ಹಾವೇರಿ: ತಾಲೂಕಿನ ಹೊಂಬರಡಿ ಗ್ರಾಮದ ಹಾಲು ಉತ್ಪಾದಕರ ಸಂಘದ ನೂತನ ಕಟ್ಟಡದ ಭೂಮಿ ಪೂಜೆಯನ್ನು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ(ಹಾವೆಮುಲ್)ದ ನಿರ್ದೇಶಕ ಬಸವೇಶಗೌಡ ಪಾಟೀಲ ಇತ್ತೀಚೆಗೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಕರ್ನಾಟಕ ಹಾಲು ಮಹಾಮಂಡಲದ ಅನುದಾನದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಒಕ್ಕೂಟದಿಂದ ರೈತರಿಗೆ ಹಾಗೂ ಸಂಘಕ್ಕೆ ಅಗತ್ಯ ಮೂಲ ಸೌಕರ್ಯ ಒದಗಿಸುವ ಕೆಲಸವನ್ನು ಮಾಡಲಾಗುತ್ತಿದೆ. ಶೀಘ್ರವಾಗಿ ಉತ್ತಮ ಗುಣಮಟ್ಟದ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ ಎಂದರು.
ಒಕ್ಕೂಟದ ವತಿಯಿಂದ ಹೊಸದಾಗಿ 80 ಸಂಘಗಳಲ್ಲಿ ಎಎಂಸಿಎಸ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಇದರ ಜತೆಗೆ ಉತ್ತಮ ಗುಣಮಟ್ಟದ ಹಾಲು ಶೇಖರಿಸಿ ರೈತರಿಗೆ ಗುಣಮಟ್ಟ ಪರೀಕ್ಷೆ ಮಾಡಿ, ಉತ್ತಮ ದರ ನೀಡುವ ಮೂಲಕ ಹೆಚ್ಚು ಹಾಲು ಶೇಖರಣೆ ಮಾಡಲು ಕ್ರಮ ತಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಒಕ್ಕೂಟದ ಹಾವೇರಿ ತಾಲೂಕು ವಿಸ್ತರಣಾಧಿಕಾರಿ ಪ್ರವೀಣ ಕರೇಗೌಡ್ರ, ಹನುಮೇಶ ಯಲ್ಲಾಪುರ, ಸಂಘದ ಅಧ್ಯಕ್ಷ ಶಿವರುದ್ರಗೌಡ ಚನ್ನಗೌಡರ, ಗ್ರಾಮದ ಪ್ರಮುಖರಾದ ಬಿ.ಸಿ.ಹುಡೇದ, ಜಂಬನಗೌಡ ಚನ್ನಗೌಡರ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕರಬಸನಗೌಡ ಶಿವನಗೌಡ್ರ, ಸಂಘದ ಹಾಲು ಉತ್ಪಾದಕರು ಮತ್ತು ಗ್ರಾಮಸ್ಥರು ಇದ್ದರು.