ಹಿಮ್ಸ್‌ನಲ್ಲಿ ಸ್ನಾತಕೋತ್ತರ ಅಧ್ಯಯನಕ್ಕೆ ಅಸ್ತು; ಪ್ರಸಕ್ತ ವರ್ಷ ಸಿಕ್ತು 17 ಪಿಜಿ ಸೀಟು; ಜಿಲ್ಲೆಯ ರೋಗಿಗಳು, ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಸಹಕಾರಿ

HIMS
HIMS
Published on

ಪ್ರಮುಖ ಮುಖ್ಯಾಂಶಗಳು

  • ಹಾವೇರಿ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯ
  • ಮೊದಲ ಬಾರಿಗೆ 17 ಸ್ನಾತಕೋತ್ತರ ಪದವಿ (ಪಿಜಿ) ಸೀಟುಗಳ ಹಂಚಿಕೆ
  • ಹಿಮ್ಸ್‌ನ ವಿದ್ಯಾರ್ಥಿಗಳು ಸೇರಿದಂತೆ ಜಿಲ್ಲೆಯ ರೋಗಿಗಳ ಚಿಕಿತ್ಸೆಗೆ ಸಹಕಾರಿ
ಹಾವೇರಿ: ಹಾವೇರಿ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯ (ಹಿಮ್ಸ್)ಕ್ಕೆ ನ್ಯಾಶನಲ್ ಮೆಡಿಕಲ್ ಕಮಿಷನ್ (ಎನ್‌ಎಂಸಿ) ಮೊದಲ ಬಾರಿಗೆ 17 ಸ್ನಾತಕೋತ್ತರ ಪದವಿ (ಪಿಜಿ) ಸೀಟುಗಳನ್ನು ಹಂಚಿಕೆ ಮಾಡಿದೆ. ಇದರಿಂದ ಹಿಮ್ಸ್‌ನ ವಿದ್ಯಾರ್ಥಿಗಳು ಸೇರಿದಂತೆ ಜಿಲ್ಲೆಯ ರೋಗಿಗಳ ಚಿಕಿತ್ಸೆಗೆ ಸಹಕಾರಿಯಾಗಲಿದೆ.
ಜಿಲ್ಲೆಯಲ್ಲಿ 2022-23ರ ಶೈಕ್ಷಣಿಕ ವರ್ಷದಲ್ಲಿ ಆರಂಭವಾದ ಬಳಿಕ ಹಿಮ್ಸ್‌ಗೆ ಇದೇ ಮೊದಲ ಬಾರಿಗೆ ಈ ಅವಕಾಶ ಒದಗಿ ಬಂದಿದೆ. ಈ ವರ್ಷ ರಾಜ್ಯದ ಸರ್ಕಾರಿ ಮೆಡಿಕಲ್ ಕಾಲೇಜ್‌ಗಳಿಗೆ 422 ಪಿಜಿ ಸೀಟುಗಳು ನಿಗದಿಯಾಗಿದ್ದು, ಅದರಲ್ಲಿ 17 ಸೀಟುಗಳು ಹಾವೇರಿ ಮೆಡಿಕಲ್ ಕಾಲೇಜ್‌ಗೆ ಒದಗಿ ಬಂದಿವೆ. ಈ ಮೂಲಕ 2022ರಲ್ಲಿ ಆರಂಭವಾಗಿರುವ ಹಾವೇರಿ, ಯಾದಗಿರಿ, ಚಿಕ್ಕಬಳ್ಳಾಪುರ ಹಾಗೂ ಚಿತ್ರದುರ್ಗ ಕಾಲೇಜ್‌ಗಳಲ್ಲೇ ಹಾವೇರಿ ಕಾಲೇಜ್‌ಗೆ ಅತಿ ಹೆಚ್ಚು ಸೀಟುಗಳು ಲಭಿಸಿರುವುದು ವಿಶೇಷ ಎನ್ನಬಹುದು.
ಹಿಮ್ಸ್ ಕ್ಯಾಂಪಸ್‌ನಲ್ಲಿ ಸದ್ಯ 600 ಎಂಬಿಬಿಎಸ್ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದೀಗ ಜನರಲ್ ಮೆಡಿಸಿನ್ ವಿಭಾಗದಲ್ಲಿ 4, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗಕ್ಕೆ 4, ಶರೀರಶಾಸ್ತ್ರಕ್ಕೆ 3, ಜೀವರಸಾಯನಶಾಸ್ತ್ರ ವಿಭಾಗಕ್ಕೆ 3 ಹಾಗೂ ವಿಧಿವಿಜ್ಞಾನ ಔಷಧ ವಿಭಾಗಕ್ಕೆ 3 ಪಿಜಿ ಸೀಟುಗಳು ಹಂಚಿಕೆಯಾಗಿವೆ.
