ಹುಕ್ಕೇರಿ ಮಠದ ಐತಿಹಾಸಿಕ ಜಾತ್ರೆಗೆ ಸಾಕ್ಷಿಯಾಗಿ; ಭಕ್ತರಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಮನವಿ; 25ರಿಂದ 30ರವರೆಗೆ ವಿಶೇಷ ಕಾರ್ಯಕ್ರಮ ಆಯೋಜನೆ

hukkeri math, jatre,
hukkeri math, jatre,
Published on

ಪ್ರಮುಖ ಮುಖ್ಯಾಂಶಗಳು

  • ಹುಕ್ಕೇರಿ ಮಠದ ಜಾತ್ರಾ ಮಹೋತ್ಸವ
  • ಡಿ.25ರಿಂದ 30ರವರೆಗೆ ನಗರದಲ್ಲಿ ವಿಶೇಷ ಕಾರ್ಯಕ್ರಮ
  • ಐತಿಹಾಸಿಕ ಜಾತ್ರೆಗೆ ಲಕ್ಷಾಂತರ ಭಕ್ತರು ಸಾಕ್ಷಿಯಾಗಬೇಕು
  • ಜಾತ್ರಾ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ, ಸಂಸದ ಬಸವರಾಜ ಬೊಮ್ಮಾಯಿ ಮನವಿ
ಹಾವೇರಿ: ಉತ್ತರ ಕರ್ನಾಟಕದ ಪ್ರಸಿದ್ಧ ಮಠಗಳಲ್ಲಿ ಒಂದಾದ ಹುಕ್ಕೇರಿ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಡಿ.25ರಿಂದ 30ರವರೆಗೆ ನಗರದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಈ ಐತಿಹಾಸಿಕ ಜಾತ್ರೆಗೆ ಲಕ್ಷಾಂತರ ಭಕ್ತರು ಸಾಕ್ಷಿಯಾಗಬೇಕು ಎಂದು ಜಾತ್ರಾ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರೂ ಆಗಿರುವ, ಸಂಸದ ಬಸವರಾಜ ಬೊಮ್ಮಾಯಿ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ನಗರದ ಹುಕ್ಕೇರಿ ಮಠದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಹುಕ್ಕೇರಿಮಠದ ಜಾತ್ರಾ ಮಹೋತ್ಸವ ಅತ್ಯಂತ ವಿಶೇಷವಾಗಿದೆ. ಶ್ರೀಮಠದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸುವರ್ಣ ಮಹೋತ್ಸವ, ಪ್ರಸಾದ ನಿಲಯದ ಅಮೃತ ಮಹೋತ್ಸವ, ಪ್ರಸಾದ ನಿಲಯದ ಹಳೆಯ ವಿದ್ಯಾರ್ಥಿಗಳ ಸಂಘದ ಸುವರ್ಣ ಮಹೋತ್ಸವ, ಶಿವಬಸವ ಜಾನುವಾರು ಜಾತ್ರೆಯ ಸುವರ್ಣ ಮಹೋತ್ಸವ ಹಾಗೂ ಸದಾಶಿವ ಶ್ರೀಗಳ 15ನೇ ವರ್ಷದ ಪಟ್ಟಾಧಿಕಾರದ ನೆನಪಿಗಾಗಿ ಬೆಳ್ಳಿ ತುಲಾಭಾರ ಕಾರ್ಯಕ್ರಮದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜಾತ್ರಾ ಮಹೋತ್ಸವಕ್ಕೆ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ವಿ.ಸೋಮಣ್ಣ, ಸಂಸದ ಯದುವೀರ್ ಒಡೆಯರ್, ಸೇರಿ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಶೇಗುಣಿಸಿಯ ಡಾ.ಮಹಾಂತಪ್ರಭು ಸ್ವಾಮೀಜಿ ಮಾತನಾಡಿ, ಜಾತ್ರೆ ನಿಮಿತ್ತ ಶ್ರೀಗಳು ಈಗಾಗಲೇ ಅನೇಕ ಹಳ್ಳಿಗಳಲ್ಲಿ ಪಾದಯಾತ್ರೆ ನಡೆಸಿ ‘ದುಶ್ಚಟಗಳ ಬಿಕ್ಷೆ ಸುದ್ಗುಣಗಳ ದೀಕ್ಷೆ’ ಅಭಿಯಾನ ನಡೆಸಿದ್ದಾರೆ. ಡಿ.21ರಂದು ಜಿಲ್ಲಾ ಕ್ರೀಡಾಂಗಣದಿಂದ 6 ಸಾವಿರ ಮಹಿಳೆಯರು ಕೇಸರಿ, ಬಿಳಿ, ಹಸಿರು ಬಣ್ಣದ ಸೀರೆಯುಟ್ಟು ಬುತ್ತಿ ಗಂಟು ಹೊತ್ತು ಶ್ರೀಮಠಕ್ಕೆ ಮೆರವಣಿಗೆ ಆಯೋಜಿಸಲಾಗಿದೆ. ರಕ್ತದಾನ, ನೇತ್ರದಾನ, ಆರೋಗ್ಯ ಮೇಳಗಳು, ಸೇರಿದಂತೆ ಹತ್ತಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಹುಕ್ಕೇರಿಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಡಿ.25ರಂದು ಅಧ್ಯಾತ್ಮಿಕ ಪ್ರವಚನ ಮಂಗಲೋತ್ಸವ, ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭ ಹಾಗೂ ಮಹಿಳಾ ಗೋಷ್ಠಿ, ಡಿ.26ರಂದು ಬೆಳಗ್ಗೆ 10.30ಕ್ಕೆ ಶ್ರೀ ಶಿವಬಸವ ಜಾನುವಾರು ಜಾತ್ರೆಯ ಸುವರ್ಣ ಮಹೋತ್ಸವದ ನಿಮಿತ್ತ ಕೃಷಿಮೇಳ ಹಾಗೂ ಜಾನುವಾರು ಜಾತ್ರೆ, ಸಂಜೆ 6.30ಕ್ಕೆ ಪ್ರಸಾದ ನಿಲಯದ ವಜ್ರ ಮಹೋತ್ಸವ, ರಜತ ಮಹೋತ್ಸವ ನಡೆಯಲಿದೆ. ಡಿ.27ರಿಂದ 29ರವರೆಗೆ ಶ್ರೀಮಠದಲ್ಲಿ ಪುಷ್ಪ ಪ್ರದರ್ಶನ ನಡೆಯಲಿದೆ ಎಂದರು.
ಡಿ.27ರಂದು ಮಧ್ಯಾಹ್ನ 4 ಗಂಟೆಗೆ ಯುವ ಸಮಾವೇಶ, 51 ಸಾವಿರ ಶರಣ ಸದ್ಭಕ್ತರಿಂದ ವಚನವಂದನ ಗುರುವಂದನ ಸಮಾರಂಭ, ಡಿ.28ಕ್ಕೆ ಹುಕ್ಕೇರಿಮಠ ಶಿವಬಸವೇಶ್ವರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಮಾವೇಶ ಹಾಗೂ ಗುರುವಂದನಾ ಸಮಾರಂಭ, ಸಂಜೆ 6.30ಕ್ಕೆ ಉಭಯ ಶಾಲೆಗಳ ಶಾಲೆಗಳ ಸುವರ್ಣ ಮಹೋತ್ಸವ ಸಮಾರಂಭ, ಡಿ.29ರಂದು ರಜತ ತುಲಾಭಾರ ಹಾಗೂ ಸಮಾರೋಪ ಸಮಾರಂಭ ಜರುಗಲಿದೆ. ಡಿ.30ರಂದು ಶ್ರೀಮಠದ ಜಾತ್ರಾ ಮಹೋತ್ಸವ ವೈಭವದಿಂದ ನಡೆಯಲಿದೆ ಎಂದರು.
ವಿಧಾನಸಭಾ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ, ಮಣಕವಾಡದ ಅಭಿನವ ಮೃತುಂಜಯ್ಯ ಸ್ವಾಮೀಜಿ, ಪ್ರಮುಖರಾದ ಪಿ.ಡಿ.ಶಿರೂರ, ರಾಜಶೇಖರ ಮಾಗನೂರ, ಮಹೇಶ ಚಿನ್ನಿಕಟ್ಟಿ, ಮಲ್ಲಿಕಾರ್ಜುನ ಹಾವೇರಿ, ಮತ್ತಿತರರು ಇದ್ದರು.
ಬಾಕ್ಸ್
ಉಚಿತ ಪ್ರಸಾದ ನಿಲಯಕ್ಕೆ ಬೆಳ್ಳಿ ಬಳಕೆ
ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿಯವರು ಹಳ್ಳಿ ಹಳ್ಳಿಗಳಲ್ಲಿ ಧರ್ಮಜಾಗೃತಿ ಮಾಡುತ್ತಿದ್ದಾರೆ. ದುಶ್ಚಟಗಳಿಂದ ಜನರನ್ನು ವಿಮುಕ್ತಿಗೊಳಿಸುವ ಕಾರ್ಯ ಮಾಡುತ್ತಿದ್ದಾರೆ. ಈ ಮೂಲಕ ಸಮಾಜ ಶುದ್ದೀಕರಣದ ಕ್ರಾಂತಿಯನ್ನೇ ಮಾಡುತ್ತಿದ್ದಾರೆ. ಗುರುಗಳು ಜಾತ್ರೆ ವೇಳೆ ನಡೆಯುವ ತಮ್ಮ ಬೆಳ್ಳಿ ತುಲಾಭಾರದಲ್ಲಿ ಬರುವ ಬೆಳ್ಳಿಯನ್ನು ಮಕ್ಕಳ ಉಚಿತ ಪ್ರಸಾದ ನಿಲಯದ ಕಟ್ಟಡ ನಿರ್ಮಾಣಕ್ಕೆ ಬಳಸುವುದಾಗಿ ಘೋಷಿಸಿದ್ದಾರೆ. ಎಲ್ಲವನ್ನೂ ಸಮಾಜಕ್ಕೆ ಅರ್ಪಿಸುವ ಮೂಲಕ ನಿಜಶರಣರು ಎನಿಸಿಕೊಂಡಿದ್ದಾರೆ. ಭವಿಷ್ಯದಲ್ಲಿ ಹುಕ್ಕೇರಿ ಮಠ ಉತ್ತರ ಕರ್ನಾಟಕಕ್ಕೆ ಕಿರೀಟಪ್ರಾಯವಾಗಲಿದೆ. ಜನಕಲ್ಯಾಣದ ಕ್ರಾಂತಿ ಮಾಡಲಿದೆ. ವೈಚಾರಿಕ, ಸಾಮಾಜಿಕ ಕ್ರಾಂತಿ ಇಲ್ಲಿ ನಿರಂತರವಾಗಿ ನಡೆಯಲಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net