ಹಾವೇರಿ ಹೋಳಿ ಹಬ್ಬ ಫೆ.27ರಿಂದ ಮಾ.4ರವರೆಗೆ; ಸೋಗಿನ ಬಂಡಿ, ಕಾಮ- ರತಿ ಪ್ರತಿಷ್ಠಾನ, ನಗೆ ಹಬ್ಬ ಕಾರ್ಯಕ್ರಮ ಆಯೋಜನೆ

haveri, holi habba,
haveri, holi habba,
Published on
ಹಾವೇರಿ: ಹೋಳಿ ಹಬ್ಬದ ಆಚರಣೆಯಲ್ಲಿ ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿರುವ ಮರಿ ಕಲ್ಯಾಣ ಖ್ಯಾತಿಯ ಹಾವೇರಿ ನಗರದಲ್ಲಿ ಫೆ.27ರಿಂದ ಮಾ.4ರವರೆಗೆ ಹೋಳಿ ಹಬ್ಬ ಆಚರಿಸಲಿದ್ದು, ಪ್ರತಿದಿನ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಾವೇರಿ ಹೋಳಿ ಹಬ್ಬ ಸಮಿತಿ ಅಧ್ಯಕ್ಷ ವೀರಪ್ಪ ಹೇರೂರ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾವೇರಿಯ ರತಿ-ಕಾಮದೇವ ಸಾಂಸ್ಕೃತಿಕ ಸಂಘ ಹಾಗೂ ವಿವಿಧ ಕಾಮ-ರತಿ ಸಮಿತಿಗಳ ಸಹಯೋಗದಲ್ಲಿ ಫೆ.27ರಂದು ಸಂಜೆ ನಗರದಲ್ಲಿ ರತಿ-ಕಾಮನ ಪ್ರತಿಷ್ಠಾಪನೆ ನಡೆಯಲಿದೆ. ಫೆ.28ರಂದು ಸಂಜೆ 7ಕ್ಕೆ ನಗರದ ಹಾನಗಲ್ಲ ರಸ್ತೆಯಲ್ಲಿರುವ ಎಪಿಎಂಸಿ ಮಾರುಕಟ್ಟೆಯಲ್ಲಿ ‘ಮಂದ್ಯಾಗ ಮಲ್ಲಿ ಸಂದ್ಯಾಗ ಗಿಲ್ಲಿ’ ಹೆಸರಿನ ಬೆಳದಿಂಗಳ ನಗೆ ಹಬ್ಬ ಜರುಗಲಿದೆ. ಜಿಲ್ಲಾ ಕಲಾ ಬಳಗದ ಕೆ.ಆರ್.ಹಿರೇಮಠ ಮತ್ತು ತಂಡದಿಂದ ಹಾಸ್ಯ ಕಾರ್ಯಕ್ರಮ ನಡೆಯಲಿದೆ. ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ ಚಾಲನೆ ನೀಡಲಿದ್ದಾರೆ ಎಂದರು.
ಮಾ.2ರಂದು ರಾತ್ರಿ 7ಗಂಟೆಗೆ ನಗರದ ಸುಭಾಸ ವೃತ್ತದಲ್ಲಿ ಜೀವಂತ ಕಾಮ-ರತಿ ನಗಿಸುವ ಸ್ಪರ್ಧೆ ಜರುಗಲಿದೆ. ನಂತರ ಸಂಗೀತಾ ಕಮತಗಿ ಇವರಿಂದ ಜೋಗತಿ ನೃತ್ಯ ನಡೆಯಲಿದ್ದು, ಈ ಕಾರ್ಯಕ್ರಮವನ್ನು ಮಾಜಿ ಶಾಸಕ ನೆಹರು ಓಲೇಕಾರ ಉದ್ಘಾಟಿಸಲಿದ್ದಾರೆ. ಮಾ.3ರಂದು ಬೆಳಗ್ಗೆ ಗೌಡರು, ತಹಸೀಲ್ದಾರ್, ನಗರದ ಪ್ರಮುಖರೊಂದಿಗೆ ಹಳೇ ಚಾವಡಿ ಬಳಿ ಚಾವಡಿ ಕಾಮಣ್ಣನ ಪ್ರತಿಷ್ಠಾಪನೆ ನಡೆಯಲಿದೆ. ಸಂಜೆ 7ಕ್ಕೆ ನಗರದ ಎಂ.ಜಿ ರಸ್ತೆಯ ಪ್ಯಾಟಿ ಬಸವಣ್ಣ ದೇವರ ದೇವಸ್ಥಾನದಲ್ಲಿ ಅಡ್ಡ ಸೋಗಿನ ಸ್ಪರ್ಧೆಗೆ ಚಾಲನೆ ನೀಡಲಾಗುತ್ತದೆ ಎಂದರು.
