ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ; ಕಬ್ಬೂರಲ್ಲಿ ಕ್ಷುಲ್ಲಕ ಕಾರಣಕ್ಕೆ ಶುರುವಾಗಿದ್ದ ಜಗಳ ಸಾವಿನಲ್ಲಿ ಅಂತ್ಯ

Haveri, Kabbur, Village, Brutel, Muder,
Haveri, Kabbur, Village, Brutel, Muder,
Published on
ಹಾವೇರಿ: ತಾಲೂಕಿನ ಕಬ್ಬೂರ ಗ್ರಾಮದಲ್ಲಿ ಸೋಮವಾರ ಅಕ್ಕ ಪಕ್ಕದ ಮನೆಯ ನಿವಾಸಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಉಂಟಾಗಿದ್ದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ವ್ಯಕ್ತಿಯೊಬ್ಬ ಮತ್ತೊಬ್ಬನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆಗೈದಿದ್ದಾನೆ.
ಗ್ರಾಮದ ನಿವಾಸಿ ನಿಂಗಪ್ಪ ಚನ್ನಬಸಪ್ಪ ಕರಿಗಾರ (39) ಕೊಲೆಯಾದವ. ಶಿವಪ್ಪ ನಿಂಗಪ್ಪ ಪಟ್ಟದೇವರ ಕೊಲೆ ಮಾಡಿದ ಆರೋಪಿ.
ನಿಂಗಪ್ಪ ಹಾಗೂ ಶಿವಪ್ಪನ ಮನೆಗಳು ಅಕ್ಕಪಕ್ಕದಲ್ಲಿವೆ. ಶಿವಪ್ಪನ ಮನೆಗೆ ಹಾಕಿರುವ ತಗಡು ಮಳೆ ಬಂದಾಗ ಸೋರುತ್ತದೆ. ಅದರ ನೀರು ನಿಂಗಪ್ಪನ ಮನೆಯ ಗೋಡೆ ಮೇಲೆ ಬಿದ್ದು ಗೋಡೆ ಹಾಳಾಗುತ್ತದೆ ಎಂಬ ವಿಚಾರಕ್ಕೆ ಇಬ್ಬರ ನಡುವೆ ರಾಜೀ ಪಂಚಾಯ್ತಿ ನಡೆದಿತ್ತು. ಆದರೂ ಸುಮ್ಮನಾಗದೇ ಜಗಳ ಮುಂದುವರೆಸಿದ್ದರು. ಇತ್ತೀಚೆಗೆ, ತಗಡು ತೆಗೆದು ಬಿಡು ಎಂದು ನಿಂಗಪ್ಪ ಹೇಳಿದ್ದಕ್ಕೆ ಶಿವಪ್ಪ ಆತನಿಗೆ ಹಲ್ಲೆ ಮಾಡಿ ಗಾಯಪಡಿಸಿದ್ದ. ಹಿರಿಯರು ಸಭೆ ನಡೆಸಿ ಶಿವಪ್ಪನಿಗೆ ಬುದ್ದಿವಾದ ಹೇಳಿ ಆಸ್ಪತ್ರೆ ಖರ್ಚಿಗೆ ನಿಂಗಪ್ಪಗೆ 2,000 ರೂ. ಕೊಡು ಎಂದಿದ್ದರು.
ಈ ಹಣ ಕೊಡದೇ ಶಿವಪ್ಪ ಸತಾಯಿಸುತ್ತಿದ್ದ. ಸೋಮವಾರ ನಿಂಗಪ್ಪ ಆಸ್ಪತ್ರೆ ಖರ್ಚಿನ ಹಣ ಕೊಡು ಎಂದು ಕೇಳಿದ್ದಕ್ಕೆ ಆಕ್ರೋಶಗೊಂಡ ಶಿವಪ್ಪ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಲ್ಲಿನಿಂದ ಜಜ್ಜಿ ಭೀಕರವಾಗಿ ಹತ್ಯೆಗೈದಿದ್ದಾನೆ. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ನಿಂಗಪ್ಪ ಮೃತಪಟ್ಟಿದ್ದಾನೆ ಎಂದು ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಎಸ್‌ಪಿ ಯಶೋಧಾ ವಂಟಗೋಡ, ಹಾವೇರಿ ಗ್ರಾಮೀಣ ಠಾಣೆ ಪೊಲೀಸರು ಆಗಮಿಸಿ ಪರಿಶೀಲಿಸಿದರು. ಆರೋಪಿ ಶಿವಪ್ಪನನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪಿಎಸ್‌ಐ ರವಿಕುಮಾರ ತಿಳಿಸಿದ್ದಾರೆ.
ಮದ್ಯ ಸೇವಿಸಿ ಜಗಳ ? :
ಇಬ್ಬರೂ ಮದ್ಯ ಸೇವಿಸುತ್ತಿದ್ದರು. ಇತ್ತೀಚೆಗೆ ಸಾರಾಯಿ ಅಂಗಡಿಯಲ್ಲಿ ಶಿವಪ್ಪ ಜಗಳ ಆಡಿ, ನಿಂಗಪ್ಪನಿಗೆ ಹಲ್ಲೆ ಮಾಡಿದ್ದ. ಅನಾಯಾಸವಾಗಿ ನಿಂಗಪ್ಪನ ಜೀವ ತೆಗೆದಿದ್ದಾನೆ. ಕುಡಿದ ಮತ್ತಿನಲ್ಲಿ ನನ್ನ ಪತಿ ಕೊಂದಿದ್ದಾನೆ. ನನ್ನ ಪತಿಯ ಸಾವಿಗೆ ನ್ಯಾಯ ಸಿಗಬೇಕು ಎಂದು ಮೃತನ ಪತ್ನಿ ರೇಖಾ ಹಾಗೂ ಸಂಬಂಧಿಕರು ಆರೋಪಿಸಿದ್ದಾರೆ.
"

ನೀರು, ಕಸದ ವಿಚರವಾಗಿ ಜಗಳ ಇತ್ತು. ಅದಕ್ಕಾಗಿ ಕೊಲೆ ಮಾಡಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಮುಂದಿನ ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿಯುತ್ತದೆ.

— ಯಶೋಧಾ ವಂಟಗೋಡಿ, ಎಸ್‌ಪಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net