ಮನಸ್ಸು ಚಾಂಚಲ್ಯಕ್ಕೆ ಪುಸ್ತಕವೇ ಕಡಿವಾಣ ; ಲೇಖಕಿ ಸುರೇಖಾ ದತ್ತಾತ್ರೇಯ ಹೇಳಿಕೆ

Haveri, Hanagal, Manegondu Granthalaya,
Haveri, Hanagal, Manegondu Granthalaya,
Published on
ಹಾನಗಲ್ಲ: ಪುಸ್ತಕ ಪ್ರಾಧಿಕಾರ, ಮನೆಗೊಂದು ಗ್ರಂಥಾಲಯ ಜಿಲ್ಲಾ ಜಾಗೃತಿ ಸಮಿತಿ ವತಿಯಿಂದ ಇಲ್ಲಿಯ ಬಜಾರ್ ರೋಡ್‌ನಲ್ಲಿರುವ ಕಲಾವಿದ ರಾಮಕೃಷ್ಣ ಸುಗಂಧಿ ಅವರ ವಸ್ತ್ರ ಸಂಗ್ರಹಾಲಯದಲ್ಲಿ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಇತ್ತೀಚೆಗೆ ಅನುಷ್ಠಾನಗೊಂಡಿತು.
ಲೇಖಕಿ ಸುರೇಖಾ ದತ್ತಾತ್ರೇಯ ಕುಲಕರ್ಣಿ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದರು. ಮನಸ್ಸಿನ ಚಾಂಚಲ್ಯವನ್ನು ಹಿಡಿತದಲ್ಲಿ ತರಲು ಪುಸ್ತಕಗಳು ಬೇಕು. ಶಾಂತವಾಗಿ ಲೈಬ್ರರಿಯಲ್ಲಿ ಕುಳಿತು ಓದಿದಾಗ ಮನಸ್ಸು ಕೇಂದ್ರೀಕೃತವಾಗುತ್ತದೆ. ದಿನದ ಒಂದು ತಾಸು ಓದಿದರೆ ಎಲ್ಲರೂ ಸಮಾಧಾನಿಯಾಗಿರಬಹುದು. ಹಾಗಾಗಿ, ಗ್ರಂಥಾಲಯಗಳು ಪ್ರತಿ ಮನೆಯಲ್ಲಿರಬೇಕು ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ನಿವೃತ್ತ ಶಿಕ್ಷಕ ರಾಮಚಂದ್ರ ದೇಸಾಯಿ ಮಾತನಾಡಿ, 1919ರಲ್ಲಿ ಅ.ನ.ಕುಂದಾಪೂರ ಅವರು ಹಾನಗಲ್ಲ ತಾಲೂಕಿನಲ್ಲಿ ಗ್ರಂಥಾಲಯ ಚಳವಳಿ ಆರಂಭಿಸಿದ್ದರು. ಅವರಿಗೆ ಪ್ರೇರಣೆಯಾದದ್ದು ಗಳಗನಾಥರ ಕಾದಂಬರಿಗಳು. ಪುಸ್ತಕ ಆಂದೋಲನದ ಬಗ್ಗೆ ಮಾತುಗಳು ಬಂದಾಗ ಗಳಗನಾಥರ ಹೆಸರು ಬರಲೇಬೇಕು ಎಂದು ಹೇಳಿದರು.
ವಕೀಲೆ ಮಧುಲಿಕಾ ದೇಸಾಯಿ ಮಾತನಾಡಿ, ಕಾರಂತರ ಕಾದಂಬರಿ ಓದುವುದರಿಂದಲೇ ಮರಾಠಿ ನೆಲದಿಂದ ಬಂದ ನನಗೆ ಕರಾವಳಿಯ ಪರಿಚಯವಾಯಿತು. ಪುಸ್ತಕಗಳು ಮನೆ ಮಕ್ಕಳಿಗೆ ದಾರಿ ದೀಪಗಳಾಗುತ್ತವೆ ಎಂದರು.
ಜಿಲ್ಲಾ ಜಾಗೃತಿ ಸಮಿತಿಯ ಸಂಚಾಲಕ ಎಸ್.ಆರ್.ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಳಣ್ಣ ಸುಗಂಧಿ ಅವರಿಗೆ 50 ಪುಸ್ತಕಗಳನ್ನು ಗ್ರಂಥಾಲಯಕ್ಕೆ ನೀಡಿ ಸನ್ಮಾನಿಸಲಾಯಿತು. ಪ್ರತಿಯಾಗಿ ರಾಮಕೃಷ್ಣ ಸುಗಂಧಿ ಅವರು 100 ಪುಸ್ತಕಗಳನ್ನು ಜಾಗೃತಿ ಸಮಿತಿಗೆ ನೀಡಿದರು.
ಸಮಾರಂಭದಲ್ಲಿ ಹಿರಿಯ ಸಾಹಿತಿ ಡಾ.ಸತೀಶ ಕುಲಕರ್ಣಿ, ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ರಾಜು ಕಾಳೆ, ರಾಧಿಕಾ ದೇಸಾಯಿ, ಎಚ್.ಸುಧಾ, ಶಕುಂತಲಾ ಕನವಳ್ಳಿ, ದಿನೇಶ ಕುಲಕರ್ಣಿ, ನರಸಿಂಹ ಕೋಮಾರ, ಆರ್.ಸಿ.ದೇಸಾಯಿ, ಪ್ರಹ್ಲಾದ ಸಾಂಬ್ರಾಣಿ, ಗಜಾನನ ಧೊಂಗಡಿ, ನೀಲಮ್ಮ ರೂಗಿಶೆಟ್ಟರ, ವನಿತಾ ರೇವಡಿಗಾರ, ಮತ್ತಿತರರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net