ಸದ್ಭಾವನೆ ಮೂಡಿಸದ ಹುಕ್ಕೇರಿ ಮಠದ ಪಾದಯಾತ್ರೆ; ಸಮಾರೋಪ ಸಮಾರಂಭದಲ್ಲಿ ಮೂರುಸಾವಿರ ಮಠದ ಜಗದ್ಗುರುಗಳ ಹೇಳಿಕೆ

Hukkeri matha Jatre
Hukkeri matha Jatre
Published on
ಹಾವೇರಿ: ಬಡವ, ಶ್ರೀಮಂತ, ಮೇಲ್‌ವರ್ಗ, ಕೆಳವರ್ಗ ಎಂಬ ಭೇದವನ್ನು ಅರಿಯದೇ ದುರ್ಗುಣ ಅಳಿದು ಸದ್ಗುಣ ಬೆಳೆಸಿದ ಹುಕ್ಕೇರಿಮಠದ ಶ್ರೀ ಸದಾಶಿವ ಸ್ವಾಮೀಜಿಯವರ ಪಾದಯಾತ್ರೆ ಭಕ್ತರ ಮನ ಸೆಳೆದು ಸದ್ಭಾವನೆ ಮೂಡಿಸಿದೆ ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಡಾ.ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಪ್ರಶಂಸೆ ವ್ಯಕ್ತಪಡಿಸಿದರು.
ಇಲ್ಲಿನ ವಿದ್ಯಾನಗರ ಪಶ್ಚಿಮ ಬಡಾವಣೆಯ ಪ್ರಕೃತಿ ಉದ್ಯಾನ ವನದಲ್ಲಿ ಸೋಮವಾರ ಆಯೋಜಿಸಿದ್ದ ಪಾದಯಾತ್ರೆ ಕಾರ್ಯಕ್ರಮದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ನಮ್ಮ ನಾಡಿನ ಯಾವುದೇ ಭಾಗಕ್ಕೆ ಹೋದರೂ ಸದಾಶಿವ ಸ್ವಾಮೀಜಿ ಭಕ್ತಿಯ ಪ್ರವಾಹ ಸೃಷ್ಟಿಸುತ್ತಾರೆ. ಅವರ ಗುಣವೇ ಶಿವಸ್ವರೂಪಿಯಾದ್ದು. ತಮ್ಮ ಪ್ರೇರಕ ಶಕ್ತಿಯ ಪರಿಣಾಮ ಭಕ್ತರ ಮನೆ-ಮನಗಳಿಗೆ ಆಗಮಿಸಿದ್ದಾರೆ. ನಮ್ಮ ಪಾಪವನ್ನು ನಾವೇ ಕಳೆದುಕೊಳ್ಳಬೇಕು. ಆದರೆ ಕೆಟ್ಟ ಹವ್ಯಾಸಗಳಿಗೆ ಅಂಟಿಕೊಂಡಿರುವ ಜನರಿಂದ ದುಶ್ಚಟ ಭಿಕ್ಷೆ ಬೇಡುತ್ತಿದ್ದಾರೆ. ಜತೆಗೆ ಪರಮಾತ್ಮನ ಬಳಿ ಸದಾಚಾರ ನೀಡುವಂತೆ ಕೇಳುತ್ತಿದ್ದಾರೆ. ಈ ಐತಿಹಾಸಿಕ ಘಳಿಗೆಗೆ ತಮ್ಮ ಆಪ್ತ ಗೆಳೆಯರನ್ನು ಮತ್ತು ಶಿಷ್ಯ ಸಮೂಹವನ್ನು ತಮ್ಮೊಂದಿಗೆ ಕರೆದುಕೊಂಡು ಬಂದಿದ್ದಾರೆ ಎಂದರು.
ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, 63 ಮಠಗಳಿರುವ ಹಾವೇರಿಗೆ ಮರಿ ಕಲ್ಯಾಣ ಎಂಬ ಪ್ರತೀತಿ ಇದೆ. ಸೌಹಾರ್ದ ಹಾಗೂ ಸದ್ಭಾವದಿಂದ ಕೂಡಿದ ಈ ಪಾದಯಾತ್ರೆಯ ಉದ್ದೇಶವೇ ಮನಸ್ಸುಗಳನ್ನು ಕೂಡಿಸುವುದು. ಜತೆಗೆ ದುಶ್ಚಟಗಳಿಂದ ಜನರನ್ನು ದೂರ ಮಾಡಿ ಸಾಮಾಜಿಕ ಮನ್ನಣೆ ಪಡೆಯುವಂತೆ ಮಾಡುವುದು. ಈ ಸತ್ಕಾರ್ಯಕ್ಕೆ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿದ ಶ್ರೇಯಸ್ಸು ಶ್ರೀಮಠದ ಭಕ್ತರಿಗೆ ಸಲ್ಲುತ್ತದೆ. ಭಾವನಾತ್ಮಕ ಬೆಸುಗೆ ಬೆಸೆದ ಈ ಪಾದಯಾತ್ರೆ ಐತಿಹಾಸಿಕ ಘಳಿಗೆಗೆ ಸಾಕ್ಷಿಯಾಗಿದೆ ಎಂದರು.
