ಗುರು ಬಲ ಇದ್ದವರಿಗೆ ಉನ್ನತ ಸ್ಥಾನಮಾನ; ಗುರು ಪೂರ್ಣಿಮೆ ಸಮಾರಂಭದಲ್ಲಿ ಹೊಸಮಠದ ಶ್ರೀಗಳ ಹೇಳಿಕೆ

haveri, Hosamatha, Guru Purnima, Utsava,
haveri, Hosamatha, Guru Purnima, Utsava,
Published on
ಹಾವೇರಿ: ಗುರು ಬಲ ಹಾಗೂ ಮಾರ್ಗದರ್ಶನದಿಂದ ಉನ್ನತ ಸ್ಥಾನಮಾನ ಮತ್ತು ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು.
ನಗರದ ಶ್ರೀ ಹೊಸಮಠದಲ್ಲಿ ಬುಧವಾರ ಆಯೋಜಿಸಿದ್ದ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಭಕ್ತರಿಂದ ಗುರುವಂದನೆ ಸ್ವೀಕರಿಸಿ ಅವರು ಆಶೀರ್ವಚನ ನೀಡಿ, ಮಾತನಾಡಿದರು.
ರಾಮಾಯಣ-ಮಹಾಭಾರತ ಕಾಲದಿಂದಲೂ ಪುರಾಣ ಮತ್ತು ಜಗತ್ತಿನ ಇತಿಹಾಸ ನೋಡಿದಾಗ, ರಾಜ, ಮಹಾರಾಜರು ತಮ್ಮ ಸಾಮ್ರಾಜ್ಯದಲ್ಲಿ ಯಾವುದೇ ಶುಭ ಕಾರ್ಯ ಮಾಡಬೇಕಾದರೆ ಗುರುವಿನ ಆಶೀರ್ವಾದ ಮತ್ತು ಮಾರ್ಗದರ್ಶನ ಪಡೆದುಕೊಂಡು ಮುನ್ನಡೆಯುತ್ತಿದ್ದರು. ಅಜ್ಞಾನದಿಂದ- ಜ್ಞಾನದೆಡೆಗೆ, ಕತ್ತಲೆಯಿಂದ- ಬೆಳಕಿನೆಡೆಗೆ, ಭಯದಿಂದ- ನಿರ್ಭಯದೆಡೆಗೆ ಕರೆದುಕೊಂಡು ಹೋಗುವ ಶಕ್ತಿ, ಗುರು ಶಕ್ತಿ ಮಾತ್ರ ಎಂದರು.
ಗುರು ಸಂಸ್ಕೃತಿಗೆ ಹಾಗೂ ಪರಂಪರೆಗೆ ಹೆಚ್ಚಿನ ಮಹತ್ವವಿದೆ. ಭಕ್ತಿ, ಶ್ರದ್ದೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದರೆ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ಹರ ಮುನಿದರೂ ಗುರು ಕಾಯುವನು ಎಂಬ ನುಡಿಯಂತೆ, ಗುರು ಪಥದಿಂದ ಬದುಕು ಉಜ್ವಲವಾಗಲಿದೆ. ಶ್ರದ್ಧೆ, ಭಕ್ತಿಯ ಮಾರ್ಗದರ್ಶನ ಎಲ್ಲರೂ ಮೈಗೂಡಿಸಿಕೊಳ್ಳಲಿ ಎಂದು ಕರೆ ನೀಡಿದರು.
ಶ್ರೀಮಠದ ಭಕ್ತ ರುದ್ರೇಶ ಚಿನ್ನಣ್ಣನವರ ಮಾತನಾಡಿ, ಗುರುಬಲ ಎಲ್ಲ ಬಲಕ್ಕಿಂತ ಶ್ರೇಷ್ಠವಾಗಿದೆ. ಪ್ರತಿಯೊಬ್ಬರಿಗೂ ಗುರು ಪ್ರಭಾವ ಆಗಿರುತ್ತದೆ. ಗುರು ಆರ್ಶಿವಾದ ಮಾರ್ಗದರ್ಶನ ಸದುಪಯೋಗ ಪಡಿಸಿಕೊಳ್ಳಲು ನಾವೆಲ್ಲರೂ ಮುಂದಾಗೋಣ ಎಂದರು.
ನಿವೃತ್ತ ಅಧಿಕಾರಿ ಮಹಾದೇವಪ್ಪ ಕುಮ್ಮೂರ ಮಾತನಾಡಿದರು.
ಶ್ರೀಮಠದ ಭಕ್ತರಾದ ಪರಶುರಾಮ ಹರ್ಲಾಪುರ, ಜಯದೇವ ಕೆರೂಡಿ, ಉಡಚಪ್ಪ ಮಾಳಗಿ, ಸೋಮಣ್ಣ ಸವೂರ, ಎ,ಎಚ್.ಕಬ್ಬಿಣಕಂತಿಮಠ, ನಿಂಗಪ್ಪ ಆರೇರ, ಹೊನ್ನಪ್ಪ ಅಗಸಿಬಾಗಿಲ, ಅಮೀರಜಾನ್ ಬೇಪಾರಿ, ಶಾಹಿದ್ ದೇವಿಹೊಸೂರ, ಮಂಜಣ್ಣ ಗಾಜಿಗೌಡ್ರ, ಹೇಮಾವತಿ ಹರ್ಲಾಪುರ, ನವೀದ್ ಅಮ್ಮಿನಭಾವಿ, ಮಾಲತೇಶ ಆನವಟ್ಟಿ, ಗಣೇಶ ಎಚ್, ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net