ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ಅನ್ಯಾಯ ಸರಿಪಡಿಸಿ; ನೇಮಕಾತಿ, ಮುಂಬಡ್ತಿಯಲ್ಲಿ ಕನ್ನಡದಲ್ಲೇ ಪರೀಕ್ಷೆ ಬರೆಯಲು ಅವಕಾಶ ನೀಡಿ; ಕರವೇ ಆಗ್ರಹ

Haveri, karave Portest, At MP Office,
Haveri, karave Portest, At MP Office,
Published on
ಹಾವೇರಿ: ರೈಲ್ವೆ ಇಲಾಖೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮುಂಭಡ್ತಿ ನೀಡುವಾಗ ಕನ್ನಡದಲ್ಲೇ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ಇಲಾಖೆಯಲ್ಲಿ ಕನ್ನಡಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಕುಮಾರ ಶಟ್ಟಿ ಬಣ) ಕಾರ್ಯಕರ್ತರು ಸೋಮವಾರ ನಗರದ ಸಂಸದರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಕರವೇ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಮೂಲಕ ಸಂಸದ ಬಸವರಾಜ ಬೊಮ್ಮಾಯಿ ಕಚೇರಿಗೆ ಆಗಮಿಸಿ, ಮುತ್ತಿಗೆ ಹಾಕಲು ಯತ್ನಿಸಿದರು. ರೈಲ್ವೆ ಇಲಾಖೆ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನೇಮಕಾತಿ ಹಾಗೂ ಮುಂಬಡ್ತಿ ವಿಚಾರದಲ್ಲಿ ಭಾರತೀಯ ರೈಲ್ವೆ ಇಲಾಖೆ ತಾರತಮ್ಯ ಎಸಗುತ್ತಿದೆ. ಕೂಡಲೇ ನಮ್ಮ ಪ್ರಾದೇಶಿಕ ಭಾಷೆ ಕನ್ನಡದಲ್ಲಿ ಪರೀಕ್ಷೆ ಬರೆದು ನೇಮಕಾತಿ ಹಾಗೂ ಮುಂಬಡ್ತಿ ಪಡೆಯಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ವೇದಿಕೆ ಜಿಲ್ಲಾಧ್ಯಕ್ಷ ಮಂಜುನಾಥ ಓಲೇಕಾರ ಮಾತನಾಡಿ, ರೈಲ್ವೆ ಇಲಾಖೆಯಲ್ಲಿ ವಿವಿಧ ನೇಮಕಾತಿ ಪ್ರಕ್ರಿಯೆಗಳಲ್ಲಿ ಕನ್ನಡಿಗರಿಗೆ ಅನ್ಯಾಯ ಆಗುತ್ತಲೇ ಬಂದಿದೆ. ಇಲಾಖೆಯು ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಸ್ಥಳೀಯ ಯುವಕರ ಹಕ್ಕುಗಳ ಹರಣ ಮಾಡುತ್ತಿದೆ. ಈ ಬಗ್ಗೆ ಹಲವು ಬಾರಿ ಕೇಂದ್ರ ಸರ್ಕಾರದ ಗಮನಕ್ಕೆ ತಂದರೂ ಯಾವುದೇ ಕ್ರಮ ಆಗಿಲ್ಲ ಎಂದರು.
ನೇಮಕಾತಿ ಪರೀಕ್ಷೆಗಳು ಹಾಗೂ ಆಡಳಿತ ಕ್ರಮಗಳು ಮುಖ್ಯವಾಗಿ ಹಿಂದಿ ಮತ್ತು ಇಂಗ್ಲಿಷ್ ಕೇಂದ್ರೀಕೃತ ಆಗಿವೆ. ಇದರಿಂದ ಕನ್ನಡ ಭಾಷೆಯಲ್ಲಿ ವಿಧ್ಯಾಭ್ಯಾಸ ಮಾಡಿದ ಯುವಕರಿಗೆ ಅನ್ಯಾಯ ಆಗುತ್ತಿದೆ. ಇಲಾಖೆಯಲ್ಲಿ ಮುಂಬಡ್ತಿ ನೀಡುವಲ್ಲಿ ದ್ವಿಭಾಷಾ ನೀತಿ ಅನುಸರಿಸಿದೇ ತ್ರಿಭಾಷಾ ನೀತಿಯನ್ನು ಜಾರಿಗೊಳಿಸಿರುವುದರಿಂದ ಕನ್ನಡದ ನೌಕರರಿಗೆ ತೊಂದರೆ ಆಗುತ್ತಿದೆ. ಕಳೆದ ಮೂರು ವರ್ಷಗಳಿಂದ ಕನ್ನಡಿಗ ನೌಕರರಿಗೆ ಮುಂಬಡ್ತಿ ನೀಡುತ್ತಿಲ್ಲ. ಕೊಡಲೇ ಈ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿದರು.
