ಹಾವೇರಿ: ರಾಜ್ಯ ಪುಸ್ತಕ ಪ್ರಾಧಿಕಾರದ ಮಹತ್ವದ ಯೋಜನೆಯಾದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಿತಿಯಿಂದ ಹೊಸರಿತ್ತಿಯಲ್ಲಿ ಬುಧವಾರ ಒಂದೇ ದಿನ ಮೂರು ಗ್ರಂಥಾಲಯಗಳ ಅನುಷ್ಠಾನದ ಜತೆಗೆ ದೇಣಿಗೆ ರೂಪದಲ್ಲಿ ಪುಸ್ತಕಗಳನ್ನು ಸಂಗ್ರಹಿಸುವ ಪುಸ್ತಕ ಜೋಳಿಗೆ ಎಂಬ ವಿನೂತನ ಯೋಜನೆಗೆ ಚಾಲನೆ ನೀಡಲಾಯಿತು.
ಹಾವೇರಿ ಜಿಲ್ಲಾ ಮನೆಗೊಂದು ಗ್ರಂಥಾಲಯ ಜಾಗೃತಿ ಸಮಿತಿಯಿಂದ ಹೊಸರಿತ್ತಿಯಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಅಲ್ಲಾದ್ದೀನ್ ಎಂ. ಕರ್ಜಗಿ, ಮತ್ತೋರ್ವ ನಿವೃತ್ತ ಪ್ರಾಧ್ಯಾಪಕ ಬಸವರಾಜ ಎಸ್. ಯಾವಗಲ್ ಹಾಗೂ ಶಿಕ್ಷಕ ಚಂದ್ರಶೇಖರ ಎಸ್. ಮರಳಿಹಳ್ಳಿ ಅವರುಗಳ ಮನೆಯಲ್ಲಿ ಗ್ರಂಥಾಲಯಗಳನ್ನು ಅನುಷ್ಠಾನಗೊಳಿಸಲಾಯಿತು.
ಮೂರೂ ಮನೆಗಳ ಮಾಲೀಕರಿಗೆ ಅಭಿನಂದನಾ ಪತ್ರ, ಐವತ್ತು ಪುಸ್ತಕಗಳ ಕಟ್ಟು ನೀಡಿ, ಸನ್ಮಾನಿಸಲಾಯಿತು.
ಡಾ.ಲಕ್ಷ್ಮೀಕಾಂತ ಮಿರಜಕರ ಮಾತನಾಡಿ, ಮನೆಯಲ್ಲಿ ಗ್ರಂಥಾಲಯ ಆರಂಭಿಸುವುದರಿಂದ ಪುಸ್ತಕ ಸಂಸ್ಕೃತಿ ಬೆಳೆಸಿದಂತೆ. ಕುಟುಂಬದಲ್ಲಿನ ಸಂಬಂಧಗಳು ಯಾಂತ್ರೀಕರಣಗೊಳ್ಳುತ್ತಿರುವ ಈ ದಿನಮಾನಗಳಲ್ಲಿ ಜೀವ ಚೈತನ್ಯ ತುಂಬುವ ಭಾವನಾತ್ಮಕ ಕುಟುಂಬ ವಾತಾವರಣವನ್ನು ನಿರ್ಮಾಣ ಮಾಡಲು ಗ್ರಂಥಾಲಯಗಳು ಸಹಕಾರಿ ಎಂದರು.
ಪುಸ್ತಕ ಜೋಳಿಗೆ ಜಿಲ್ಲಾ ಸಂಚಾಲಕ ಎಸ್.ಆರ್.ಹಿರೇಮಠ ಮಾತನಾಡಿ, ಮನೆಗಳಲ್ಲಿ ಇರುವ ಹೆಚ್ಚವರಿ ಪುಸ್ತಕಗಳು, ಓದಿ ಮುಗಿಸಿದ ಸುಸ್ಥಿತಿಯಲ್ಲಿರುವ ಪುಸ್ತಕಗಳನ್ನು ಜೋಳಿಗೆಯಲ್ಲಿ ಹಾಕಿ ಪುಸ್ತಕ ಪ್ರೇಮಿಗಳು ಮುಂಬರುವ ದಿನಗಳಲ್ಲಿ ಅನುಷ್ಠಾನಗೊಳ್ಲಲಿರುವ ಗ್ರಂಥಾಲಯಗಳಿಗೆ ಪುಸ್ತಕ ದೇಣಿಗೆ ನೀಡಬೇಕೆಂದು ಕೋರಿದರು.