ಪಿಜಿ ಸೀಟುಗಳನ್ನು ಹಿಮ್ಸ್‌ಗೆ ಹಂಚಿಕೆ ಮಾಡಿದ್ದರಿಂದ ಇಲ್ಲಿನ ಜಿಲ್ಲಾಸ್ಪತ್ರೆಗೆ ಉಂಟಾಗಿರುವ ವೈದ್ಯರ ಕೊರತೆಯನ್ನು ಸ್ವಲ್ಪ ಮಟ್ಟಿಗೆ ನೀಗಿಸಬಹುದು. ಜಿಲ್ಲೆಯ ರೋಗಿಗಳಿಗೆ ಅಗತ್ಯವಾದ ಚಿಕಿತ್ಸೆ, ತಪಾಸಣೆ ಸೌಲಭ್ಯ ಹೆಚ್ಚಿಸಲು ಇದು ಸಹಕಾರಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
2023-24ರಲ್ಲಿ ದೇವಗಿರಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ಕ್ಯಾಂಪಸ್‌ನಲ್ಲಿ ತಾತ್ಕಾಲಿವಾಗಿ ಆರಂಭಗೊಂಡ ಹಿಮ್ಸ್ ತರಗತಿಗಳು ಇದೀಗ ಹಾವೇರಿ ಹೊರವಲಯ ದೇವಗಿರಿ ಯಲ್ಲಾಪುರದ ಸ್ವಂತ ಕ್ಯಾಂಪಸ್‌ನಲ್ಲಿ ಆರಂಭವಾಗಿವೆ. ಸುಸಜ್ಜಿತವಾದ ಕಟ್ಟಡದಲ್ಲಿ ಎಂಬಿಬಿಎಸ್ ತರಗತಿಗಳು ಆರಂಭಗೊಂಡಿದ್ದು, ಉದ್ಘಾಟನೆಗಾಗಿ ಕ್ಯಾಂಪಸ್ ಕಾಯುತ್ತಿದೆ.
ಶೀಘ್ರವೇ ಕೌನ್ಸೆಲಿಂಗ್
ಪಿಜಿ ಸೀಟುಗಳ ಹಂಚಿಕೆ ಪ್ರಕ್ರಿಯೆ ಶೀಘ್ರವೇ ಆರಂಭವಾಗಲಿದ್ದು, ಕೌನ್ಸೆಲಿಂಗ್ ಮುಖಾಂತರ ಹಾವೇರಿ ಮೆಡಿಕಲ್ ಕಾಲೇಜ್‌ಗೆ ಸೀಟುಗಳ ಹಂಚಿಕೆ ಪ್ರಕ್ರಿಯೆ ನಡೆಯಲಿದೆ ಎಂದು ಹಿಮ್ಸ್‌ನ ಹಿರಿಯ ಉಪನ್ಯಾಸಕರೊಬ್ಬರು ತಿಳಿಸಿದರು.
ಕೋಟ್:
ಹಾವೇರಿ ಮೆಡಿಕಲ್ ಕಾಲೇಜ್‌ಗೆ 17 ಪಿಜಿ ಸೀಟುಗಳನ್ನು ಎನ್‌ಎಂಸಿ ಮೊದಲ ಬಾರಿಗೆ ಹಂಚಿಕೆ ಮಾಡಿರುವುದರಿಂದ ನಮ್ಮಲ್ಲಿ ಆಸ್ಪತ್ರೆಯ ಸೇವೆಗಳನ್ನು ಅಭಿವೃದ್ಧಿಗೊಳಿಸಲು ಸಹಕಾರಿಯಾಗಲಿದೆ. ರೋಗಿಗಳ ತಪಾಸಣೆ, ಶಸ್ತ್ರಚಿಕಿತ್ಸೆ, ತುರ್ತು ಚಿಕಿತ್ಸೆ ಸೇರಿದಂತೆ ಇತರ ಚಿಕಿತ್ಸೆಗಳಿಗೆ ಸಹಕಾರಿಯಾಗಲಿದೆ.
- ಡಾ.ಪ್ರದೀಪಕುಮಾರ, ಡೀನ್, ಹಿಮ್ಸ್
ನೇಮಕಾತಿ ಪ್ರಕ್ರಿಯೆ ಅಂತಿಮ ಘಟಕ್ಕೆ
ಹಿಮ್ಸ್‌ನಲ್ಲಿ ಒಟ್ಟು 202 ಉಪನ್ಯಾಸಕರ ಹುದ್ದೆಗಳು ಮಂಜೂರಾಗಿದ್ದು, ಸದ್ಯ 114 ಉಪನ್ಯಾಸಕರು ಕಾಯಂ ಹಾಗೂ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 88 ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ. ಇದರಲ್ಲಿ 68 ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಗೆ ಸರ್ಕಾರ ಆದೇಶಿಸಿತ್ತು. ನೇಮಕಾತಿ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದ್ದು, ಒಂದು ವಾರದೊಳಗೆ ಸಮಗ್ರ ಮಾಹಿತಿಯನ್ನು ಇಲಾಖೆಯ ಕಾರ್ಯದರ್ಶಿಗಳಿಗೆ ನೀಡಲಾಗುವುದು ಎಂದು ಹಿಮ್ಸ್ ಡೀನ್ ಡಾ.ಪ್ರದೀಪಕುಮಾರ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net