ಹಾವೇರಿ: ಕೃಷಿ ಪ್ರಧಾನವಾದ ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದು, ಮಳೆಗಾಗಿ ಪ್ರಾರ್ಥಿಸಿ ಹಲವು ಧಾರ್ಮಿಕ ಆಚರಣೆ ಮಾಡುತ್ತಿದ್ದಾರೆ. ತಾಲೂಕಿನ ಕರ್ಜಗಿ ಗ್ರಾಮಸ್ಥರು ಕತ್ತೆಗಳ ಮದುವೆ ಮಾಡುವ ಮೂಲಕ ಮಲೆಗಾಗಿ ಸಾಮೂಹಿಕವಾಘಗಿ ಪ್ರಾರ್ಥಿಸಿದರು.
ರೈತಾಪಿ ಕುಟುಂಬಗಳು ಹೆಚ್ಚಾಗಿರುವ ಗ್ರಾಮಗಳಲ್ಲಿ ಮಳೆಯ ಕೊರತೆಯಾಗಿದ್ದು, ಬಿತ್ತನೆ ಮಾಡಿರುವ ಬೆಳೆಗಳು ಒಣಗುತ್ತಿವೆ. ಬೆಳೆ ನಷ್ಟವಾಗುವ ಭೀತಿ ಇದೆ. ಇಂಥ ಸಂದರ್ಭದಲ್ಲಿ ಮಳೆಯ ಅಗತ್ಯತೆ ಹೆಚ್ಚಿದೆ. ಹೀಗಾಗಿ, ಗ್ರಾಮಸ್ಥರು ಪರಸ್ಪರ ಒಗ್ಗಟ್ಟಾಗಿ ಕತ್ತೆಗಳ ಮದುವೆ ಮಾಡಿದರು.
ಪೂಜಾರಿಗಳ ಮೂಲಕ ಸಂಪ್ರದಾಯದ ಪ್ರಕಾರ ಮದುವೆಗೆ ಸಿದ್ಧತೆ ಮಾಡಿದ್ದ ಗ್ರಾಮಸ್ಥರು, ಎರಡು ಕತ್ತೆಗಳನ್ನು ಮದುವೆಗೆ ಸಿದ್ಧಪಡಿಸಿದ್ದರು. ಅವುಗಳಿಗೆ ವಧು-ವರರ ರೀತಿಯಲ್ಲಿ ಅಲಂಕರಿಸಿದ್ದರು. ಹೆಣ್ಣು-ಗಂಡಿನ ಕಡೆಯ ಬೀಗರಾಗಿ ಗ್ರಾಮಸ್ಥರು ಹಾಜರಿದ್ದರು. ಪರಸ್ಪರ, ಹಣ್ಣು- ತಾಂಬೂಲ ವಿನಿಮಯ ಮಾಡಿಕೊಂಡರು.
ನಂತರ, ಪೂಜಾರಿಯವರು ಮಂತ್ರಗಳ ಸಮೇತ ಕತ್ತೆಗಳಿಗೆ ಮದುವೆ ಮಾಡಿಸಿದರು. ನೆರೆದಿದ್ದ ಜನರು, ಅಕ್ಷತೆ ಹಾಕಿದರು. ನಂತರ, ಎಲ್ಲರೂ ಮಳೆಯಾಗಲೆಂದು ದೇವರಲ್ಲಿ ಬೇಡಿಕೊಂಡರು. ಬಳಿಕ, ಅನ್ನ ಸಂತರ್ಪಣೆ ನಡೆಯಿತು.
ಕತ್ತೆಗಳ ಮದುವೆ ಮಾಡಿದರೆ, ಮಳೆಯಾಗುವುದಾಗಿ ನಂಬಿಕೆಯಿದೆ. ಹೀಗಾಗಿ, ಕತ್ತೆಗಳ ಮದುವೆ ಮಾಡಿದ್ದೇವೆ. ಮಳೆ ಹಾಗೂ ಬೆಳೆಯ ನಿರೀಕ್ಷೆಯಲ್ಲಿದ್ದೇವೆ. ಸಣ್ಣ ಮಳೆಯಾಗುತ್ತಿದ್ದು, ದೊಡ್ಡ ಮಳೆಗಾಗಿ ಕಾಯುತ್ತಿದ್ದೇವೆ ಎಂದು ಸ್ಥಳೀಯರು ಹೇಳಿದರು.