ಜೈನ ಧರ್ಮ ಶ್ರೇಷ್ಠ, ಸರ್ವೋತ್ತಮವಾದುದು; ಬೃಹತ್ ಸಿದ್ದಚಕ್ರ ಮಹಾಮಂಡಲದ ವಿಧಾನ ಮಹೋತ್ಸವದಲ್ಲಿ ಮುನಿಶ್ರೀ 108 ವಿಧಿತಸಾಗರ ಮಹಾರಾಜರ ಹೇಳಿಕೆ

Siddhachakra, Mahotsava,
Siddhachakra, Mahotsava,
Published on
ಹಾವೇರಿ: ಸಮಾಜದ ತಾಯಂದಿರಿಂದ ಧರ್ಮ ಉಳಿಸುವ ಕಾರ್ಯವಾಗಬೇಕು. ಮಕ್ಕಳಿಗೆ ಜನ್ಮದಾತರು ಶ್ರಾವಕಿಯರು. ಜೈನ ಧರ್ಮದಲ್ಲಿ ಬಹುಪುಣ್ಯದಿಂದ ಜನ್ಮವನ್ನು ಪಡೆದಿದ್ದೀರಿ. ಜೈನ ಧರ್ಮ ಶ್ರೇಷ್ಠ ಮತ್ತು ಸರ್ವೋತ್ತಮವಾದುದು. ಧರ್ಮದ ಮೂಲವನ್ನು ಕಾಪಾಡಿಕೊಂಡು ಹೋಗಬೇಕಿದೆ ಎಂದು ಚರ್ಯಾಶಿರೋಮಣಿ ಮುನಿಶ್ರೀ 108 ವಿಧಿತಸಾಗರ ಮಹಾರಾಜರು ಸಲಹೆ ನೀಡಿದರು.
ನಗರದ ರಜನಿ ಸಭಾಂಗಣದಲ್ಲಿ ಆಯೋಜಿಸಿರುವ ಬೃಹತ್ ಸಿದ್ದಚಕ್ರ ಮಹಾಮಂಡಲದ ವಿಧಾನ ಮಹೋತ್ಸವದ ಆರನೇ ದಿನವಾದ ಬುಧವಾರ ಜೈನ ಮಹಿಳಾ ಸಮಾವೇಶದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಜೈನ ಸಮುದಾಯದ ಶ್ರಾವಕಿಯರು ಪ್ರತಿದಿನ ಜಿನ ದರ್ಶನ ಪಾಲಿಸುವ ಜತೆಗೆ ಕುಲಾಚಾರ ಕುರಿತು ಮಕ್ಕಳಿಗೆ ಕಲಿಸಿ ಕೊಡಬೇಕು. ಲೌಖಿಕ ಶಿಕ್ಷಣ, ಲೌಖಿಕ ಸಂಸ್ಕಾರ ಕೊಡಿಸುವುದರ ಮುಖಾಂತರ ಸಮಾಜದ ಪರಿವರ್ತನೆಗೆ ಮಹತ್ವ ನೀಡಬೇಕು ಎಂದರು.
ಪ್ರತಿ ಊರಲ್ಲಿಯೂ ವಿಶೇಷ ವಿಧಾನಗಳನ್ನು ಆಯೋಜಿಸಿ, ಶ್ರಾವಕ ಸಂಸ್ಕಾರಗಳನ್ನು ಕೊಡುವ ಶಿಬಿರಗಳನ್ನು ನಡೆಸಬೇಕು. ಕೇವಲ ಮಂತ್ರಗಳನ್ನು ನಡೆಸುವ ಶಿಬಿರ ನಡೆಸದೇ ಜೈನ ತತ್ವಗಳನ್ನು ಪ್ರತಿಯೊಬ್ಬರಿಗೂ ತಿಳಿಸುವ ಕಾರ್ಯವಾಗಬೇಕು. ಜೈನ ಧರ್ಮ ಸರಳ ಧರ್ಮವಾಗಿದೆ. ಧರ್ಮದ ಮೂಲವಾದರೂ ತಿಳಿಸುವ ಕೆಲಸ ಆಗಬೇಕು. ಮುಸ್ಲಿಂ, ಸಿಖ್, ಹಿಂದೂ ಎಲ್ಲ ಸಮಾಜದವರು ಲೌಕಿಕ ಶಿಕ್ಷಣಕ್ಕೆ ಆದ್ಯತೆ ಕೊಟ್ಟಂತೆ ಜೈನ ಧರ್ಮಕ್ಕೂ ಆದ್ಯತೆ ನೀಡಬೇಕು. ಧರ್ಮದ ಸಂಸ್ಕಾರ, ಸಂಸ್ಕೃತಿಗೆ ಮೊದಲ ಪ್ರಾತಿನಿಧ್ಯ ಕೊಡಬೇಕಿದೆ ಎಂದರು.
