ. ರಾಜ್ಯದ ಎಲ್ಲ ಗಡಿ ಪ್ರದೇಶದ ಭಾಷೆಗಳನ್ನು ಒಂದೇ ರೂಪಕ್ಕೆ ತರುವುದು, ಪಠ್ಯಪುಸ್ತಕ ರಚಿಸುವುದು, ಕನ್ನಡದ ಅಕ್ಷರ ಜಾತ್ರೆ ಆಯೋಜಿಸುವ ಮೂಲಕ ನೂರು ವರ್ಷಗಳನ್ನು ದಾಟಿ ಬಂದಿರುವುದು ಒಂದು ಮೈಲಿಗಲ್ಲು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಎಸ್.ಎನ್.ದೊಡ್ಡಗೌಡ್ರ ಮಾತನಾಡಿದರು.
ಡಿಡಿಪಿಯು ಅಶೋಕ ಶಾಸ್ತ್ರೀ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಹ್ವಾನಿಸಿ ಗೌರವಿಸಿರುವುದು ಅಭಿನಂದನೀಯ. ವಿದ್ಯಾರ್ಥಿಗಳು ತಮ್ಮ ಸತತ ಶ್ರಮದಿಂದ ಉತ್ತಮ ಅಂಕಗಳನ್ನು ಗಳಿಸಿ ನಮ್ಮ ಇಲಾಖೆಗೂ ಹಾಗೂ ಹೆತ್ತವರಿಗೂ ಹೆಸರು ತಂದಿದ್ದಾರೆ ಎಂದರು.
ಸಾಹಿತಿ ಡಾ.ಸತೀಶ ಕುಲಕರ್ಣಿ, ಕಸಾಪ ತಾಲೂಕಾಧ್ಯಕ್ಷ ವೈ.ಬಿ.ಆಲದಕಟ್ಟಿ, ಪರಿಷತ್ತಿನ ಪ್ರಮುಖರಾದ ಶಂಕರ ಸುತಾರ, ಪೃಥ್ವಿರಾಜ ಬೆಟಗೇರಿ, ವಿ.ಪಿ.ದ್ಯಾಮಣ್ಣವರ, ಹನುಮಂತಗೌಡ ಗೊಲ್ಲರ, ಈರಣ್ಣ ಬೆಳವಡಿ, ರೇಣುಕಾ ಗುಡಿಮನಿ, ಜುಬೇದಾ ನಾಯಕ್, ಅಕ್ಕಮಹಾದೇವಿ ಹಾನಗಲ್ಲ, ಇತರರು ಉಪಸ್ಥಿತರಿದ್ದರು.
ಎನ್.ಬಿ.ಕಾಳೆ ನಿರೂಪಿಸಿದರು. ಸಿ.ಎಸ್.ಮರಳಿಹಳ್ಳಿ ಸ್ವಾಗತಿಸಿದರು. ಸಿದ್ದೇಶ್ವರ ಹುಣಸಿಕಟ್ಟಿಮಠ ವಂದಿಸಿದರು.
ಸನ್ಮಾನ :
ಸಂಜೀವಕುಮಾರ ನೀರಲಗಿ, ಲಿಂಗರಾಜ ಸೊಟ್ಟಪ್ಪನವರ, ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಾದ ಲಕ್ಷ್ಮೀ ವಾಲ್ಮೀಕಿ, ಆರತಿ ಆನ್ವೇರಿ, ಶಂಭುಲಿಂಗ ಸುಂಕದ, ಪ್ರಸನ್ನಕುಮಾರ ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಇದು ಕೊನೆಯ ಕಾರ್ಯಕ್ರಮ ?
ಬಹುಶಃ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಇದು ನನ್ನ ಕೊನೆಯ ಕಾರ್ಯಕ್ರಮ. ಎರಡು ಅವಧಿಯಲ್ಲಿ ನನಗೆ ಅವಕಾಶ ನೀಡಿ ಕನ್ನಡ ನುಡಿ ಸೇವೆ ಮಾಡಲು ಸಹಕಾರ ನೀಡಿದವರನ್ನು ಮತ್ತು ನನಗೆ ನೈತಿಕವಾಗಿ ಬೆಂಬಲಿಸಿದವರನ್ನು ಸದಾ ಸ್ಮರಿಸುತ್ತೇನೆ. ಇದು ನನ್ನ ಪಾಲಿಗೆ ಸಂದ ಅದೃಷ್ಟವೂ ಎಂದು ಭಾವಿಸುವೆ ಎಂದು ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಬಿ.ಹಿರೇಮಠ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net