ಲೋಕ ಅದಾಲತ್‌ನಲ್ಲಿ 1.10 ಲಕ್ಷ ಪ್ರಕರಣ ಇತ್ಯರ್ಥ; ಕೌಟುಂಬಿಕ ಪ್ರಕರಣಗಳಲ್ಲಿ 15 ದಂಪತಿಗಳು ರಾಜಿ; ನ್ಯಾಯಾಧೀಶ ಬಿರಾದಾರ ದೇವಿಂದ್ರಪ್ಪ ಎನ್. ಮಾಹಿತಿ

 loka adalat, family, court,
loka adalat, family, court,
Published on
ಹಾವೇರಿ: ಜಿಲ್ಲೆಯ ನ್ಯಾಯಾಲಯಗಳಲ್ಲಿ ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ಯಶಸ್ವಿಯಾಗಿ ಜರುಗಿತು. ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳು ಸೇರಿ ಇತ್ಯರ್ಥಕ್ಕೆ ಗುರುತಿಸಲ್ಪಟ್ಟ 1,24,057 ಪ್ರಕರಣಗಳಲ್ಲಿ 1,10,876 ಪ್ರಕರಣಗಳು ಇತ್ಯರ್ಥಗೊಂಡಿದ್ದು, 56,83,18,798 ರೂ. ಮೊತ್ತದ ರಾಜಿಯಾಗಿದೆ. 15 ಕೌಟುಂಬಿಕ ಪ್ರಕರಣಗಳಲ್ಲಿ 15 ದಂಪತಿಗಳು ರಾಜಿ ಮಾಡಿಕೊಂಡಿದ್ದಾರೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿರಾದಾರ ದೇವಿಂದ್ರಪ್ಪ ಎನ್. ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಬಾಕಿ ಇರುವ ಇತ್ಯರ್ಥಕ್ಕೆ ಗುರುತಿಸಲಾದ 6,387 ಪ್ರಕರಣಗಳ ಪೈಕಿ 5,400 ಪ್ರಕರಣಗಳು ಇತ್ಯರ್ಥಗೊಂಡಿದ್ದು, 29,15,37,575 ರೂ. ಮೊತ್ತದ ರಾಜಿಯಾಗಿದೆ. ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ ಇತ್ಯರ್ಥಕ್ಕೆ ಗುರುತಿಸಲಾದ 1,17,670 ಪ್ರಕರಣಗಳಲ್ಲಿ 1,05,476 ಪ್ರಕರಣಗಳು ಇತ್ಯರ್ಥಗೊಂಡಿದ್ದು, 27,67,81,223 ರೂ. ಮೊತ್ತದ ರಾಜಿಯಾಗಿದೆ.
ಜಿಲ್ಲೆಯ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಲಯ ರಾಣೆಬೆನ್ನೂರಿನಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಐದು ವರ್ಷಕ್ಕೆ ಮೇಲ್ಪಟ್ಟ ಎಕಸಿಕ್ಯೂಷನ್ ನಂ.19/2020 ದಾವೆಯು ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ರಾಜಿ ಸಂದಾನದ ಮೂಲಕ ಇತ್ಯರ್ಥವಾಗಿರುತ್ತದೆ.
ಹಾವೇರಿ ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ಆರು, ರಾಣೆಬೆನ್ನೂರಲ್ಲಿ ಮೂರು, ಬ್ಯಾಡಗಿ, ಹಾನಗಲ್ಲ ಹಾಗೂ ಶಿಗ್ಗಾಂವಿಯಲ್ಲಿ ತಲಾ ಎರಡು ಸೇರಿ ಒಟ್ಟು 15 ಕೌಟುಂಬಿಕ ಪ್ರಕರಣಗಳಲ್ಲಿ ದಂಪತಿಗಳು ರಾಜಿ ಮಾಡಿಕೊಂಡು ಮತ್ತೆ ಒಂದಾಗಿದ್ದಾರೆ.
ಈ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಜಿಲ್ಲಾ ವಕೀಲರ ಸಂಘದ ಹಾಗೂ ಜಿಲ್ಲೆಯ ಎಲ್ಲ ತಾಲೂಕು ವಕೀಲರ ಸಂಘಗಳ ಸದಸ್ಯರು, ಹಾವೇರಿ ಜಿಲ್ಲೆಯ ಎಲ್ಲ ನ್ಯಾಯಾಧೀಶರು, ಅಭಿಯೋಜನೆ ಇಲಾಖೆ, ಆರಕ್ಷಕ ಇಲಾಖೆಯವರು, ಇತರೆ ಇಲಾಖೆಯವರು ಹಾಗೂ ಕಕ್ಷಿಗಾರರ ಸಹಕಾರದೊಂದಿಗೆ ರಾಷ್ಟ್ರೀಯ ಲೋಕ ಅದಾಲತ್ ತುಂಬಾ ಯಶಸ್ವಿಯಾಗಿ ಜರುಗಿದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net