ದೇವೆಂದ್ರಕೀರ್ತಿ ಭಟ್ಟಾರಕ ಆಚಾರ್ಯರು ಮಾತನಾಡಿ, ಬೃಹತ್ ಸಿದ್ದ ಚಕ್ರದಲ್ಲಿ ಜೈನಧರ್ಮದ ಆಗಮ ಪರಿಚಯವಾಗುತ್ತದೆ. ಸಮಾಜ ಉಳಿದರೆ ಧರ್ಮವೂ ಉಳಿಯುತ್ತದೆ. ಧರ್ಮ ಸಂಸ್ಕಾರ, ಆಚಾರ ವಿಚಾರಗಳನ್ನು ಸಮಾಜದ ಸಭೆಯಲ್ಲಿ ಚರ್ಚೆ ಮಾಡಿದ್ದಾಗ ಆತ್ಮ ಪರೀಕ್ಷೆ ಮಾಡಿಕೊಂಡಾಗ ಮಾತ್ರ ಸಮಾಜ ಒಳ್ಳೆಯ ರೀತಿಯಲ್ಲಿ ನಡೆಯುತ್ತದೆ ಎಂದರು.
ಹರ್ಷಾ ನಾಗರಾಜ ಜೈನಮುನಿಗಳ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿದರು. ದಾವಣಗೆರೆ ಅಖಿಲ ಕರ್ನಾಟಕ ಮಹಿಳಾ ಒಕ್ಕೂಟ ಅಧ್ಯಕ್ಷೆ ಪದ್ಮಾ ಪ್ರಕಾಶ ದೀಪ ಪ್ರಜ್ವಲನೆ ನೆರವೇರಿಸಿದರು. ಸಿದ್ಧಚಕ್ರ ಆರಾಧನಾ ಮಹೋತ್ಸವ ಸಮಿತಿ ಅಧ್ಯಕ್ಷೆ ಸುಜಾತಾ ನಡುವಿನಮನಿ ಅಧ್ಯಕ್ಷತೆ ವಹಿಸಿದ್ದರು.
ಬೆಂಗಳೂರಿನ ಡಾ.ನೀರಜಾ ನಾಗೇಂದ್ರಕುಮಾರ ಪ್ರಸಕ್ತ ಸಾಮಾಜಿಕ ಅಭಿವೃದ್ಧಿಯಲ್ಲಿ ಜೈನ ಮಹಿಳೆಯರ ಪಾತ್ರದ ಕುರಿತು ಹಾಗೂ ಶ್ರವಣಬೆಳಗೊಳ ಬಾಹುಬಲಿ ಪ್ರಾಕೃತ ವಿದ್ಯಾಪೀಠದ ನಿವೃತ್ತ ಪ್ರಾಕೃತ ಪ್ರಾಧ್ಯಾಪಕಿ ಡಾ.ಕುಸುಮಾ ಪ್ರಕಾಶ, ಜೈನ ನೋಂಪಿಗಳ ಮಹತ್ವದ ಕುರಿತು ಉಪನ್ಯಾಸ ನೀಡಿದರು.
ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯೆ ಪರಿಮಳಾ ಜೈನ, ತುಮಕೂರಿನ ಬ್ರಹ್ಮಚಾರಿಣಿ ಜಲಜಾ, ಗೋಕಾಕ ಮಹಿಳಾ ಒಕ್ಕೂಟದ ಉಪಾಧ್ಯಕ್ಷೆ ಚಂದಾ ಶೋಲಾಪುರೆ, ಬೆಳ್ಳೂರಿನ ಲಲಿತಾ ಪ್ರಸನ್ನ ಕುಮಾರ, ಹುಬ್ಬಳ್ಳಿಯ ತ್ರಿಶಲಾ ಮಾಲಗಿತ್ತಿ, ತೀರ್ಥಹಳ್ಳಿಯ ಡಾ. ಜೀವೇಂದರ ಜೈನ ಹಾಗೂ ಬೆಳಗಾವಿಯ ಲಲಿತಾ ಮಗದುಮ್, ಬಬಿತಾ ಕಾರ್ಗಲ್, ಮಹಾಲಕ್ಷ್ಮೀ ಪ್ರಮೋದಕುಮಾರ, ಚಂದ್ರಕಲಾ ಜೈನ, ವರ್ಷಾ ಹೂಲಿ, ಶ್ರೀದೇವಿ ದುಂಡಸಿ, ವಿನೋದಾ ಜೈನ, ಪ್ರೇಮಾ ಸಾತಗೊಂಡ, ಉಷಾ ಕಳಸೂರ, ಪದ್ಮಾ ಮಾಣಿಕಚಂದ ಲಾಡರ, ಆರತಿ ಹಜಾರಿ, ಸ್ವರೂಪ ಉಪಾಧ್ಯೆ, ಬಬಿತಾ ದೊಡ್ಡಮನಿ, ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net