ಜಿಲ್ಲಾಸ್ಪತ್ರೆಗೆ ಬಂತು ಎಂಆರ್‌ಐ ಸ್ಕಾೃನಿಂಗ್ ಯಂತ್ರ; ನಿಟ್ಟುಸಿರು ಬಿಡಲಿದ್ದಾರೆ ಬಡ, ಮಧ್ಯಮ ವರ್ಗದ ರೋಗಿಗಳು; 15 ದಿನದಲ್ಲಿ ಕಾರ್ಯಾರಂಭ

Haveri, HIMS, District Hospital, MRI Scanning,
Haveri, HIMS, District Hospital, MRI Scanning,
Published on
ಹಾವೇರಿ: ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾಗಿದ್ದ ಎಂಆರ್‌ಐ ಸ್ಕಾೃನಿಂಗ್ ಯಂತ್ರ ಕೊನೆಗೂ ನಗರದ ಜಿಲ್ಲಾಸ್ಪತ್ರೆಗೆ ಬಂದಿದ್ದು, 15 ದಿನಗಳಲ್ಲಿ ಕಾರ್ಯಾರಂಭಕ್ಕೆ ಅಧಿಕಾರಿಗಳು ಸಿದ್ಧತ ನಡೆಸಿದ್ದಾರೆ.
ಎಂಆರ್‌ಐ ಸ್ಕಾೃನಿಂಗ್ ಸೇವೆ ಆರಂಭಿಸುವಂತೆ ಜಿಲ್ಲೆಯ ಬಡ ಮತ್ತ ಮಧ್ಯಮ ವರ್ಗದ ಜನತೆ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದರು. ಇನ್ನೇನು ಬಂದೇ ಬಿಡ್ತು ಎಂದು ಹಲವು ಸಲ ಸ್ಥಳೀಯ ಶಾಸಕರು, ಉಸ್ತುವಾರಿ ಸಚಿವರು ಹೇಳುತ್ತಲೇ ಇದ್ದರು. ಆದರೆ, ಬರುವುದು ಮಾತ್ರ ಖಚಿತವಾಗುತ್ತಿರಲಿಲ್ಲ. ಇದೀಗ ಹಿಂದಿನ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು ಹಾಗೂ ಹಿಮ್ಸ್ ಡೀನ್ ಡಾ.ಪ್ರದೀಪಕುಮಾರ ಅವರ ಪರಿಶ್ರಮದಿಂದ ಈ ಕನಸು ನನಸಾಗಿದೆ.
ಇದೀಗ ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಹಿಮ್ಸ್)ಯ ಜಿಲ್ಲಾಸ್ಪತ್ರೆಗೆ ಅತ್ಯಾಧುನಿಕ ಎಂಆರ್‌ಐ ಸ್ಕಾೃನಿಂಗ್ ಯಂತ್ರ ಬಂದಿದೆ. ಜಿಲ್ಲಾಸ್ಪತ್ರೆಯ ಕಿಸ್ನಾ ಡಯಾಗ್ನೋಸ್ಟಿಕ್ ಸ್ಕಾೃನಿಂಗ್ ಯಂತ್ರಗಳ ಪಕ್ಕದಲ್ಲೇ ಎಂಆರ್‌ಐ ಯಂತ್ರ ಅಳವಡಿಸುವ ಕಾರ್ಯ ನಡೆದಿದೆ. ಈಗಾಗಲೇ ಇದಕ್ಕಾಗಿ ಇಬ್ಬರು ತಂತ್ರಜ್ಞರನ್ನು ನೇಮಿಸಲಾಗಿದೆ. 15 ದಿನಗಳಲ್ಲಿ ಸೇವೆ ಆರಂಭಿಸುವ ನಿರೀಕ್ಷೆ ಇದೆ. ಈ ಮೂಲಕ ಜಿಲ್ಲೆಯ ಜನತೆಗೆ ಸ್ಥಳೀಯವಾಗಿಯೇ ಉನ್ನತ ದರ್ಜೆಯ ಸ್ಕ್ಯಾನಿಂಗ್ ಸೌಲಭ್ಯ ಇನ್ನು ಮುಂದೆ ಲಭ್ಯವಾಗಲಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಈ ಹೈಟೆಕ್ ಯಂತ್ರ ಪೂರೈಕೆಯಾಗಿದೆ.