ಮಾ.4ರಂದು ಹರಿಜನ ಓಣಿಯಿಂದ ಬೆಂಕಿ ಕೆಂಡ ತಂದು ಕಾಮದಹನ ಮಾಡಲಾಗುವುದು. ಮಧ್ಯಾಹ್ನ 12ಕ್ಕೆ ಮುನ್ಸಿಪಲ್ ಹೈಸ್ಕೂಲ್ ರಸ್ತೆಯ ಶ್ರೀ ಆಂಜನೇಯ ದೇವಸ್ಥಾನ ಮುಂಭಾಗದಲ್ಲಿ (ಸುವರ್ಣ ಬ್ಯಾಂಕ್ ಎದುರಿಗೆ) ಚಡ್ಡಿದೋಸ್ತ್ ಬಳಗದಿಂದ ರೇನ್ ಡಾನ್ಸ್ ಕಾರ್ಯಕ್ರಮ ನಡೆಯಲಿದೆ. ಎಲ್ಲ ಕಾರ್ಯಕ್ರಮಗಳಲ್ಲಿ ನಗರದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೋರಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಶಿವರಾಜ ಮತ್ತಿಹಳ್ಳಿ, ಶಂಭುಲಿಂಗ ಹತ್ತಿ, ಕರಬಸಪ್ಪ ಹಲಗಣ್ಣನವರ, ಬಸವರಾಜ ಜಾಬೀನ, ವಿಜಯಕುಮಾರ ಕೂಡ್ಲಪ್ಪನವರ, ಶಿವಲಿಂಗಪ್ಪ ಕಲ್ಯಾಣಿ, ಕಿರಣ ಕೊಳ್ಳಿ, ಹನುಮಂತಪ್ಪ ತಳವಾರ, ಇತರರಿದ್ದರು.
3 ಸಾವಿರ ರೂ. ಪ್ರೋತ್ಸಾಹಧನ
ಹಿಂದಿನಿಂದ ಬಂದ ಸಂಪ್ರದಾಯ ಮುಂದುವರಿಸಿಕೊಂಡು ಬಂದಿದ್ದೇವೆ. ಮೊಬೈಲ್ ಹಾವಳಿಯಲ್ಲಿ ನಶಿಸಿ ಹೋಗುತ್ತಿರುವ ಸೋಗಿನ ಬಂಡಿ ಮೆರವಣಿಗೆ ಉಳಿಸಬೇಕಿದೆ. ಪ್ರತಿದಿನವೂ ಸಂಜೆ ನಗರದ ಆಯಾ ಭಾಗದಲ್ಲಿ ಸೋಗಿನ ಬಂಡಿ ಮೆರವಣಿಗೆ ನಡೆಯಲಿದೆ. ಸೋಗನ್ನು ಹಾಕುವ ಸೋಗಿನ ಬಂಡಿಗಳಿಗೆ 5 ಸಾವಿರ ರೂ., ಅಡ್ಡ ಸೋಗು ಹಾಕುವ ಪ್ರತಿ ಕಲಾವಿದರಿಗೆ 500 ರೂ. ಹಾಗೂ ಹೋಳಿ ರಂಗಪಂಚಮಿಯಂದು ಹೂಡುವ ಓಕಳಿ ಬಂಡಿಗೆ ಪ್ರಾಯೋಜಕರಿಂದ 3 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುವುದು ಎಂದು ಹಾವೇರಿ ಹೋಳಿ ಆಚರಣೆ ಸಮಿತಿ ಉಪಾಧ್ಯಕ್ಷ ವಿಜಯಕುಮಾರ ಚಿನ್ನಿಕಟ್ಟಿ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net