ಹುಕ್ಕೇರಿಮಠದ ಸದಾಶಿವ ಸ್ವಾಮೀಜಿಯವರ ನೇತೃತ್ವದಲ್ಲಿ ದುಶ್ಚಟಗಳ ಭಿಕ್ಷೆ-ಸದ್ಗುಣಗಳ ದೀಕ್ಷೆ ಜನ ಜಾಗೃತಿ ಯಾತ್ರೆ ಹೆಸರಿನಡಿ ನವೆಂಬರ್ 6ರಿಂದ ಬ್ಯಾಡಗಿ ತಾಲೂಕಿನ ಮಲ್ಲೂರು ಗ್ರಾಮದಿಂದ ಆರಂಭವಾದ ಪಾದಯಾತ್ರೆ ಸೋಮವಾರ ಸಮಾರೋಪಗೊಂಡಿತು. 45 ದಿನಗಳ ಕಾಲ ಹಾವೇರಿ ತಾಲೂಕಿನ 75 ಹಳ್ಳಿಗಳಲ್ಲಿ ಹಾಗೂ ಹಾವೇರಿ ನಗರದ 31 ವಾರ್ಡ್‌ಗಳಲ್ಲಿ ಸಂಚರಿಸಿತು. ಇದರ ಸ್ಮರಣಾರ್ಥ ವಿದ್ಯಾನಗರ ಪಶ್ಚಿಮದಲ್ಲಿನ ಪ್ರಕೃತಿ ಉದ್ಯಾನದಲ್ಲಿ ಆಲದಮರ ಹಾಗೂ ಬೇವಿನಮರಗಳ ಸಸಿ ನೆಡಲಾಯಿತು. ನಂತರ ಸ್ವಾಮೀಜಿಯವರ ಪಾದಪೂಜೆ ನೆರವೇರಿಸಲಾಯಿತು.
ಶೇಗುಣಸಿ ವಿರಕ್ತಮಠದ ಡಾ.ಮಹಾಂತಪ್ರಭು ಸ್ವಾಮೀಜಿ ಮಾತನಾಡಿದರು. ನಾಡಿನ ವಿವಿಧ ಭಾಗದ ಶ್ರೀಗಳು, ಸ್ಥಳೀಯರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಭಕ್ತರು ಓಣಿಯಯನ್ನು ತಳಿರು ತೋರಣಗಳಿಂದ, ರಂಗೋಲಿ ಚಿತ್ತಾರಗಳಿಂದ ಶೃಂಗರಿಸಿದ್ದರು. ಸುಮಂಗಲೆಯರು ಕುಂಭ ಹೊತ್ತು ಶ್ರೀಗಳೊಂದಿಗೆ ಹೆಜ್ಜೆ ಹಾಕಿದ್ದರು.
ಶಿವಾಜಿ ನಗರದ ವಡ್ಡಮ್ಮ ದೇಗುಲದಿಂದ ಆರಂಭವಾದ ಪಾದಯಾತ್ರೆ ವಿದ್ಯಾನಗರ ಪಶ್ಚಿಮದಲ್ಲಿನ ವಿವಿಧ ವಾರ್ಡುಗಳಿಗೆ ಸಂಚರಿಸಿತು. ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ, ಚನ್ನಮ್ಮ ಬ್ಯಾಡಗಿ, ರಾಘವೇಂದ್ರ ಬಾಸೂರ, ನಿಂಗಣ್ಣ ಪೂಜಾರ, ಗುರುರಾಜ ಕಲಾಲ, ಸೌಭಾಗ್ಯ ಹಿರೇಮಠ, ಲಲಿತಾ ಗುಂಡೇನಹಳ್ಳಿ, ರೋಹಿಣಿ ಪಾಟೀಲ, ಮುಖೇಶ ಮುಂದಿನಮನಿ, ಜಗದೀಶ ಕನವಳ್ಳಿ, ದಾನೇಶಪ್ಪ ಕೆಂಗೊಂಡ, ಶಿವಬಸವ ವನಹಳ್ಳಿ, ಇತರರು ಪಾಲ್ಗೊಂಡಿದ್ದರು.
ಮಲ್ಲಿಕಾರ್ಜುನ ಹಾವೇರಿ ಸ್ವಾಗತಿಸಿದರು. ವೀರಬಸವ ದೇವರು ನಿರೂಪಿಸಿದರು.
ಚಟ ಹೋಮ ಡಿ.24ರಂದು
ಡಿ.24ರಂದು ಹುಕ್ಕೇರಿ ಮಠದ ಎದುರು ಬೀಡಿ, ಸಿಗರೇಟ್ ಹಾಗೂ ಸಾರಾಯಿ ಪಾಕೀಟುಗಳನ್ನು ಸುಡುವ ಮೂಲಕ ಚಟ ಹೋಮ ಮಾಡಲಾಗುವುದು. ದುರ್ಗುಣ ಸುಟ್ಟು ಸದ್ಗುಣ ಬೆಳೆಸುವುದೇ ಈ ಹೋಮದ ಉದ್ದೇಶ. ವ್ಯಸನಮುಕ್ತ ಸಮಾಜ ನಿರ್ಮಿಸುವುದೇ ನಮ್ಮ ಒಟ್ಟಾರೆ ಆಶಯವಾಗಿದೆ ಎಂದು ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net