ಈ ಮೊದಲು ಎಂಆರ್‌ಐ ಸ್ಕ್ಯಾನಿಂಗ್ ಮಾಡಿಸಲು ಹುಬ್ಬಳ್ಳಿಯ ಕಿಮ್ಸ್, ದಾವಣಗೆರೆ ಅಥವಾ ಖಾಸಗಿ ಡಯಾಗ್ನೋಸ್ಟಿಕ್ ಕೇಂದ್ರಗಳಿಗೆ ಹೋಗಬೇಕಿತ್ತು. ಜಿಲ್ಲಾಸ್ಪತ್ರೆಯಿಂದ ಚಿತ್ರದುರ್ಗ ಆಸ್ಪತ್ರೆಗೆ ರೆಫರ್ ಮಾಡಲಾಗುತ್ತಿತ್ತು. ಇದರಿಂದ ಆರ್ಥಿಕ ಹೊರೆಯ ಜತೆಗೆ ಸಮಯದ ವ್ಯರ್ಥಕ್ಕೂ ಕಾರಣವಾಗಿತ್ತು. ಜನರ ಅಲೆದಾಟಕ್ಕೂ ಕಾರಣವಾಗುತ್ತಿತ್ತು. ಇದೀಗ ಹಾವೇರಿ ಮೆಡಿಕಲ್ ಕಾಲೇಜ್ ಆರಂಭವಾದ ಮೇಲೆ, ಜಿಲ್ಲಾಸ್ಪತ್ರೆ ಉನ್ನತೀಕರಣದ ಜತೆಗೆ ಎಂಆರ್‌ಐ ಸೌಲಭ್ಯವೂ ದೊರೆಯುತ್ತಿರುವುದು ಸಂತಸದ ವಿಚಾರವಾಗಿದೆ. ಇನ್ನು ಮುಂದೆ ಅತ್ಯಂತ ಕಡಿಮೆ ದರದಲ್ಲಿ ಅಥವಾ ಉಚಿತವಾಗಿ ಸ್ಥಳೀಯವಾಗಿಯೇ ಸ್ಕ್ಯಾನಿಂಗ್ ಸೌಲಭ್ಯ ಸಿಗಲಿದೆ. ಇದರಿಂದಾಗಿ ಜಿಲ್ಲೆಯ ಬಡ ಮತ್ತು ಮಧ್ಯಮ ವರ್ಗದ ಜನತೆ, ರೋಗಿಗಳು ನಿಟ್ಟುಸಿರು ಬಿಡಲಿದ್ದಾರೆ. ಬಾಕ್ಸ್ ದಿನಕ್ಕೆ 50 ವರದಿ ಆರಂಭಿಕ ಹಂತದಲ್ಲಿ ದಿನಕ್ಕೆ 40ರಿಂದ 50 ಸ್ಕ್ಯಾನಿಂಗ್ ವರದಿಗಳನ್ನು ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಕಿಸ್ನಾ ಏಜೆನ್ಸಿಗೆ ಪ್ರಸ್ತಾವನೆ ನೀಡುವಂತೆ ಹಿಮ್ಸ್ ನಿರ್ದೇಶಕರು ಸೂಚಿಸಿದ್ದಾರೆ. ಸದ್ಯ ಸ್ಕಾೃನಿಂಗ್ ಸೇವೆ ಒದಿಸುತ್ತಿರುವ ರೇಡಿಯಾಲಜಿಸ್ಟ್ ಡಾ.ಮಲ್ಲಿಕಾರ್ಜುನ ಅವರೇ ಎಂಆರ್‌ಐ ಸೇವೆ ಒದಗಿಸಲಿದ್ದಾರೆ. ವೈದ್ಯಕೀಯ ಶಿಕ್ಷಣ ಇಲಾಖೆಯ ಸಕಾಲಿಕ ಕ್ರಮದಿಂದಾಗಿ ಹಾವೇರಿ ಜಿಲ್ಲಾಸ್ಪತ್ರೆಗೆ ಈ ಹೈಟೆಕ್ ಕಳೆ ಬಂದಿದೆ. ಇನ್ನು ಮುಂದೆ ಅಪಘಾತ ಅಥವಾ ಇತರೆ ತುರ್ತು ಸಂದರ್ಭಗಳಲ್ಲಿ ರೋಗ ನಿರ್ಣಯ ಮಾಡುವುದು ವೈದ್ಯರಿಗೂ ಸುಲಭವಾಗಲಿದೆ.
"

ಎಂಆರ್‌ಐ ಸ್ಕ್ಯಾನಿಂಗ್ ಯಂತ್ರ ಬಂದಿದ್ದು, ಜಿಲ್ಲಾಸ್ಪತ್ರೆಯಲ್ಲಿ ಅಳವಡಿಕೆ ಕಾರ್ಯ ಮಾಡಲಾಗುತ್ತಿದೆ. ಶೀಘ್ರದಲ್ಲೇ ಯಂತ್ರ ಉದ್ಘಾಟನೆ ಮಾಡಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಗುವುದು. ಇನ್ನು ಮುಂದೆ ಜಿಲ್ಲೆಯ ರೋಗಿಗಳಿಗೆ ಎಂಆರ್‌ಐ ಸ್ಕ್ಯಾನಿಂಗ್‌ಗಾಗಿ ಬೇರೆಡೆ ಅಲೆದಾಡುವುದು ತಪ್ಪಲಿದೆ.

— ಡಾ.ಪ್ರದೀಪಕುಮಾರ ಎಂ.ವಿ., ನಿರ್ದೇಶಕರು, ಹಿಮ್ಸ್


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net