ಜಿಲ್ಲೆಯ ಯಾವುದೇ ಬಂಕ್‌ಗಳಲ್ಲಿ ತೈಲದ ಅಭಾವವಿಲ್ಲ. ಎಲ್ಲ ಕಡೆಯೂ ನಿಗದಿತ ಪ್ರಮಾಣದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಪೂರೈಕೆಯಾಗುತ್ತಿದೆ. ತಾಂತ್ರಿಕ ಕಾರಣದಿಂದ ಕೆಲವೆಡೆ ಟ್ಯಾಂಕರ್ ಪೂರೈಕೆಯಲ್ಲಿ ತಡವಾಗಿದೆ. ಕೆಲವೆಡೆ ಇಂಡೆಂಟ್ ತಡವಾಗಿದ್ದರಿಂದ ಪೂರೈಕೆಯಲ್ಲಿ ವಿಳಂಭವಾಗಿದೆ. ಮಂಗಳವಾರ ರಜೆ ಇದ್ದ ಕಾರಣ ಟ್ಯಾಂಕರ್ ಆಗಮಿಸುವುದು ವಿಳಂಭವಾಗಿತ್ತು. ಕೆಲ ಬಂಕ್‌ಗಳಲ್ಲಿ ತಾಂತ್ರಿಕ ಕಾರಣದಿಂದ ಟ್ಯಾಂಕರ್ ವಿಳಂಭವಾಗಿದೆ. ಕೆಲವೆಡೆ ಬ್ಯಾಂಕ್ ಖಾತೆಗೆ ಹಣ ಜಮೆ ಆಗುವಲ್ಲಿ ತಡವಾಗಿದ್ದರಿಂದ ಬಂದ್ ಆಗಿದ್ದವು. ಒಂದೆರೆಡು ದಿನದಲ್ಲಿ ಎಲ್ಲ ಕಡೆ ಪೆಟ್ರೋಲ್, ಡೀಸೆಲ್ ಲಭ್ಯವಾಗಲಿದೆ ಎಂದು ಆಹಾರ ಇಲಾಖೆ ಡಿಡಿ ಮಂಜುನಾಥ ಡಿ.ಜೆ. ‘ವಿಜಯವಾಣಿ’ಗೆ ತಿಳಿಸಿದರು. ಜಿಲ್ಲೆಯಲ್ಲಿ ಯುದ್ದದ ಎಫೆಕ್ಟ್ ಏನೂ ಆಗಿಲ್ಲ. ಇಂತಹ ಸುಳ್ಳು ಸುದ್ದಿ ಯಾರೂ ನಂಬಬೇಡಿ. ಅಗತ್ಯವಿದ್ದಷ್ಟು ಮಾತ್ರ ತೈಲ ಬಳಸಿಕೊಳ್ಳಿ. ನಾಲ್ಕರ ಕ್ರಾಸ್ ಹಾಗೂ ಗೊಂದಿ ಕ್ರಾಸ್‌ನಲ್ಲಿರುವ ಬಂಕ್‌ನಿಂದ, ತೈಲ ಪೂರೈಕೆದಾರರಿಗೆ ತಾಂತ್ರಿಕ ಕಾರಣದಿಂದ ಹಣ ಪಾವತಿಯಾಗಿಲ್ಲ. ಹಣ ಸಂದಾಯ ಮಾಡದಿದ್ದರಿಂದ, ಕಂಪನಿಯವರು ತೈಲ ಕಳುಹಿಸಿಲ್ಲ. ಸಂಗ್ರಹವಿದ್ದ ತೈಲ ಬೇಗನೇ ಖಾಲಿ ಆಗಿದೆ. ಹೀಗಾಗಿ, ಎರಡೂ ಬಂಕ್‌ಗಳು ಬಂದ್ ಆಗಿದ್ದವು. ಗುರುವಾರ ಆರಂಭವಾಗಲಿವೆ ಎಂದು ತಿಳಿಸಿದರು.