ಹುಕ್ಕೇರಿ ಮಠದ ಶ್ರೀಗಳ ಅದ್ಧೂರಿ ಮೆರವಣಿಗೆ; ನಮ್ಮೂರ ಜಾತ್ರೆಯಲ್ಲಿ ಕಲಾತಂಡಗಳ ಮೆರುಗು

Hukkeri matha
Hukkeri matha
Published on
ಹಾವೇರಿ: ನಗರದ ಪ್ರಸಿದ್ಧ ಹುಕ್ಕೇರಿ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ನಗರದಲ್ಲಿ ಮಂಗಳವಾರ ಶ್ರೀ ಶಿವಬಸವ ಸ್ವಾಮೀಜಿ ಹಾಗೂ ಶ್ರೀ ಶಿವಲಿಂಗ ಸ್ವಾಮೀಜಿಯವರ ಭಾವಚಿತ್ರದ ಬೃಹತ್ ಮೆರವಣಿಗೆ ಹಾಗೂ ರಥೋತ್ಸವ ಅದ್ಧೂರಿಯಾಗಿ ಜರುಗಿತು.
ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಬೃಹತ್ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಪುರವಂತಿಕೆ ಕಲಾತಂಡ, ಸಮಾಳ, ಐರಣಿ ಮಠದ ಆನೆ, ರಾಣೆಬೆನ್ನೂರ ಹನುಮಾನ್ ಬ್ಯಾಂಡ್, ಹುಲಿವೇಷ, ನಂದಿಕೋಲು ಕುಣಿತ, ತುಮಕೂರಿನ ಸಮಾಳ, ವೀರಗಾಸೆ, ತಾಳ-ಮೇಳ, ಜಾಂಜ್ ಮೇಳ, ವಿವಿಧ ಸ್ತಬ್ಧ ಚಿತ್ರಗಳು, ಭಜಂತ್ರಿ, ಡೊಳ್ಳು ಕುಣಿತ, ಮತ್ತಿತರ ಜನಪದ ಕಲಾತಂಡಗಳು ಭಾಗವಹಿಸುವ ಮೂಲಕ ಜಾತ್ರೆಯ ಮೆರುಗು ಹೆಚ್ಚಿಸಿದವು.
ಹುಕ್ಕೇರಿ ಮಠದಿಂದ ಆರಂಭವಾಗಿ ಎಂ.ಜಿ.ರೋಡ್, ಸುಭಾಸ ಸರ್ಕಲ್, ಹಳೆ ಅಂಚೆ ಕಚೇರಿ ರಸ್ತೆ, ದೇಸಾಯಿ ಗಲ್ಲಿ, ರೈತರ ಓಣಿ, ಗಾಂಧೀ ವೃತ್ತ, ದೊಡ್ಡ ಬಸವಣ್ಣ ದೇವಸ್ಥಾನ ರಸ್ತೆ, ದ್ಯಾಮವ್ವನ ಪಾದಗಟ್ಟಿ, ಅಕ್ಕಿಪೇಟೆ, ಯಾಲಕ್ಕಿ ಓಣಿ, ಪುರಸಿದ್ದೇಶ್ವರ ಓಣಿ, ಅಕ್ಕಮಹಾದೇವಿ ವೃತ್ತದ ಮೂಲಕ ಶ್ರೀಮಠ ತಲುಪಿತು. ದಾರಿಯುದ್ದಕ್ಕೂ ಭಕ್ತರು ರಂಗೋಲಿ ಬಿಡಿಸಿ, ರಥಕ್ಕೆ ಪುಷ್ಪ ಸಿಂಚನಗೈದು, ಹಣ್ಣು, ಕಾಯಿಗಳನ್ನು ಸಮರ್ಪಿಸಿದರು. ಮೆರವಣಿಗೆಗೆ ಬಂದ ಭಕ್ತರಿಗೆ ಕೆಲವೆಡೆ ಅಲ್ಪ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
ಉದ್ಘಾಟನೆ ಸಂದರ್ಭದಲ್ಲಿ ಶೇಗುಣಸಿಯ ಡಾ.ಮಹಾಂತಪ್ರಭು ಸ್ವಾಮೀಜಿ, ಮಾದನಹಿಪ್ಪರಗಿಯ ಅಭಿನವ ಶಿವಲಿಂಗ ಸ್ವಾಮೀಜಿ, ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ, ಮಾಜಿ ಶಾಸಕರಾದ ಶಿವರಾಜ ಸಜ್ಜನರ, ನೆಹರು ಓಲೇಕಾರ, ಕೊಟ್ರೇಶಪ್ಪ ಬಸೇಗೆಣ್ಣಿ, ಕಿರಣ ಕೊಳ್ಳಿ, ಇತರ ಗಣ್ಯರು, ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net