ಪ್ರತೊಭಟನೆಯಲ್ಲಿ ಜಿಲ್ಲಾ ಕಾರ್ಯಧ್ಯಕ್ಷ ಪುಟ್ಟಪ್ಪ ಹಿತ್ತಲಮನಿ, ಮಾರುತಿ ಹಾಲಗಿ, ಜಿಲ್ಲಾ ಮಹಿಳಾ ಘಕದ ಅಧ್ಯಕ್ಷೆ ಅನುಸುಯಾ ಸಿದ್ದಪ್ಪಳ್ಳವರ, ಜಿಲ್ಲಾ ಉಪಾಧ್ಯಕ್ಷರಾದ ಮಹಾದೇವಪ್ಪ ಹೆಡಿಗೊಂಡ, ವಿಜಯಕುಮಾರ ಎನ್.ಎಂ., ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಮಾರ ಸುಳ್ಳನವರ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಮೌಲಾಲಿ ಯರೆಮನಿ, ಜಿಲ್ಲಾಮಹಿಳಾ ಪ್ರಧಾನ ಕಾರ್ಯದರ್ಶಿ ಸುಧಾ ಪಾಟೀಲ, ಜಿಲ್ಲಾ ವಕ್ತಾರ ಮೌಲಾಸಾಬ ನದಾಫ, ಮಾಲತೇಶ ಜಿ.ಕೆ. ದ್ಯಾಮಣ್ಣ ಮಲ್ಲಾಡದ, ಫಕ್ಕಿರಪ್ಪ ಕಟ್ಟಿಮನಿ, ತನುಶ್ರೀ ಧಾರವಾಡ, ಯುವರಾಜ ನವಲಗುಂದ, ರಮೇಶ ದಾಸಪ್ಪನವರ, ಸುರೇಶ ಲಕಮಣ್ಣನವರ, ಪವನ ವಡ್ಡರ, ಲಕ್ಷ್ಮೀ ಗಂಗಣ್ಣನವರ, ಕೃಷ್ಣಪ್ಪ ನಾಗಜ್ಜಿ, ರಾಜಣ್ಣ ಪಾಟೀಲ, ರೇಣುಕಾ ಮಾನೆಗಾರ, ಶಾರದಾ ಮೇಗಳಮನಿ, ಅನ್ನಪೂರ್ಣ ವಡ್ಡಟ್ಟಿ, ಅಶೋಕ ಕೂರಚರ, ಸ್ವಾತಿ ಮಡಿವಾಳರ, ಪ್ರತೀಶಾ ಓಲೇಕಾರ, ಲಕ್ಷ್ಮೀ ದೊಡ್ಡಮನಿ, ರತ್ನಮ್ಮ ಸಂಗಪ್ಪನವರ, ಇತರರು ಇದ್ದರು.
ಆಂಧ್ರ, ಕೇರಳ ಮಾದರಿ ಅನುಸರಿಸಿ
ಕರ್ನಾಟಕದಲ್ಲಿ ನಡೆಯುವ ಪರೀಕ್ಷೆಗಳು ಕನ್ನದಲ್ಲೇ ಆಗಬೇಕು. ನೇಮಕಾತಿ ಅಧಿಸೂಚನೆಗಳು ಮತ್ತು ಅರ್ಜಿ ಪ್ರಕ್ರಿಯೆಗಳು ಕನ್ನಡದಲ್ಲೇ ನಡೆಯಬೇಕು. ಆಂಧ್ರಪ್ರದೇಶ, ತಮಿಳನಾಡು, ಕೇರಳ, ಮಹಾರಾಷ್ಟ್ರ ರಾಜ್ಯಗಳಂತೆ ಕರ್ನಾಟಕದಲ್ಲಿ ದ್ವಿಭಾಷಾ ನೀತಿಯನ್ನು ತಂದು ರೇಲ್ವೆ ಇಲಾಖೆಯ ನೇಮಕಾತಿ ಮತ್ತು ಮುಂಬಡ್ತಿ ಕನ್ನಡಿಗರಿಗೆ ದಕ್ಕುವಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಕೇಂದ್ರ ರೇಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಗಮನಕ್ಕೆ ತಂದು ಕೊಡಲೇ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ನಿರಂತರವಾಗಿ ಸಂಸದರ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳ ಮೇಲೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕತರು ಮುತ್ತಿಗೆ ಹಾಕುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net